ಬೆಳಗಾವಿ: ಪ್ರವರ್ಗ ‘2ಎ’ ಮೀಸಲಾತಿಗೆ ಒತ್ತಾಯಿಸಿ ಸುವರ್ಣಸೌಧದ ಬಳಿ ಪಂಚಮಸಾಲಿ ಸಮುದಾಯ ಭಾರಿ ಸಂಖ್ಯೆಯಲ್ಲಿ ಜಮಾಯಿಸಿದೆ. ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಪಾಲ್ಗೊಳ್ಳಲು ಜನಸಾಗರವೇ ಹರಿದುಬರುತ್ತಿದೆ. ವಿವಿಧ ಭಾಗಗಳಿಂದ ಆಗಮಿಸುತ್ತಿರುವ ನೂರಾರು ಟ್ರ್ಯಾಕ್ಟರ್ಗಳನ್ನು ಹಿರೇಬಾಗೇವಾಡಿ ಬಳಿಯೇ ತಡೆಯಲಾಗಿದೆ. ಈ ಪ್ರತಿಭಟನೆಯಲ್ಲಿ ೫೦೦೦ ಟ್ರ್ಯಾಕ್ಟರ್ ಗಳ ಮೂಲಕ ಭಾಗವಹಿಸಲು ಪಂಚಮಸಾಲಿ ಸಮುದಾಯದ ಜನರು ನಿರ್ಧರಿಸಿದ್ದರು. ಆದರೆ ಜಿಲ್ಲಾಡಳಿತ ನಿಷೇಧ ಹೇರಿತ್ತು, ಹಾಗಾಗಿ ಜನರು ಕಾಲ್ನಡಿಗೆ ಮೂಲಕವೇ ಪ್ರತಿಭಟನಾ ಸ್ಥಳದತ್ತ ಹೆಜ್ಜೆ ಹಾಕುತ್ತಿದ್ದಾರೆ. ರಾಜಕೀಯ ಮುಖಂಡರೂ ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದಾರೆ. ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.
ಬಸವಜಯ ಮೃತ್ಯುಂಜಯ ಸ್ವಾಮೀಜಿ ವೇದಿಕೆಗೆ ಆಗಮಿಸಿದ್ದಾರೆ. ಕಾರ್ಯಕರ್ತರು ಜೈಕಾರ ಹಾಕುತ್ತಿದ್ದಾರೆ. ಪಂಚಮಸಾಲಿ ಸಮುದಾಯದ ಹಿರಿಯ ನಾಯಕರು ವೇದಿಕೆಗೆ ಆಗಮಿಸುತ್ತಿದ್ದಾರೆ. ವಿಶೇಷವಾಗಿ ಬಿಜೆಪಿ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ.