ನವದೆಹಲಿ: ಪಾಕಿಸ್ತಾನದ ಎಲ್ಲಾ ದಾಳಿಗಳನ್ನು ಹಿಮ್ಮೆಟ್ಟಿಸಲಾಗಿದೆ. ಪಾಕ್ ಭಾರತದ ಸೇನಾ ನೆಲೆಗಳ ಮೇಲೆ ದಾಳಿಗೆ ಯತ್ನಿಸಿತ್ತು. ಪಾಕ್ ನ ಎಲ್ಲಾ ಕ್ಷಿಪಣಿಗಳನ್ನು ಧ್ವಂಸಗೊಳಿಸಲಾಗಿದೆ. ದೇಶದ ಮಿಲಿಟರಿ ಪೋಸ್ಟ್ ಮೇಲೆ ಪಾಕ್ ದಾಳಿ ಮಾಡಲು ನಡೆಸಿದ್ದ ಪ್ರಯತ್ನ ವಿಫಲವಾಗಿದೆ. ಪಾಕಿಸ್ತಾನದ ದ್ರೋಣ್ ದಾಳಿ ತಡೆಯುವಲ್ಲಿ ಭಾರತ ಯಶಸ್ವಿಯಾಗಿದೆ. ಪಾಕಿಸ್ತಾನ ಟರ್ಕಿ ಮೂಲದ ಡ್ರೋಣ್ ಬಳಸಿದೆ. ಭಾರತದ 36 ಸ್ಥಳಗಳ ಮೇಲೆ ದಾಳಿ ನಡೆಸಲು ಪ್ರಯತ್ನ ನಡೆಸಿತ್ತು ಎಂದು ಕರ್ನಲ್ ಸೋಫಿಯಾ ಖುರೇಶಿ ಮಾಹಿತಿ ನೀಡಿದ್ದಾರೆ. ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಭಾರತದ ಧಾರ್ಮಿಕ ಸ್ಥಳಗಳನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಪಾಕಿಸ್ತಾನ ಪ್ರತಿಪಾದಿಸುತ್ತಿದೆ. ಆದರೆ ಪಾಕ್ ಪಡೆಗಳು ಗುರುದ್ವಾರದ ಮೇಲೆ ದಾಳಿ ಮಾಡಿದ ಬಗ್ಗೆ ಸಾಕ್ಷಿ ಲಭ್ಯವಾಗಿದೆ. ಭಾರತೀಯ ಸೇನೆಯೇ ದಾಳಿ ಮಾಡಿದೆ ಎಂದು ಪಾಕಿಸ್ತಾನ ವಾದಿಸುತ್ತಿದೆ. ಭಟಿಂಡಾ ಸೇನಾ ನೆಲೆ ಮೇಲೆ ದಾಳಿಗೆ ನಡೆದ ಯತ್ನವೂ ವಿಫಲವಾಗಿದೆ. ಗಡಿನಿಯಂತ್ರಣ ರೇಖೆಯಿಂದ ಪಾಕಿಸ್ತಾನ ಶೆಲ್ ದಾಳಿ ಮಾಡುತ್ತಿದೆ. ಭಾರತದ ಪ್ರತಿದಾಳಿಯಿಂದ ಪಾಕಿಸ್ತಾನದಲ್ಲಿ ಭಾರೀ ಹಾನಿಯುಂಟಾಗಿದೆ ಎಂದು ಅವರು ವಿವರಣೆ ನೀಡಿದ್ದಾರೆ.
ಭಾರತದಲ್ಲಿನ ಸಹಿಷ್ಣುತೆಯನ್ನು ನೋಡಿ ಪಾಕಿಸ್ತಾನ ಚಿಂತಾಕ್ರಾಂತವಾಗಿದೆ. ಪಾಕಿಸ್ತಾನವು ಗುರುದ್ವಾರ, ಶಾಲೆ, ದೇವಾಲಯ ಗುರಿಯಾಗಿಸಿ ಶೆಲ್ ದಾಳಿ ಮಾಡಿದೆ. ಪೂಂಚ್ ನಲ್ಲಿ ಶಾಲೆಯ ಮೇಲೆ ದಾಳಿ ನಡೆದಿರುವುದು ಸಾಬೀತಾಗಿದೆ. ಧಾರ್ಮಿಕ ಕೋಮುವಾದ ಸೃಷ್ಟಿಸಲು ಪಾಕಿಸ್ತಾನ ಯತ್ನಿಸುತ್ತಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ತಿಳಿಸಿದರು.
ದೇಶದ ನಾಗರಿಕರನ್ನು ಗುರಿಯಾಗಿಸಿ ಹಲವು ನಗರಗಳ ಮೇಲೆ ದಾಳಿಗೆ ಯತ್ನಿಸಿತ್ತು. ಪಾಕ್ ನ ಎಲ್ಲಾ ಡ್ರೋಣ್ ಗಳನ್ನು ಹೊಡೆದುರುಳಿಸಿದ್ದೇವೆ. ಪಾಕ್ ನಿಂದ 300-400 ಡ್ರೋಣ್ ಮೂಲಕ ದಾಳಿಗೆ ಯತ್ನಿಸಿತ್ತು. ಗುರುವಾರ ರಾತ್ರಿ ಭಾರತದ ಹಲವು ನಗರಗಳ ಮೇಲೆ ಡ್ರೋನ್ ದಾಳಿಗೆ ಯತ್ನ ನಡೆದಿದೆ. ಡ್ರೋಣ್ ದಾಳಿ ವೇಳೆ ನಾಗರಿಕ ವಿಮಾನಗಳ ಹಾರಾಟ ಸ್ಥಗಿತಗೊಳಿಸಿರಲಿಲ್ಲ. ಭಾರತದ ಮೇಲಿನ ದಾಳಿಗೆ ನಾಗರಿಕ ವಿಮಾನಗಳನ್ನು ಪಾಕಿಸ್ತಾನ ಬಳಸಿಕೊಂಡಿದೆ ಎಂದು ವಿಕ್ರಮ್ ಮಿಶ್ರಿ ಆರೋಪಿಸಿದರು.
ಭಾರತದ ಪ್ರತೀಕಾರದ ದಾಳಿಯಲ್ಲಿ ಪಾಕಿಸ್ತಾನ ಸಾಕಷ್ಟು ನಷ್ಟ ಅನುಭವಿಸಿದೆ. ಭಾರತವು ಪಾಕ್ ನ 4 ಸ್ಥಳದ ಮೇಲೆ ದಾಳಿ ನಡೆಸಿ ಪ್ರತೀಕಾರ ತೀರಿಸಿಕೊಂಡಿದೆ. ಉಗ್ರರ ವಿರುದ್ಧ ಭಾರತದ ಹೋರಾಟಕ್ಕೆ ಅಮೆರಿಕ, ಬ್ರಿಟನ್ ಬೆಂಬಲ ನೀಡಿದೆ ಎಂದೂ ಅವರು ತಿಳಿಸಿದರು.