ಪೂಂಚ್: ಜಮ್ಮು ಮತ್ತು ಕಾಶ್ಮೀರದ ಪೂಂಚ್ ನಲ್ಲಿ ಪಾಕ್ ಪಡೆಗಳು ನಡೆಸಿದ ಶೆಲ್ ದಾಳಿಯಲ್ಲಿ ಮೃತಪಟ್ಟವರ ಕುಟುಂಬಸ್ಥರನ್ನು ಕಾಂಗ್ರೆಸ್ ಮುಖಂಡ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಇಂದು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಸಂತ್ರಸ್ತರ ದುಸ್ಥಿತಿ ಕುರಿತು ರಾಷ್ಟ್ರಮಟ್ಟದಲ್ಲಿ ಚರ್ಚಿಸುವುದಾಗಿ ಅವರು ಭರವಸೆ ನೀಡಿದ್ದಾರೆ.
ಮೇ 7ರಿಂದ 10ರ ನಡುವೆ ಪಾಕಿಸ್ತಾನ ನಡೆಸಿದ ಶೆಲ್ ದಾಳಿಯಲ್ಲಿ ಕುಟುಂಬದ ಸದಸ್ಯರನ್ನು ಕಳೆದುಕೊಂಡ ಕುಟುಂಬಗಳ ಸದಸ್ಯರು ಮತ್ತು ಸಂತ್ರಸ್ತರೊಂದಿಗೆ ರಾಹುಲ್ ಒಂದು ಗಂಟೆಗೂ ಹೆಚ್ಚು ಕಾಲ ಸಂವಾದ ನಡೆಸಿದ್ದಾರೆ.
ನಂತರ ಮಾತನಾಡಿದ ಅವರು, ಶೆಲ್ ದಾಳಿ ದೊಡ್ಡ ದುರಂತವಾಗಿದ್ದು, ಅನೇಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಪಾಕಿಸ್ತಾನ ಸೇನೆ ನಾಗರಿಕರನ್ನು ನೇರವಾಗಿ ಗುರಿಯಾಗಿಸಿ ದಾಳಿ ನಡೆಸಿದೆ. ಇಲ್ಲಿನ ಸ್ಥಳೀಯರೊಂದಿಗೆ ಮಾತನಾಡಿ ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದೇನೆ. ಅವರ ಬೇಡಿಕೆಯಂತೆ ಇವರ ಸಮಸ್ಯೆಗಳನ್ನು ಕುರಿತು ರಾಷ್ಟ್ರಮಟ್ಟದಲ್ಲಿ ಧ್ವನಿ ಎತ್ತುವುದಾಗಿ ರಾಹುಲ್ ಹೇಳಿದ್ದಾರೆ.
ತಮ್ಮ ಭೇಟಿ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು ಇಂದು ನಾನು ಪೂಂಚ್‌ನಲ್ಲಿ ಪಾಕ್ ಪಡೆಗಳ ಶೆಲ್ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಸ್ಥರನ್ನು ಭೇಟಿಯಾಗಿದ್ದೇನೆ. ಇವರ ಮುರಿದ ಮನೆಗಳು, ಚದುರಿದ ವಸ್ತುಗಳು, ಒದ್ದೆಯಾದ ಕಣ್ಣುಗಳು, ಪ್ರೀತಿಪಾತ್ರರನ್ನು ಕಳೆದುಕೊಂಡವರ ನೋವಿನ ಕಥೆಗಳನ್ನು ಆಲಿಸಿದ್ದೇನೆ. ಈ ದೇಶಭಕ್ತ ಕುಟುಂಬಗಳು ಪ್ರತಿ ಬಾರಿಯೂ ಧೈರ್ಯ ಮತ್ತು ಘನತೆಯಿಂದ ಯುದ್ಧದ ದೊಡ್ಡ ಹೊರೆಯನ್ನು ಹೊರುತ್ತವೆ. ಅವರ ಧೈರ್ಯಕ್ಕೆ ನಾನು ವಂದಿಸುತ್ತೇನೆ’ ಎಂದು ಹೇಳಿದ್ದಾರೆ.