ಪಹಲ್ಗಾಮ್‌ ಉಗ್ರರ ದಾಳಿ; ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ ಕರೆಯಬೇಕು: ಡಿಸಿಎಂ ಶಿವಕುಮಾರ್ ಆಗ್ರಹ

Most read

ಬೆಂಗಳೂರು: ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿ ಇಡೀ ಜಗತ್ತಿಗೆ ದೊಡ್ಡ ಆಘಾತವನ್ನುಂಟಡು ಮಾಡಿದೆ. ಈ ಭಯೋತ್ಪಾದಕ ದಾಳಿಯನ್ನು ಕಾಂಗ್ರೆಸ್‌ ಪಕ್ಷ ಬಲವಾಗಿ ಖಂಡಿಸುತ್ತದೆ. ಈ ಉಗ್ರರು ಹಾಗೂ ಭಯೋತ್ಪಾದಕ ಸಂಘಟನೆಗಳನ್ನು ಸದೆಬಡಿಯಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು. ಅವರು ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

“ನಾವು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಜಾಗೃತವಾಗಿ ಕೆಲಸ ಮಾಡಬೇಕಿದೆ. ಮುಖ್ಯಮಂತ್ರಿಗಳು ಈ ವಿಚಾರ ತಿಳಿದ ಕೂಡಲೇ ತಕ್ಷಣವೇ ರಾಜ್ಯ ಸರ್ಕಾರದ ಪರವಾಗಿ ಸಚಿವ ಸಂತೋಷ ಲಾಡ್ ಅವರ ಮುಖಂಡತ್ವದಲ್ಲಿ ಒಂದು ತಂಡವನ್ನು ಕಳುಹಿಸಿದ್ದಾರೆ” ಎಂದು ತಿಳಿಸಿದರು.

“ಧರ್ಮದ ಹೆಸರಿನಲ್ಲಿ ಭಯೋತ್ಪಾದಕ ದಾಳಿ ನಡೆದಿರುವುದು ನಿಜಕ್ಕೂ ಕೆಟ್ಟ ಬೆಳವಣಿಗೆ. ಕಾಂಗ್ರೆಸ್ ಪಕ್ಷ ಇದನ್ನು ಖಂಡಿಸುತ್ತದೆ. ಈ ವಿಚಾರದಲ್ಲಿ ನಮ್ಮ ಪಕ್ಷ ಕೇಂದ್ರ ಸರ್ಕಾರದ ಪರ ನಿಲ್ಲುವುದಾಗಿ ತಿಳಿಸಿದೆ. ಕೇಂದ್ರ ಸರ್ಕಾರ ಈ ಭಯೋತ್ಪಾದಕರನ್ನು ಸದೆಬಡಿಯಬೇಕು. ಇಂತಹ ಭಯೋತ್ಪಾದಕ ಸಂಘಟನೆಗಳ ವಿರುದ್ಧ ನಿರ್ದಾಕ್ಷೀಣ್ಯ ಕ್ರಮ ಕೈಗೊಳ್ಳಬೇಕು. ಇಂತಹ ಸಂಘಟನೆಗಳು ಯಾವುದೇ ದೇಶಕ್ಕೆ ಸಂಬಂಧಿಸಿದರೂ ಇವುಗಳನ್ನು ಬುಡಸಮೇತ ಕಿತ್ತೊಗೆಯಬೇಕು. ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕು” ಎಂದು ಹೇಳಿದರು.

“ಈ ಘಟನೆ ವಿದೇಶಾಂಗ ನೀತಿಯಿಂದ ಪ್ರವಾಸಿಗರು ಹಾಗೂ ದೇಶದ ಜನರ ಮೇಲೆ ಪ್ರಭಾವ ಬೀರುವುದರಿಂದ ಕೇಂದ್ರ ಸರ್ಕಾರ ಈ ವಿಚಾರವಾಗಿ ಸರ್ವಪಕ್ಷ ಸಭೆ ಕರೆಯಬೇಕು. ನಾನು ಈಗಷ್ಟೇ ದಾಳಿಯಲ್ಲಿ ಮೃತರ ಕುಟುಂಬದವರ ಜತೆ ಚರ್ಚೆ ಮಾಡಿದೆ. ಶಿವಮೊಗ್ಗ ಜಿಲ್ಲಾ ಸಚಿವರು ಹಾಗೂ ಪೊಲೀಸ್ ಅಧಿಕಾರಿಗಳ ಜತೆ ಮಾತನಾಡಿದ್ದು, ಮೃತರ ಕುಟುಂಬದವರನ್ನು ಭೇಟಿ ಮಾಡುವಂತೆ ತಿಳಿಸಿದ್ದೇನೆ” ಎಂದರು.

“ಧರ್ಮದ ಆಧಾರದ ಮೇಲೆ ಹತ್ಯೆ ಮಾಡಿರುವ ದಾಳಿಯನ್ನು ಇದೇ ಮೊದಲ ಬಾರಿಗೆ ನೋಡಿದ್ದೇನೆ. ನಮ್ಮ ಸಮಾಜ ಎತ್ತ ಸಾಗುತ್ತಿದೆ ಎಂದು ಆಘಾತವಾಗಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಈ ಸಂದರ್ಭದಲ್ಲಿ ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿ ಅವರ ಕುಟುಂಬದವರಿಗೆ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ” ಎಂದು ಹೇಳಿದರು.

ಗುಪ್ತಚರ ಇಲಾಖೆ ವೈಫಲ್ಯ ಇದೆ ಎಂದು ಭಾವಿಸುತ್ತೀರಾ ಎಂದು ಕೇಳಿದಾಗ, “ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಈ ವಿಚಾರದಲ್ಲಿ ನಾವು ರಾಜಕೀಯ ಮಾಡುವುದಿಲ್ಲ. ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ ಕರೆದು ಈ ವಿಚಾರವನ್ನು ಚರ್ಚಿಸಬೇಕು. ದೇಶವನ್ನು ರಕ್ಷಣೆ ಮಾಡುವುದು ನಮ್ಮ ಮೊದಲ ಆದ್ಯತೆ” ಎಂದು ತಿಳಿಸಿದರು.

More articles

Latest article