ನವದೆಹಲಿ: ಕಾಶ್ಮೀರದ ಪಹಲ್ಗಾಮ್ ಉದ್ಯಾನವನದಲ್ಲಿ 26 ಪ್ರವಾಸಿಗರನ್ನು ಗುಂಡಿಟ್ಟು ಕೊಂದ ಕೃತ್ಯದ ಹೊಣೆಯನ್ನು ಪಾಕಿಸ್ತಾನದ ಲಷ್ಕರ್ ಎ ತೈಬಾದ ಅಂಗಸಂಸ್ಥೆ ದಿ ರೆಸಿಸ್ಟಂಟ್ ಫ್ರಂಟ್ (TRF) ಹೊತ್ತಿದೆ. ಈ ಕೃತ್ಯದ ರೂವಾರಿ TRF ಮುಖ್ಯಸ್ಥ ಶೇಖ್ ಸಾಜ್ಜದ್ ಗುಲ್ ಎಂದು ಅಧಿಕಾರಿಗಳು ಬುಧವಾರ ಬಹಿರಂಗಪಡಿಸಿದ್ದಾರೆ.
ಕಾಶ್ಮೀರ ಮೂಲದ 50 ವರ್ಷದ ಗುಲ್ ಏ. 22ರಂದು ಪ್ರವಾಸಿಗರನ್ನೇ ಗುರಿಯಾಗಿಸಿ ನಡೆಸಿದ ಗುಂಡಿನ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಸೇನೆಯ ಅಧಿಕಾರಿಗಳು ಹೇಳಿದ್ದಾರೆ.
ಪಾಕಿಸ್ತಾನದ ರಾವಲ್ಪಿಂಡಿಯಲ್ಲಿರುವ ಕಂಟೋನ್ಮೆಂಟ್ ಪ್ರದೇಶದಲ್ಲಿ ನೆಲೆಸಿರುವ ಈತ ಲಷ್ಕರ್ ಎ ತೈಬಾ ಸಂಘಟನೆಯ ಮುಖಂಡನೂ ಆಗಿದ್ದಾನೆ. ಈತನನ್ನು ಸಾಜ್ಜದ್ ಅಹ್ಮದ್ ಶೇಖ್ ಎಂದೂ ಕರೆಯಲಾಗುತ್ತದೆ. ಈತ ಹಲವು ಭಯೋತ್ಪಾದಕ ಕೃತ್ಯಗಳನ್ನು ರೂಪಿಸಿದ್ದಾನೆ. ಇದರಲ್ಲಿ 2020ರಿಂದ 2024ರವರೆಗೆ ಕೇಂದ್ರ ಮತ್ತು ದಕ್ಷಿಣ ಕಾಶ್ಮೀರದಲ್ಲಿ ನಡೆದ ಹತ್ಯೆಗಳು, 2023ರಲ್ಲಿ ಕಾಶ್ಮೀರದಲ್ಲಿ ನಡೆಸಿದ ಗ್ರೆನೇಡ್ ದಾಳಿ ಸೇರಿದಂತೆ ಹಲವು ದಾಳಿಗಳಲ್ಲಿ ಈತ ಪ್ರಮುಖ ಆರೋಪಿಯಾಗಿದ್ದಾನೆ. 2022ರ ಏಪ್ರಿಲ್‌ನಲ್ಲಿ ಈತನನ್ನು ಭಯೋತ್ಪಾದಕ ಎಂದು ಘೋಷಿಸಿದ ಎನ್ ಐಎ, ಈತನ ತಲೆಗೆ ರೂ.10 ಲಕ್ಷ ಬಹುಮಾನ ಘೋಷಿಸಿದೆ.
ಪಹಲ್ಗಾಮ್ ದಾಳಿಯ ನಂತರ ನಡೆದ ತನಿಖೆಯಲ್ಲಿ ಗುಲ್ ಕೈವಾಡ ಇರುವುದನ್ನು ಎನ್ ಐಎ ಪತ್ತೆ ಮಾಡಿದೆ. ಗುಲ್ ಮಾರ್ಗದರ್ಶನದಲ್ಲಿ ಭಯೋತ್ಪಾದಕರ ತಂಡ ಪಹಲ್ಗಾಮ್ ನಲ್ಲಿ ದಾಳಿ ನಡೆಸಿತ್ತು.
ಬೆಂಗಳೂರಿನಲ್ಲಿ ಎಂಬಿಎ ಪದವಿ ಪಡೆದಿದ್ದ ಶೇಖ್ ಸಾಜ್ಜದ್ ಗುಲ್:
ಶ್ರೀನಗರದಲ್ಲಿ ಆರಂಭಿಕ ಶಿಕ್ಷಣ ಪಡೆದಿದ್ದ ಗುಲ್, ಬೆಂಗಳೂರಿನಲ್ಲಿ ಎಂಬಿಎ ಪೂರ್ಣಗೊಳಿಸಿದ್ದ. ನಂತರ ಕೇರಳದಲ್ಲಿ ಲ್ಯಾಬ್ ಟೆಕ್ನೀಷಿಯನ್ ಕೋರ್ಸ್ ಪೂರೈಸಿದ್ದ. ಕಾಶ್ಮೀರಕ್ಕೆ ಮರಳಿದ ಈತ ಅಲ್ಲಿ ಡಯಾಗ್ನಾಸ್ಟಿಕ್ ಲ್ಯಾಬ್ ನಡೆಸುತ್ತಿದ್ದ. ಈ ಉದ್ಯಮದ ಜತೆಯಲ್ಲೇ ಭಯೋತ್ಪಾದಕ ಸಂಘಟನೆಗಳಿಗೆ ಸರಕುಗಳನ್ನು ಸಾಗಿಸುವ ಕೆಲಸವನ್ನೂ ಮಾಡುತ್ತಿದ್ದ. ಆ ಮೂಲಕ ಲಷ್ಕರ್ ಎ ತೈಬಾ ಸೇರಿಕೊಂಡು ಮೂಲಕ ಪಾಕಿಸ್ತಾನದ ಐಎಸ್ ಐ ಗೆ ಗುಪ್ತಚರ ಕೆಲಸ ಮಾಡುತ್ತಿದ್ದ.
2002ರಲ್ಲಿ 5 ಕೆ.ಜಿ. ಆರ್‌ಡಿಎಕ್ಸ್ ಹೊಂದಿದ್ದ ಆರೋಪದ ಮೇಲೆ ಗುಲ್ ನನ್ನು ನಿಜಾಮುದ್ದೀನ್ ರೈಲ್ವೆ ನಿಲ್ದಾಣದ ಬಳಿ ದೆಹಲಿ ಪೊಲೀಸರು ಬಂಧಿಸಿದ್ದರು. ದೆಹಲಿಯಲ್ಲಿ ಸರಣಿ ಸ್ಫೋಟಗಳನ್ನು ನಡೆಸುವ ಸಂಚು ರೂಪಿಸಿದ್ದ ಅಪರಾಧದಡಿಯಲ್ಲಿ 2003ರ ಆ. 7ರಂದು ಈತನಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.
2017ರಲ್ಲಿ ಬಿಡುಗಡೆ ನಂತರ ಗುಲ್ ಪಾಕಿಸ್ತಾನಕ್ಕೆ ತೆರಳಿದ್ದ. ಅಲ್ಲಿ ಐಎಸ್ ಐ, ಲಷ್ಕರ್ ಎ ತೈಬಾದ ಅಂಗ ಸಂಸ್ಥೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ ಮುನ್ನಡೆಸುವ ಜವಬ್ದಾರಿಯನ್ನು ನೀಡಿತ್ತು. ಆ ಮೂಲಕ ಗುಲ್ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸುವ ಹೊಣೆಯನ್ನು ಹೊತ್ತಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.