ಮುಂಬೈ: ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದನಾ ದಾಳಿಯಲ್ಲಿ ಅಸುನೀಗಿದ 28 ಮಂದಿ ಪ್ರವಾಸಿಗರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸುವುದಕ್ಕೆ ಬದಲಾಗಿ ಖ್ಯಾತ ಬಾಲಿವುಡ್ ನಟ ಅತುಲ್ ಕುಲಕರ್ಣಿ ಕಾಶ್ಮೀರ ಪ್ರವಾಸ ಕೈಗೊಂಡು ಗಮನ ಸೆಳೆದಿದ್ದಾರೆ. ಅಲ್ಲದೆ ಎಲ್ಲರೂ ಕಾಶ್ಮೀರ ಪ್ರವಾಸ ಕೈಗೊಂಡು ಕಾಶ್ಮೀರಿ ಜನತೆಯ ಜತೆ ನಿಲ್ಲುವಂತೆ ಸಲಹೆ ನೀಡಿದ್ದಾರೆ.
ಅತುಲ್ ಮುಂಬೈ -ಕಾಶ್ಮೀರ ಪ್ರವಾಸವನ್ನು ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಖಾಲಿ ಇರುವ ವಿಮಾನಗಳು, ತಮ್ಮ ಬೋರ್ಡಿಂಗ್ ಪಾಸ್, ವಿಮಾನ ಸಿಬ್ಬಂದಿಯ ಆಪ್ತ ಸ್ವಾಗತ… ಹೀಗೆ ಎಲ್ಲವನ್ನೂ ಕಟ್ಟಿಕೊಟ್ಟಿದ್ದಾರೆ. ಹಿಂದೆ ವಿಮಾನಗಳ ಭರ್ತಿಯಾಗುತ್ತಿದ್ದವು. ಈಗ ಖಾಲಿ. ಮತ್ತೆ ವಿಮಾನ ಭರ್ತಿಯಾಗಿ ಕಾಶ್ಮೀರದತ್ತ ಪ್ರಯಣಿಸಬೇಕು ಎಂದು ವಿಮಾನ ಸಿಬ್ಬಂದಿ ಹೇಳಿದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಪಹಲ್ಗಾಮ್ ದಾಳಿಗೆ ಅತುಲ್ ಕುಲಕರ್ಣಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಶೇ.20 ರಷ್ಟು ಪ್ರವಾಸಿಗರು ಬುಕ್ಕಿಂಗ್ ರದ್ದುಪಡಿಸಿದ್ದಾರೆ. ಅಪರಾಧಿಗಳ ವಿರುದ್ಧ ಕ್ರ ಜರುಗಿಸಿ. ಕಾಶ್ಮೀರಕ್ಕೆ ಬನ್ನಿ. ಏಪ್ರಿಲ್ 22ರಂದು ನಡೆದ ದುರಂತ ಖಂಡನೀಯ. ಇಡೀ ದೇಶಕ್ಕೆ ಆಘಾತವನ್ನುಂಟು ಮಾಡಿದೆ ಎಂದಿದ್ದಾರೆ. ನಾವೆಲ್ಲ ಭಾರಿ ಸಂಖ್ಯೆಯಲ್ಲಿ ಭೇಟಿ ನೀಡುವ ಮೂಲಕ ಭಯೋತ್ಪಾದಕರಿಗೆ ತಿರುಗೇಟು ನೀಡಬೇಕು ಎಂದು ಹೇಳಿದ್ದಾರೆ.
ನಾನು ಏನು ಮಾಡಬಹುದು ಎಂದು ಯೋಚಿಸಿದೆ. ಆಗ ನಾನು ಕಾಶ್ಮೀರಕ್ಕೆ ಹೋಗಲೇಬೇಕು ಎಂದು ನಿರ್ಧರಿಸಿದೆ. ಹೋಗಬೇಡಿ ಎಂದು ಅನೇಕ ಮಂದಿ ಸಂದೇಶ ಕಳುಹಿಸಿದರು. ಆದರೆ ಹೋಗಬೇಕಾದ್ದು ನಮ್ಮ ಕರ್ತವ್ಯವಾಗಿತ್ತು. ನಾವು ನಮ್ಮದೇ ಕಾಶ್ಮೀರಕ್ಕೆ ಬಂದಿದ್ಧೇವೆ ಎಂದು ಬರೆದುಕೊಂಡಿದ್ದಾರೆ.
ಪಹಲ್ಗಾಮ್ ನ ಭಾವಚಿತ್ರಗಳನ್ನೂ ಅತುಲ್ ಹಂಚಿಕೊಂಡಿದ್ದಾರೆ. ಸದಾ ಪ್ರವಾಸಿಗರಿಂದ ತುಂಬಿತುಳುಕುತ್ತಿದ್ದ ಪಹಲ್ಗಾಂನ ಬಣಗುಟ್ಟುತ್ತಿರುವ ಭಾವಚಿತ್ರಗಳನ್ನು ಹಂಚಿಕೊಂಡಿದ್ದಾರೆ. ನಾವು ಈ ಘಟನೆಯನ್ನು ಖಂಡಿಸುತ್ತೇವೆ ಎಂದು ದೇಶದ ತ್ರಿವರ್ಣ ಧ್ವಜವನ್ನು ಹಿಡಿದಿದ್ದ ಸ್ಥಳೀಯರ ಚಿತ್ರಗಳನ್ನು ಸೆರೆಹಿಡಿದಿದ್ದಾರೆ.
ಅತುಲ್ ಅವರ ಪ್ರಯತ್ನವನ್ನು ನೂರಾರು ಮಂದಿ ಶ್ಲಾಘಿಸಿದ್ದಾರೆ. ಕಾಶ್ಮೀರವನ್ನು ನಾವು ಬಿಡುವುದು ಬೇಡ. ಒಬ್ಬಂಟಿಯಾಗಿ ಬಿಟ್ಟರೆ ಕಾಶ್ಮೀರದಲ್ಲಿ ಆರ್ಥಿಕ ಬಿಕ್ಕಟ್ಟು ಆರಂಭವಾಗುತ್ತದೆ. ದ್ವೇಷ ಹೆಚ್ಚುತ್ತದೆ. ಪ್ರತ್ಯೇಕತಾವಾದಿಗಳಿಗೆ ಅನುಕೂಲವಾಗುತ್ತದೆ. ಆದ್ದರಿಂದ ಕಾಶ್ಮೀರದ ಜತೆ ನಿಲ್ಲೋಣ ಎಂದು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಮತ್ತೇಕೆ ತಡ, ಕಾಶ್ಮೀರ ಪ್ರವಾಸ ಹೋಗಬೇಕು ಅಂದುಕೊಂಡವರು ಹೊರಡೋಣ, ದೇಶದ ಮುಕುಟ ಪ್ರಾಯವಾಗಿರುವ ಕಾಶ್ಮೀರ ನಮ್ಮದು ಎಂದು ಮತ್ತೆ ಸಾಬೀತುಪಡಿಸೋಣ.