ಶ್ರೀನಗರ: ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭೀಕರ ಭಯೋತ್ಪಾದನಾ ದಾಳಿಯ ಪರಿಣಮವಾಗಿ ಭಾರತ ಸರ್ಕಾರ ಅಟ್ಟಾರಿ–ವಾಘಾ ಗಡಿಯನ್ನು ಮುಚ್ಚಿದೆ. ಇದರ ರಾಜತಾಂತ್ರಿಕ ಪರಿಣಾಮಗಳೇನೇ ಇರಲಿ, ಹಸೆಮಣೆ ಏರಬೇಕಿದ್ದ ನವಜೋಡಿಗಳಿಗೆ ತೊಂದರೆ ಎದುರಾಗಿದೆ. ರಾಜಸ್ಥಾನದ ಶೈತಾನ್ ಸಿಂಗ್ ಅವರು, ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಕೇಸರ್ ಕನ್ವರ್ ಅವರ ಜೊತೆ ವಿವಾಹವಾಗಬೇಕಿತ್ತು. ಆದರೆ ಅಟ್ಟಾರಿ–ವಾಘಾ ಗಡಿ ಮುಚ್ಚಿದ್ದು ಶೈತಾನ್ ಸಿಂಗ್ ಅತಂತ್ರವಾಗಿದ್ದಾರೆ.
ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಇಂದ್ರಾಯ್ ಗ್ರಾಮದ ನಿವಾಸಿಯಾಗಿರುವ ಶೈತಾನ್ ಸಿಂಗ್ ಮತ್ತು ಕೇಸರ್ ಕನ್ವರ್ ಅವರ ನಿಶ್ಚಿತಾರ್ಥ 4 ವರ್ಷಗಳ ಹಿಂದೆಯೇ ನಡೆದಿತ್ತು. ಆದರೆ, ವೀಸಾ ಕಾರಣಕ್ಕೆ ಮದುವೆಯಾಗಲು ಸಾಧ್ಯವಾಗಿರಲಿಲ್ಲ. ಸತತ ಪ್ರಯತ್ನದ ನಂತರ ಫೆಬ್ರವರಿ 18ರಂದು ವರನ ತಂದೆ ಮತ್ತು ಸಹೋದರನಿಗೆ ವೀಸಾ ದೊರೆತಿತ್ತು. ಮದುವೆ ನಿರ್ವಿಘ್ನವಾಗಿ ನಡೆಯಲಿದೆ ಎಂದು ಎಲ್ಲರೂ ಭಾವಿಸಿದ್ದರು. ಏಪ್ರಿಲ್ 30 ರಂದು ಪಾಕಿಸ್ತಾನದ ಅಮರ್ ಕೋಟ್ ನಗರದಲ್ಲಿ ವಿವಾಹ ನಡೆಯಬೇಕಿತ್ತು. ಮಂಗಳವಾರ ಶೈತಾನ್ ಸಿಂಗ್ ಕುಟುಂಬ ‘ಬರಾತ್’ ಜೊತೆ ಬಾರ್ಮರ್ ನಿಂದ ಅಟ್ಟಾರಿ ಗಡಿಗೆ ಪ್ರಯಾಣ ಬೆಳೆಸಿದ್ದರು.
ಅವರು ಗಡಿ ತಲುಪುವ ವೇಳೆಗೆ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತ ಬುಧವಾರ ಅಟ್ಟಾರಿ-ವಾಘಾ ಗಡಿಯನ್ನು ಬಂದ್ ಮಾಡಿತ್ತು. ಇದರಿಂದ ಶೈತಾನ್ ಕುಟುಂಬಕ್ಕೆ ಗಡಿ ದಾಟಲು ಅಧಿಕಾರಿಗಳು ಅವಕಾಶ ನೀಡಿರಲಿಲ್ಲ. ಈ ಬೆಳವಣಿಗೆಗೆ ಶೈತಾನ್ ಸಿಂಗ್ ಬೇಸರ ವ್ಯಕ್ತಪಡಿಸಿದ್ದಾರೆ. ‘ಭಯೋತ್ಪಾದಕರ ಕೃತ್ಯ ತಪ್ಪು. ಆದರೆ ನಮ್ಮ ಮದುವೆಗೆ ಆತಂಕ ಎದುರಾಗಿದೆ. ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ ಎಂದು ಚಿಂತಾಕ್ರಾಂತರಾಗಿದ್ದಾರೆ.
ಈ ಬೆಳವಣಿಗೆಗಳಿಂದ ಎರಡೂ ಕುಟುಂಬಗಳಿಗೆ ನಿರಾಶೆಯಾಗಿದೆ. ಪಾಕಿಸ್ತಾನದಲ್ಲಿರುವ ನಮ್ಮ ಸಂಬಂಧಿಗಳು ಇಲ್ಲಿಗೆ ಬಂದಿದ್ದರು. ಆದರೆ, ಅವರು ಈಗ ಮರಳಬೇಕಾಗಿದೆ. ಭಯೋತ್ಪಾದಕ ದಾಳಿಯಿಂದ ಎಲ್ಲರೂ ತೊಂದರೆ ಅನುಭವಿಸುವಂತಾಯಿತು’ ಎಂದು ಶೈತಾನ್ ಸಂಬಂಧಿಯೊಬ್ಬರು ಹೇಳಿದ್ದಾರೆ. ಶೈತಾನ್ ಸಿಂಗ್ ಅವರ ವೀಸಾ ಮೇ 12 ರವರೆಗೆ ಮಾನ್ಯವಾಗಿದೆ. ಆ ಹೊತ್ತಿಗೆ ಗಡಿ ಬಾಗಿಲು ತೆರೆದರೆ ಮದುವೆ ನಡೆಯುವ ನಿರೀಕ್ಷೆಯಲ್ಲಿದ್ದಾರೆ.