ಭಾರತೀಯ ವಿಮಾನ ಯಾನ ಸಂಸ್ಥೆಗಳ 20ಕ್ಕೂ ಹೆಚ್ಚು ವಿಮಾನಗಳಿಗೆ ಶನಿವಾರ ಮುಂಜಾನೆಯಿಂದಲೇ ಬಾಂಬ್ ಬೆದರಿಕೆಯ ಕರೆಗಳು ಬರುತ್ತಿವೆ. ಜೊತೆಗೆ ಏರ್ ಇಂಡಿಯಾ, ಆಕಾಶ್, ವಿಸ್ತಾರಾ, ಸ್ಪೈಸ್ ಜೆಟ್, ಸ್ಟಾರ್ ಏರ್ ಮತ್ತು ಅಲಯನ್ಸ್ ವಿಮಾನಗಳಿಗೂ ಬಾಂಬ್ ಬೆದರಿಕೆಯ ಕರೆಗಳು ಬಂದಿವೆ ಎಂದು ತಿಳಿದು ಬಂದಿದೆ.
ಮುಂಬೈನಿಂದ ಇಸ್ತಾನ್ ಬುಲ್ ಗೆ ತೆರಳುವ ವಿಮಾನ ಮತ್ತು ದೆಹಲಿಯಿಂದ ಇಸ್ತಾನ್ ಬುಲ್ ಗೆ ಹೊರಡುವ ವಿಮಾನಗಳಿಗೂ ಬಾಂಬ್ ಬೆದರಿಕೆಯ ಕರೆ ಬಂದಿದೆ.
ಜೋಧ್ ಪುರದಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ವಿಸ್ತಾರಾ ವಿಮಾನ ಮತ್ತು ಉದಯಪುರದಿಂದ ಮುಂಬೈಗೆ ಹಾರಾಟ ನಡೆಸುತ್ತಿದ್ದ ಇಂಡಿಗೊ ವಿಮಾನಗಳಿಗೂ ಬಾಂಬ್ ಬೆದರಿಕೆಯ ಕರೆಗಳು ಬಂದಿವೆ ಎಂದು ತಿಳಿದು ಬಂದಿದೆ. ನಂತರ ಈ ವಿಮಾನಗಳನ್ನು ಪ್ರತ್ಯೇಕ ಸ್ಥಳಗಳಿಗೆ ಕೊಂಡೊಯ್ದು ತಪಾಸಣೆ ನಡೆಸಲಾಗಿದೆ. ಆದರೆ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ.
ಶುಕ್ರವಾರ ವಿಸ್ತಾರಾದ ಮೂರು ಅಂತಾರಾಷ್ಟ್ರೀಯ ವಿಮಾಗಳಿಗೆ ಬಾಂಬ್ ಬೆದರಿಕೆಯ ಕರೆಗಳು ಬಂದಿದ್ದವು. ತಪಾಸಣೆ ನಂತರ ಇದು ಹುಸಿ ಬಾಂಬ್ ಕರೆ ಎಂದು ಗೊತ್ತಾಗಿತ್ತು. ಹಲವು ದಿನಗಳಿಂದ ಭಾರತೀಯ ವಿಮಾನಯಾನ ಸಂಸ್ಥೆಗಳ 40ಕ್ಕೂ ಹೆಚ್ಚು ಹುಸಿ ಬಾಂಬ್ ಕರೆಗಳು ಬಂದಿದ್ದವು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.