ಬೆಂಗಳೂರು: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿಯನ್ನು ನಿಯಂತ್ರಿಸಲು ಸುಗ್ರೀವಾಜ್ಞೆ ತರಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೈಕ್ರೋಫೈನಾನ್ಸ್ ಹಾವಳಿಗೆ ತಡೆ ತರುವ ನಿಟ್ಟಿನಲ್ಲಿ ಹೊಸದಾಗಿ ತರುವ ಮಸೂದೆಗೆ ಒಪ್ಪಿಗೆ ನೀಡಲಾಗಿದೆ.
ಸುಗ್ರೀವಾಜ್ಞೆಗೆ ರಾಜ್ಯಪಾಲರ ಬಳಿ ಅಂಕಿತ ಪಡೆಯಲು ಸಂಪುಟ ನಿರ್ಧರಿಸಿದೆ. ಸುಗ್ರೀವಾಜ್ಞೆಗೆ ಸಂಬಂಧಿಸಿದಂತೆ ಕೆಲವು ತಾಂತ್ರಿಕ ಕಾರಣಗಳನ್ನು ಕುರಿತು ಚರ್ಚಿಸಲು ಇಂದು ಸಂಜೆಯೇ ಮತ್ತೊಂದು ಸುತ್ತಿನ ಸಭೆ ನಡೆಯಲಿದೆ. ಈ ವಿಷಯದಲ್ಲಿ ಪರಮಾಧಿಕಾರ ಕೈಗೊಳ್ಳುವ ಅಧಿಕಾರನ್ನು ಮುಖ್ಯಮಂತ್ರಿಗಳಿಗೆ ನೀಡಲಾಗಿದೆ. ಮಸೂದೆಗೆ ಕೆಲವು ಅಂಶಗಳನ್ನು ಸೇರ್ಪಡೆ ಮಾಡಲು ತೀರ್ಮಾನಿಸಲಾಗಿದೆ.
ಸಚಿವ ಸಂಪುಟದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಎಚ್ಕೆ ಪಾಟೀಲ್, ಫೈನಾನ್ಸ್ಗಳಿಗೆ ಕಡಿವಾಣ ಹಾಕಲು ಸುಗ್ರೀವಾಜ್ಞೆಗೆ ಸಂಪುಟ ಒಪ್ಪಿಗೆ ಸೂಚಿಸಿದೆ. ಅಮಾನವೀಯವಾಗಿ ಮೈಕ್ರೋ ಪೈನಾನ್ಸ್ನಿಂದ ಸಾಲ ವಸೂಲಿ ಆಗುತ್ತಿದೆ. ಇಂದೂ ಕೂಡಾ ಆತ್ಮಹತ್ಯೆ ಪ್ರಕರಣ ನಡೆದಿದ್ದು, ಮಸೂದೆ ತರಲು ತೀರ್ಮಾನಿಸಿ ಕೆಲವು ತಾಂತ್ರಿಕ ಅಂಶಗಳನ್ನು ಚರ್ಚಿಸಿದ್ದೇವೆ ಎಂದರು.