ಮತಕಳ್ಳತನ ಕುರಿತು ಚರ್ಚೆ ಕುರಿತು ವಿಪಕ್ಷಗಳು ಪಟ್ಟು ಸಡಿಲಿಸುವುದಿಲ್ಲ; ಕಾಂಗ್ರೆಸ್ ಮುಖಂಡ ಜೈರಾಂ‌ ರಮೇಶ್

Most read

ನವದೆಹಲಿ: ಸರ್ಕಾರದ ಅಣತಿಯಂತೆ ಚುನಾವಣಾ ಆಯೋಗ  ಮತಕಳ್ಳತನ ನಡೆಸುತ್ತಿರುವ ಬಗ್ಗೆ ಸಂಸತ್ತಿನ ಉಭಯ ಸದನಗಳಲ್ಲಿ ಚರ್ಚೆ ನಡೆಸಲು ಅವಕಾಶ ನೀಡಬೇಕೆಂದು ವಿರೋಧ ಪಕ್ಷಗಳು ಆಗ್ರಹಪಡಿಸುತ್ತಿವೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್‌ ಪಕ್ಷದ ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈ ರಾಂ ರಮೇಶ್, ಚುನಾವಣಾ ಆಯೋಗದ ಯಾವುದೇ ವಿಷಯವನ್ನು ಸಂಸತ್ತಿನಲ್ಲಿ ಚರ್ಚೆ ಮಾಡುವಂತಿಲ್ಲ ಎನ್ನುವ 1988 ಡಿಸೆಂಬರ್ 14ರಂದು ಲೋಕಸಭಾ ಸ್ಪೀಕರ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಮಂಗಳವಾರ ರಾಜ್ಯಸಭೆಯ ಉಪಸಭಾಪತಿ ರೂಲಿಂಗ್ ನೀಡಿದ್ದಾರೆ. ಆದರೆ, ಒಂದು ವಿಷಯ ಬಿಟ್ಟು ಜಗತ್ತಿನ ಯಾವುದೇ ವಿಷಯವನ್ನು ರಾಜ್ಯಸಭೆಯಲ್ಲಿ ಚರ್ಚಿಸಲು ಅವಕಾಶ ಇದೆ. ಪ್ರಧಾನಿ ಮೋದಿಯವರೇ ನೇಮಕ ಮಾಡಿದ ರಾಜ್ಯಸಭೆ ಸಭಾಪತಿ 2023ರ ಜುಲೈ 1 ರಂದು ರೂಲಿಂಗ್ ನೀಡಿದ್ದರು ಎಂದು ಅವರು ಬರೆದುಕೊಂಡಿದ್ದಾರೆ.

ವಾಗ್ದಂಡನೆ ಹೊರತುಪಡಿಸಿ ನ್ಯಾಯಮೂರ್ತಿಗಳ ಹೇಳಿಕೆಗಳನ್ನು ಮಾತ್ರ ರಾಜ್ಯಸಭೆಯಲ್ಲಿ ಚರ್ಚಿಸಬಾರದು. ನ್ಯಾಯಾಂಗ ನಿಂದನೆ ಪರಿಕಲ್ಪನೆಯನ್ನು ಸಂಪೂರ್ಣವಾಗಿ ತಪ್ಪಾಗಿ ಗ್ರಹಿಸಲಾಗಿದೆ ಎಂದು ಅವರು ಹೇಳಿದ್ದಾರೆ ಎಂದು ರಮೇಶ್ ತಮ್ಮ ಎಕ್ಸ್‌ ಪೋಸ್ಟ್‌ ನಲ್ಲಿ ಉಲ್ಲೇಖಿಸಿದ್ದಾರೆ.

ಸಂಸತ್ತು ರೂಲಿಂಗ್ ಮತ್ತು ನಿಯಮಗಳ ಆಧಾರದಲ್ಲಿ ನಡೆಯುತ್ತದೆ ಎನ್ನುವುದನ್ನು ವಿರೋಧ ಪಕ್ಷಗಳು ನಿರಂತರವಾಗಿ ನೆನಪಿಸುತ್ತಿರುತ್ತವೆ. 2023 ಜುಲೈ 21ರ ರಾಜ್ಯಸಭಾ ಸಭಾಪತಿಯ ರೂಲಿಂಗ್ ಅನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಲಾಗುತ್ತಿದೆ ಎಂದು ಅವರು ಟೀಕಿಸಿದ್ದಾರೆ.

ಬಿಹಾರದ ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆ ಬಗ್ಗೆ ಚರ್ಚೆಗೆ ವಿರೋಧ ಪಕ್ಷಗಳು ಪಟ್ಟು ಹಿಡಿದಿರುವುದರಿಂದ ಸದನದ ಕಲಾಪಗಳಿಗೆ ಅಡ್ಡಿಯಾಗಿವೆ. ಬಿಹಾರದ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಚರ್ಚೆಗೆ ಅವಕಾಶ ನೀಡುವಂತೆ  ಎರಡೂ ಸದನಗಳಲ್ಲಿ ಪ್ರತಿ‍ಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ. ಚುನಾವಣಾ ಆಯೋಗವು ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳುತ್ತಿದೆ ಎಂದೂ ಆರೋಪಿಸಿವೆ. ಆದ್ದರಿಂದ ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ಸಂಸತ್‌ ನಲ್ಲಿ ಚರ್ಚೆ ನಡೆಸಬೇಕು ಎಂದು ವಿರೋಧ ಪಕ್ಷಗಳು ಪಟ್ಟು ಹಿಡಿದಿವೆ.

More articles

Latest article