ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದ 9 ಉಗ್ರರ ನೆಲೆಗಳ ಮೇಲೆ ಮಧ್ಯರಾತ್ರಿ ನಡೆಸಿದ ಆಪರೇಷನ್ ಸಿಂಧೂರ ಕುರಿತು ಭಾರತೀಯ ಸೇನೆಯ ಮಹಿಳಾ ಅಧಿಕಾರಿಗಳೇ ತುರ್ತು ಪತ್ರಿಕಾಗೋಷ್ಠಿ ನಡೆಸಿ ವಿವರ ನೀಡಿದ್ದಾರೆ.
ಭಾರತ ನಡೆಸಿದ ವೈಮಾನಿಕ ದಾಳಿಯಲ್ಲಿ ಸುಮಾರು 100 ಉಗ್ರರು ಹತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಲ್ ಸೋಫಿಯಾ ಖುರೇಶಿ, ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಅಸುನೀಗಿದ ಪ್ರವಾಸಿಗರು ಮತ್ತು ಅವರ ಕುಟುಂಬದ ಸದಸ್ಯರಿಗೆ ನ್ಯಾಯ ಒದಗಿಸಲು ಭಾರತೀಯ ಸಶಸ್ತ್ರ ಪಡೆಗಳು ಇಂದು ನಸುಕಿನ ಜಾವ 1.05ರಿಂದ 1.30ರ ನಡುವೆ ದಾಳಿ ನಡೆಸಿವೆ. ಒಂಬತ್ತು ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ಅವುಗಳನ್ನು ಯಶಸ್ವಿಯಾಗಿ ನಾಶಪಡಿಸಲಾಗಿದೆ. ನಾಗರಿಕ ಮೂಲಸೌಕರ್ಯಗಳಿಗೆ ಹಾನಿಯಾಗದಂತೆ ಮತ್ತು ಯಾವುದೇ ನಾಗರಿಕರ ಜೀವಹಾನಿಯಾಗದಂತೆ ಸ್ಥಳಗಳನ್ನು ಆಯ್ಕೆ ಮಾಡಲಾಗಿತ್ತು ಎಂದು ವಿವರಿಸಿದರು.
ನಂತರ ಕರ್ನಲ್ ಸೋಫಿಯಾ ಅವರು 2008 ರ ಮುಂಬೈ ದಾಳಿಕೋರರಾದ ಅಜ್ಮಲ್ ಕಸಬ್ ಮತ್ತು ಡೇವಿಡ್ ಹೆಡ್ಲಿಗೆ ತರಬೇತಿ ನೀಡಲಾಗಿದ್ದ ಮುರಿಡ್ಕೆ ಸೇರಿದಂತೆ ನಾಶವಾದ ಭಯೋತ್ಪಾದಕ ಶಿಬಿರಗಳ ವೀಡಿಯೊಗಳನ್ನು ಪ್ರದರ್ಶಿಸಿದರು.
ಪಾಕಿಸ್ತಾನದ ಬಹಾವಲ್ಪುರದಲ್ಲಿರುವ ಭಯೋತ್ಪಾದಕ ತಾಣ ಮಾರ್ಕಾಜ್ ಸುಭಾನ್ ಅಲ್ಲಾಹ್, ಜೈಶ್-ಎ-ಮೊಹಮ್ಮದ್‌ನ ಪ್ರಧಾನ ಕಚೇರಿಯನ್ನು ಭಾರತೀಯ ಸಶಸ್ತ್ರ ಪಡೆಗಳು ಗುರಿಯಾಗಿಸಿಕೊಂಡಿವೆ. ಯಾವುದೇ ಮಿಲಿಟರಿ ನೆಲೆಯನ್ನು ಗುರಿಯಾಗಿಸಿಕೊಂಡಿಲ್ಲ. ಇಲ್ಲಿಯವರೆಗೆ ಪಾಕಿಸ್ತಾನದಲ್ಲಿ ನಾಗರಿಕರ ಸಾವುನೋವುಗಳ ವರದಿಯಾಗಿಲ್ಲ ಎಂದರು.
ಪಾಕಿಸ್ತಾನದೊಳಗೆ 12-18 ಕಿ.ಮೀ ದೂರದಲ್ಲಿರುವ ಸಿಯಾಲ್‌ಕೋಟ್‌ನ ಮೆಹಮೂನಾ ಜೋಯಾ ಶಿಬಿರ ಸೇರಿದಂತೆ ನಾಶವಾದ ಭಯೋತ್ಪಾದಕ ಶಿಬಿರಗಳನ್ನು ತೋರಿಸುವ ವೀಡಿಯೊಗಳನ್ನು ಪ್ರಸ್ತುತಪಡಿಸಿ, ಇದು ಹಿಜ್ಬುಲ್ ಮುಜಾಹಿದ್ದೀನ್‌ನ ಅತಿದೊಡ್ಡ ಶಿಬಿರಗಳಲ್ಲಿ ಒಂದಾಗಿದೆ. ಕಥುವಾ, ಜಮ್ಮು ಪ್ರದೇಶದಲ್ಲಿ ಭಯೋತ್ಪಾದನೆಯನ್ನು ಹರಡುವ ನಿಯಂತ್ರಣ ಕೇಂದ್ರಗಳಲ್ಲಿ ಒಂದಾಗಿದೆ. ಪಠಾಣ್ ಕೋಟ್ ವಾಯುಪಡೆಯ ನೆಲೆ ಶಿಬಿರದ ಮೇಲಿನ ದಾಳಿಯನ್ನು ಈ ಶಿಬಿರ ಯೋಜಿಸಿ ನಿರ್ದೇಶಿಸಿದೆ ಎಂದು ಹೇಳಿದರು.

 
                                    
