ಆಪರೇಷನ್‌ ಸಿಂಧೂರ: ಕ್ಷಿಪಣಿ ದಾಳಿ ನಡೆಸಿದ 9 ಸ್ಥಳಗಳ ವಿಶೇಷತೆಗಳೇನು? ಸೇನೆಯು ಈ ನೆಲೆಗಳನ್ನೇ ಆಯ್ದುಕೊಳ್ಳಲು ಕಾರಣಗಳು ಇಲ್ಲಿವೆ

Most read

ನವದೆಹಲಿ: ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಏಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ಇಂದು ಮುಂಜಾನೆ ತಕ್ಕ ಪ್ರತಿಕ್ರಿಯೆ ನೀಡಿದೆ. ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಒಂಬತ್ತು ಸ್ಥಳಗಳಲ್ಲಿರುವ ಭಯೋತ್ಪಾದಕ ಶಿಬಿರಗಳ ಮೇಲೆ ಕ್ಷಿಪಣಿ ನಡೆಸಿದೆ. ಈ ಕಾರ್ಯಾಚರಣೆಗೆ ಭಾರತ ಆಪರೇಷನ್ ಸಿಂಧೂರ್ ಎಂದು ನಾಮಕರಣ ಮಾಡಿದೆ.

ಈ ದಾಳಿ ಪಾಕಿಸ್ತಾನ ಬೆಂಬಲಿತ ಉಗ್ರಗಾಮಿ ಗುಂಪುಗಳ ಮೇಲೆ ನಡೆಸಲಾಗಿದೆ ಎಂದು ಭಾರತ ಸೇನೆ ಪ್ರತಿಪಾದಿಸಿದೆ. ಈ ಕಾರ್ಯಾಚರಣೆಯನ್ನು ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆ ಜಂಟಿಯಾಗಿ ನಡೆಸಿವೆ.
ಪಾಕಿಸ್ತಾನದ ನಾಲ್ಕು ನೆಲೆಗಳಾದ ಬಹವಾಲ್ಪುರ್, ಮುರಿಯ್ಕೆ, ಸಿಯಾಲ್ಕೋಟ್ ಮತ್ತು ಸರ್ಜಲ್ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿರುವ ಐದು ನೆಲೆಗಳನ್ನು ಹೊಡೆದುರುಳಿಸಿವೆ. ಪಾಕಿಸ್ತಾನದ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ISI) ಆಶ್ರಯದಲ್ಲಿ ಭಯೋತ್ಪಾದಕ ಸಂಘಟನೆಗಳು ನೆಲೆಸಿದ್ದವು.

ಈ 9 ಸ್ಥಳಗಳನ್ನೇ ಏಕೆ ಆಯ್ಕೆ ಮಾಡಿಕೊಂಡಿದ್ದು ಏಕೆ?

ಭಾರತ ವಿರೋಧಿ ಭಯೋತ್ಪಾದಕ ಮೂಲಸೌಕರ್ಯದ ಜಾಲವನ್ನು ಕೆಡವಲು ಸ್ಥಳಗಳನ್ನು ಬಹಳ ಎಚ್ಚರಿಕೆಯಿಂದ ಆಯ್ಕೆ ಮಾಡಲಾಯಿತು. ಈ ತಾಣಗಳು ಲಷ್ಕರ್-ಎ-ತೈಬಾ (LeT), ಜೈಶ್-ಎ-ಮೊಹಮ್ಮದ್ (JeM), ಮತ್ತು ಹಿಜ್ಬುಲ್ ಮುಜಾಹಿದ್ದೀನ್ (HM) ಸೇರಿದಂತೆ ನಿಷೇಧಿತ ಗುಂಪುಗಳೊಂದಿಗೆ ಸಂಬಂಧ ಹೊಂದಿದ್ದವು – ಇವು ಪಾಕಿಸ್ತಾನದ ಮಿಲಿಟರಿ ಮತ್ತು ಗುಪ್ತಚರ ಸಂಸ್ಥೆಗಳಿಂದ ನೇರ ಬೆಂಬಲ ಮತ್ತು ಆಶ್ರಯವನ್ನು ಪಡೆಯುವ ಸಂಘಟನೆಗಳಾಗಿವೆ.
ಈ ಉಗ್ರರ ಗುಂಪುಗಳು ತರಬೇತಿ ಶಿಬಿರಗಳು (ಮರ್ಕಜ್) ಮತ್ತು ಉಡಾವಣಾ ಪ್ಯಾಡ್‌ಗಳಿಂದ ಕಾರ್ಯನಿರ್ವಹಿಸುತ್ತವೆ, ಅವುಗಳಲ್ಲಿ ಹಲವು ಸರ್ಕಾರ ನಡೆಸುವ ಕಟ್ಟಡಗಳು ಮತ್ತು ಸಂಸ್ಥೆಗಳಲ್ಲಿ ಅಡಗಿಕೊಂಡಿವೆ. ಉಡಾವಣಾ ಪ್ಯಾಡ್‌ಗಳನ್ನು ಒಳನುಸುಳುವಿಕೆ ಪ್ರಯತ್ನಗಳು ಮತ್ತು ಶಸ್ತ್ರಾಸ್ತ್ರ ತರಬೇತಿಯನ್ನು ನಡೆಸಲು ಬಳಸಿದರೆ, ಪಾಕಿಸ್ತಾನದೊಳಗಿನ ದೊಡ್ಡ ಸೌಲಭ್ಯಗಳನ್ನು ಧಾರ್ಮಿಕ ಬೋಧನೆ, ಪ್ರಚಾರ, ಲಾಜಿಸ್ಟಿಕ್ಸ್ ಮತ್ತು ನೇಮಕಾತಿಗಾಗಿ ಬಳಸಲಾಗುತ್ತದೆ.

ಸ್ಥಳಗಳು ಯಾವುವು, ಹೇಗೆ ಕಾರ್ಯನಿರ್ವಹಿಸುತ್ತವೆ?

  1. ಮರ್ಕಜ್ ಸುಭಾನ್ ಅಲ್ಲಾ, ಬಹವಾಲ್ಪುರ್
    2015 ರಿಂದ ಕಾರ್ಯನಿರ್ವಹಿಸುತ್ತಿರುವ ಇದು ಜೆಇಎಂನ ಪ್ರಾಥಮಿಕ ತರಬೇತಿ ಮತ್ತು ಬೋಧನೆ ಕೇಂದ್ರವಾಗಿದ್ದು, ವರ್ಚುವಲ್ ಪ್ರಧಾನ ಕಚೇರಿಯಾಗಿ ಕಾರ್ಯನಿರ್ವಹಿಸುತ್ತದೆ. 2019 ರ ಪುಲ್ವಾಮಾ ಆತ್ಮಹತ್ಯಾ ಬಾಂಬ್ ದಾಳಿ ಸೇರಿದಂತೆ ಹಿಂದಿನ ದಾಳಿಗಳಿಗೆ ಈ ಪ್ರದೇಶ ನಿಕಟ ಸಂಬಂಧ ಹೊಂದಿದೆ. ಇಲ್ಲಿ ಜೆಇಎಂ ಮುಖ್ಯಸ್ಥ ಮಸೂದ್ ಅಜರ್ ಮತ್ತು ಇತರ ಹಿರಿಯ ನಾಯಕರು ಬೀಡು ಬಿಟ್ಟಿದ್ದಾರೆ ಎನ್ನಲಾಗುತ್ತಿದೆ. ಈ ಪ್ರದೇಶದಿಂದ ಅಜರ್‌ ಭಾರತ ವಿರೋಧಿ ಭಾಷಣಗಳನ್ನು ಮಾಡುವ ಮೂಲಕ ಜಿಹಾದ್‌ಗೆ ಕರೆ ನೀಡುವುದು, ಉಗ್ರಗಾಮಿ ಸಂಘಟನೆಗಳಿಗೆ ಯುವಕರನ್ನು ನೇಮಿಸಿಕೊಳ್ಳುವುದನ್ನು ಮಾಡುತ್ತಿರುತ್ತಾನೆ. ಈ ತಾಣದಲ್ಲಿ ಶಸ್ತ್ರಾಸ್ತ್ರಗಳ ಸಂಗ್ರಹವಿದ್ದು ಧಾರ್ಮಿಕ ತರಬೇತಿಯನ್ನು ನೀಡಲಾಗುತ್ತಿರುತ್ತದೆ.
  2. ಮರ್ಕಜ್ ತೈಬಾ, ಮುರಿಡ್ಕೆ
    2000ನೇ ಇಸವಿಯಲ್ಲಿ ಪಂಜಾಬ್‌ನ ಶೇಖುಪುರದಲ್ಲಿ ಸ್ಥಾಪನೆಯಾದ ಎಲ್‌ಇಟಿಯ ಅತ್ಯಂತ ಮಹತ್ವದ ತರಬೇತಿ ತಾಣವಾಗಿದೆ. ಪ್ರತಿ ವರ್ಷ ಸುಮಾರು ಸಾವಿರ ವ್ಯಕ್ತಿಗಳನ್ನು ನೇಮಿಸಿಕೊಳ್ಳುತ್ತದೆ ಎಂದು ಹೇಳಲಾಗುತ್ತಿದೆ. ಇಲ್ಲಿ ಶಸ್ತ್ರಾಸ್ತ್ರ ತರಬೇತಿ, ಧಾರ್ಮಿಕ ಬೋಧನೆ ಮತ್ತು ಮೂಲಭೂತವಾದವನ್ನು ಬೋಧಿಲಾಗುತ್ತದೆ. ಅಲ್-ಖೈದಾ ನಾಯಕ ಒಸಾಮಾ ಬಿನ್ ಲಾಡೆನ್ ಇಲ್ಲಿ ಮಸೀದಿ ಮತ್ತು ಅತಿಥಿ ಗೃಹವನ್ನು ನಿರ್ಮಿಸಲು 10 ಮಿಲಿಯನ್ ಹಣ ನೀಡಿದ್ದ ಎಂಬ ಮಾಹಿತಿ ಇದೆ. ಈ ಕೇಂದ್ರದಲ್ಲಿ ಅಜ್ಮಲ್ ಕಸಬ್ ಸೇರಿದಂತೆ 26/11 ಮುಂಬೈ ದಾಳಿಯ ಅಪರಾಧಿಗಳಿಗೆ ಐಎಸ್‌ಐ ಮೇಲ್ವಿಚಾರಣೆಯಲ್ಲಿ ತರಬೇತಿ ನೀಡಲಾಗಿತ್ತು.
  3. ಸರ್ಜಲ್, ಟೆಹ್ರಾ ಕಲಾನ್
    ನರೋವಲ್ ಜಿಲ್ಲೆಯಲ್ಲಿರುವ ಈ ಜೆಇಎಂ ಕೇಂದ್ರವು ಜಮ್ಮುವಿನ ಸಾಂಬಾದಲ್ಲಿರುವ ಅಂತಾರಾಷ್ಟ್ರೀಯ ಗಡಿಯಿಂದ ಕೇವಲ 6 ಕಿ.ಮೀ ದೂರದಲ್ಲಿದೆ. ಇದು ಗಡಿಯಾಚೆಗಿನ ಸುರಂಗ ಒಳನುಸುಳುವಿಕೆ ಮತ್ತು ಡ್ರೋಣ್ ಆಧಾರಿತ ಶಸ್ತ್ರಾಸ್ತ್ರಗಳು ಮತ್ತು ಮಾದಕವಸ್ತು ಸಾಗಾಟಕ್ಕೆ ಉಡಾವಣಾ ತಾಣವಾಗಿ ಕಾರ್ಯನಿರ್ವಹಿಸುತ್ತದೆ. ಜೆಇಎಂ ಕಮಾಂಡರ್‌ ಗಳಾದ ಮೊಹಮ್ಮದ್ ಅದ್ನಾನ್ ಅಲಿ ಮತ್ತು ಕಾಶಿಫ್ ಜಾನ್ ಆಗಾಗ್ಗೆ ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಮುಫ್ತಿ ಅಬ್ದುಲ್ ರೌಫ್ ಅಸ್ಗರ್ ಈ ಕೇಂದ್ರದ ಉಸ್ತುವಾರಿ ವಹಿಸಿಕೊಂಡಿದ್ದಾನೆ.
  4. ಮೆಹಮೂನಾ ಜೋಯಾ, ಸಿಯಾಲ್‌ಕೋಟ್
    ಭುಟ್ಟಾ ಕೋಟ್ಲಿ ಸರ್ಕಾರಿ ಆವರಣದಲ್ಲಿ ನೆಲೆಗೊಂಡಿರುವ ಈ ಹಿಜ್ಬುಲ್ ಮುಜಾಹಿದ್ದೀನ್ ಶಿಬಿರದಲ್ಲಿ ಉಗ್ರರಿಗೆ ತರಬೇತಿ ನೀಡಲಾಗುತ್ತದೆ. ಜಮ್ಮುವಿಗೆ ಉಗ್ರರನ್ನು ನುಸಳುವಂತೆ ಮಾಡಲಾಗುತ್ತದೆ. ಮೊಹಮ್ಮದ್ ಇರ್ಫಾನ್ ಖಾನ್, ಅಲಿಯಾಸ್ ಇರ್ಫಾನ್ ತಂಡಾ ನೇತೃತ್ವದಲ್ಲಿ ನಡೆಯುತ್ತಿದ್ದು, ಇಲ್ಲಿ 20–25 ಸಶಸ್ತ್ರ ಉಗ್ರಗಾಮಿಗಳು ಸದಾ ಸಿದ್ದವಾಗಿರುತ್ತಾರೆ.
  5. ಮರ್ಕಜ್ ಅಹ್ಲೆ ಹದೀಸ್ ಬರ್ನಾಲಾ, ಭಿಂಬರ್
    ಪಾಕ್ ಆಕ್ರಮಿತ ಕಾಶ್ಮೀರದ ಬರ್ನಾಲಾದ ಹೊರವಲಯದಲ್ಲಿರುವ ಈ ಎಲ್‌ಇಟಿ ಶಿಬಿರವನ್ನು ಉಗ್ರಗಾಮಿಗಳು ಪೂಂಚ್, ರಾಜೌರಿ ಮತ್ತು ರಿಯಾಸಿ ವಲಯಗಳಿಗೆ ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡಲು ಬಳಸಲಾಗುತ್ತದೆ. ಕಾರ್ಯಾಚರಣೆಯ ಕಮಾಂಡರ್‌ ಗಳು ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ.
  6. ಮರ್ಕಜ್ ಅಬ್ಬಾಸ್, ಕೋಟ್ಲಿ
    ಜೆಇಎಂ ಕೌನ್ಸಿಲ್‌ ನ ಹಿರಿಯ ಸದಸ್ಯ ಮತ್ತು ಮುಫ್ತಿ ಅಬ್ದುಲ್ ರೌಫ್ ಅಸ್ಗರ್ ಆಪ್ತ ಸಹಾಯಕ ಖಾರಿ ಜರ್ರಾರ್ ನೇತೃತ್ವದ ಪ್ರಮುಖ ಜೆಇಎಂ ಕೇಂದ್ರ ಇದಾಗಿದೆ. ಜರ್ರಾರ್ ಭಾರತದ ಎನ್‌ ಐಗೆ ಬೇಕಾದವನಾಗಿದ್ದಾನೆ. ಈ ತಾಣವು ಪೂಂಚ್ ಮತ್ತು ರಾಜೌರಿ ಮೂಲಕ ಭಾರತದೊಳಗೆ ನುಸುಳಲು ಬಳಕೆಯಾಗುತ್ತದೆ. 125 ಉಗ್ರಗಾಮಿಗಳು ಇಲ್ಲಿ ನೆಲೆಸಿದ್ದಾರೆ.
  7. ಮಸ್ಕರ್ ರಹೀಲ್ ಶಾಹಿದ್, ಕೋಟ್ಲಿ
    ಹಿಜ್ಬುಲ್ ಮುಜಾಹಿದ್ದೀನ್ ನ ಅತ್ಯಂತ ಹಳೆಯ ಶಿಬಿರಗಳಲ್ಲಿ ಒಂದಾದ ಈ ಸೌಲಭ್ಯವು ಪರ್ವತ ಯುದ್ಧಕ್ಕೆ ಸೂಕ್ತವಾದ ಶಸ್ತ್ರಾಸ್ತ್ರ ನಿರ್ವಹಣೆ, ಸ್ನಿಪ್ಪಿಂಗ್ ಮತ್ತು ಬದುಕುಳಿಯುವ ತಂತ್ರಗಳಲ್ಲಿ ತರಬೇತಿ ನೀಡಲಾಗುತ್ತದೆ. 150–200 ಉಗ್ರರಿಗೆ ತರಬೇತಿ ನೀಡುತ್ತದೆ. ಗಡಿಯಾಚೆಗಿನ ಅತಿಕ್ರಮಣಗಳಿಗೆ ಉಗ್ರರನ್ನು ಸಜ್ಜುಗೊಳಿಸುವಲ್ಲಿ ಈ ಕೇಂದ್ರ ಪ್ರಮುಖ ಪಾತ್ರ ವಹಿಸುತ್ತದೆ.
  8. ಶವಾಯಿ ನಲ್ಲಾ ಕ್ಯಾಂಪ್, ಮುಜಫರಾಬಾದ್
    ಬೈತ್-ಉಲ್-ಮುಜಾಹಿದ್ದೀನ್ ಎಂದೂ ಕರೆಯಲ್ಪಡುವ ಈ ಎಲ್‌ಇಟಿ ಶಿಬಿರವು ಮುಜಫರಾಬಾದ್-ನೀಲಂ ರಸ್ತೆಯ ಚೆಲಾಬಂಡಿ ಸೇತುವೆಯ ಸಮೀಪವಿದ್ದು, ಅಜ್ಮಲ್ ಕಸಬ್ ಸೇರಿದಂತೆ 26/11 ದಾಳಿಕೋರರಿಗೆ ತರಬೇತಿ ನೀಡಲಾಗಿತ್ತು.
    ಕಳೆದ ಎರಡು ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ಈ ಸ್ಥಳದಲ್ಲಿ 250 ತರಬೇತಿದಾರರಿದ್ದಾರೆ. ಪಾಕಿಸ್ತಾನ ಸೇನಾ ತರಬೇತುದಾರರು ಶಸ್ತ್ರಾಸ್ತ್ರ ತರಬೇತಿ ನೀಡಲು ಸಹಾಯ ಮಾಡುತ್ತಾರೆ ಎಂದು ತಿಳಿದುಬಂದಿದೆ.
  9. ಮರ್ಕಜ್ ಸೈಯದ್ನಾ ಬಿಲಾಲ್, ಮುಜಫರಾಬಾದ್
    ಈ ಜೆಇಎಂ ಸಾರಿಗೆ ಸೌಲಭ್ಯವು ಮುಜಫರಾಬಾದ್‌ನ ಕೆಂಪು ಕೋಟೆಯ ಎದುರಿನಲ್ಲಿದ್ದು, ಮುಫ್ತಿ ಅಸ್ಗರ್ ಖಾನ್ ಕಾಶ್ಮೀರಿ ಉಸ್ತುವಾರಿ ವಹಿಸಿಕೊಂಡಿದ್ದಾನೆ. ಪರಾರಿಯಾದ ಉಗ್ರ ಆಶಿಕ್ ನೆಂಗ್ರೂ ಮತ್ತು ಇತರರು ಇಲ್ಲಿಂದ ಕಾರ್ಯನಿರ್ವಹಿಸುತ್ತಿದ್ದರು. ಈ ಸೌಲಭ್ಯವನ್ನು ಪಾಕಿಸ್ತಾನ ಸೇನೆಯ ಗಣ್ಯ ವಿಶೇಷ ಸೇವೆಗಳ ಗುಂಪು (SSG) ಜೆಇಎಂ ಹೋರಾಟಗಾರರಿಗೆ ತರಬೇತಿ ನೀಡಲು ಬಳಸಲಾಗುತ್ತದೆ.

More articles

Latest article