ನವದೆಹಲಿ: ಆಪರೇಷನ್ ಸಿಂಧೂರ ಮಿಲಿಟರಿ ಕಾರ್ಯಾಚರಣೆ ಕುರಿತು ಪಾಕಿಸ್ತಾನಕ್ಕೆ ಪೂರ್ವಸೂಚನೆ ನೀಡಿದ ಬಳಿಕ ಭಾರತ ಕಳೆದುಕೊಂಡ ವಿಮಾನಗಳ ಸಂಖ್ಯೆ ಎಷ್ಟು ಎಂದು ಕಾಂಗ್ರೆಸ್ ಮುಖಂಡ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರನ್ನು ಪ್ರಶ್ನಿಸಿದ್ದಾರೆ. ಮೌನ ಖಂಡನೀಯ‘ ಎಂದು ಸೋಮವಾರ ಕಿಡಿಕಾರಿದ್ದಾರೆ.
ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕರ ನೆಲೆಗಳ ಮೇಲೆ ಮಿಲಿಟರಿ ಕಾರ್ಯಾಚರಣೆ ನಡೆಸುವ ಮೊದಲೇ ಭಾರತ ಪಾಕಿಸ್ತಾನಕ್ಕೆ ಮಾಹಿತಿ ನೀಡಿತ್ತು ಎಂದು ಆರೋಪಿಸಿ ರಾಹುಲ್, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಕಾರ್ಯಾಚರಣೆಯ ಆರಂಭಕ್ಕೂ ಮುನ್ನವೇ ಪಾಕಿಸ್ತಾನಕ್ಕೆ ಮಾಹಿತಿ ನೀಡಿದ್ದು ಮಹಾ ಅಪರಾಧ. ಆ ತಪ್ಪನ್ನು ಎಸಗಿರುವುದನ್ನು ಭಾರತ ಸರ್ಕಾರ ಬಹಿರಂಗವಾಗಿಯೇ ಒಪ್ಪಿಕೊಂಡಿದೆ. ಇದಕ್ಕೆ ಅನುಮತಿ ನೀಡಿದ್ದು ಯಾರು? ಈ ಹೇಳಿಕೆಯ ಪರಿಣಾಮ ನಮ್ಮ ವಾಯುಪಡೆ ಎಷ್ಟು ವಿಮಾನಗಳನ್ನು ಕಳೆದುಕೊಂಡಿದೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ಅಲ್ಲದೆ ಈ ಪ್ರಶನೆಗಳಿಗೆ ವಿದೇಶಾಂಗ ಸಚಿವರು ಮೌನ ಮುರಿಯಬೇಕು ಎಂದೂ ಆಗ್ರಹಪಡಿಸಿದ್ದಾರೆ.
ಮಿಲಿಟರಿ ಕಾರ್ಯಾಚರಣೆಯ ಆರಂಭದಲ್ಲಿ, ಭಯೋತ್ಪಾದಕರ ನೆಲೆಗಳ ಮೇಲೆ ದಾಳಿ ಮಾಡುತ್ತಿದ್ದೇವೆಯೇ ಹೊರತು ಮಿಲಿಟರಿಯ ಮೇಲೆ ದಾಳಿ ಮಾಡುತ್ತಿಲ್ಲ ಎಂದು ನಾವು ಪಾಕಿಸ್ತಾನಕ್ಕೆ ಸಂದೇಶವನ್ನು ನೀಡಿದ್ದೆವು. ಈ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡದಿರುವ ಆಯ್ಕೆ ಮಿಲಿಟರಿಗಿದೆ. ಆದರೆ ಅವರು ಆ ಒಳ್ಳೆಯ ಸಲಹೆ ಸ್ವೀಕರಿಸದಿರಲು ನಿರ್ಧರಿಸಿದರು ಎಂದು ಜೈಶಂಕರ್ ವಿಡಿಯೊದಲ್ಲಿ ಹೇಳುವುದನ್ನು ಕೇಳಬಹುದಾಗಿದೆ.
ಇಂದು ಮತ್ತೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಜೈಶಂಕರ್ ಅವರ ಮೌನ ಒಪ್ಪತಕ್ಕದ್ದಲ್ಲ. ಹಾಗಾಗಿ ನಾನು ಮತ್ತೊಮ್ಮೆ ಪ್ರಶನಿಸುತ್ತಿದ್ದೇನೆ. ಪಾಕಿಸ್ತಾನಕ್ಕೆ ಕಾರ್ಯಾಚರಣೆ ಬಗ್ಗೆ ಮೊದಲೇ ತಿಳಿದಿದ್ದರಿಂದ ನಾವು ಎಷ್ಟು ವಿಮಾನಗಳನ್ನು ಕಳೆದುಕೊಂಡಿದ್ದೇವೆ? ಎಂದು ಅವರು ಕೇಳಿದ್ದಾರೆ.
ರಾಹುಲ್ ಗಾಂಧಿ ಅವರ ಆರೋಪವನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿರಸ್ಕರಿಸಿದೆದ್ದು, ಅವರ ಹೇಳಿಕೆ ಸತ್ಯಕ್ಕೆದೂರವಾಗಿದೆ ಎಂದು ಪ್ರತಿಕ್ರಿಯೆ ನೀಡಿದೆ. ಮೇ 7ರಂದು ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಆರಂಭಿಕ ಹಂತದಲ್ಲಿ ಭಾರತವು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿತ್ತೇ ಹೊರತು, ಮುಂಚಿತವಾಗಿ ನೀಡಿದ ಎಚ್ಚರಿಕೆಯಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.