ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಗಡಿಯಲ್ಲಿ ಗುಂಡಿನ ಮೊರೆತ ನಿಂತಿದ್ದರೂ ಗಡಿ ಭಾಗದ ನಿವಾಸಿಗಳಲ್ಲಿ ಆತಂಕ ಮಾತ್ರ ಕಡಿಮೆಯಾಗಿಲ್ಲ. ಜನರು ಇನ್ನೂ ಭಯಭೀತರಾಗಿದ್ದು, ಮನೆಯಿಂದ ಹೊರಬರಲು ಭಯಭೀತರಾಗಿದ್ದಾರೆ.
ಈ ಮಧ್ಯೆ ಆಪರೇಷನ್ ಸಿಂಧೂರ ನಡೆಸಿದ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಸೇನೆಗೆ ಅಪಾರ ನಷ್ಟ ಉಂಟಾಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ. ಮಿಲಿಟರಿ ಕಾರ್ಯಾಚರಣೆಗಳ ಮಹಾ ನಿರ್ದೇಶಕ (ಡಿಜಿಎಂಒ) ಲೆಫ್ಟಿನೆಂಟ್ ಜನರಲ್ ರಾಜೀವ್ ಘಯಿ ಮಾತನಾಡಿ ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ಕೆಲವು ಫೈಟರ್ ಜೆಟ್‌ಗಳನ್ನು ಹೊಡೆದುರುಳಿಸಲಾಗಿದೆ. ಪಾಕ್ ರಾಜಧಾನಿ ಇಸ್ಲಾಮಾಬಾದ್‌ಗೆ ಸಮೀಪವಿರುವ ಪ್ರಮುಖ ಸೇನಾ ನೆಲೆಗಳಿಗೆ ಅಪಾರ ಹಾನಿಯುಂಟಾಗಿದೆ ಅವರು ತಿಳಿಸಿದ್ದಾರೆ.
ಮೇ 7ರಿಂದ 10ರವರೆಗೆ ಭಾರತದ ಸೇನಾ ಪಡೆಗಳು ನಡೆಸಿದ ದಾಳಿಯಲ್ಲಿ ಪಾಕಿಸ್ತಾನ ಸೇನೆಯ 35 ರಿಂದ 40 ಯೋಧರು ಸಾವನ್ನಪ್ಪಿದ್ದಾರೆ. ಭಾರತ ತನ್ನನಿರೀಕ್ಷಿತ ಗುರಿ ತಲುಪುವಲ್ಲಿ ಯಶಸ್ವಿಯಾಗಿದೆ. ಒಂದು ವೇಳೆ ಪಾಕಿಸ್ತಾನ ಮತ್ತೆ ಇಂತಹ ದುಸ್ಸಾಹಸಕ್ಕೆ ಕೈ ಹಾಕಿದರೆ ಭಾರಿ ಬೆಲೆ ತೆರ ಬೇಕಾಗುತ್ತದೆ ಎಂದು ರಾಜೀವ್ ಘಯಿ ಎಚ್ಚರಿಕೆ ನೀಡಿದ್ದಾರೆ.
ಭಾರತೀಯ ಸೇನೆಗೂ ನಷ್ಟ ಉಂಟಾಗಿದೆ ಎಂದು ಒಪ್ಪಿಕೊಂಡ ಅವರು ಸಧ್ಯ ಕಾರ್ಯಾಚರಣೆ ಮುಂದುವರೆಯುತ್ತಿರುವುದರಿಂದ ವಿವರಗಳನ್ನು ನೀಡಲು ಅಸಾಧ್ಯ ಎಂದರು.
ಭಾರತದ ಯುದ್ಧ ವಿಮಾನಗಳನ್ನು ಪಾಕ್ ಪಡೆಗಳು ಹೊಡೆದುರುಳಿಸಿವೆ ಎಂಬ ವಿದೇಶಿ ಮಾಧ್ಯಮಗಳ ವರದಿಗೆ ಪ್ರತಿಕ್ರಿಯೆ ನೀಡಿದ ಏರ್‌ಮಾರ್ಷಲ್ ಎ.ಕೆ. ಭಾರ್ತಿ, ನಾವು ಯುದ್ಧದ ಸನ್ನಿವೇಶದಲ್ಲಿದ್ದೇವೆ. ನಷ್ಟ ಯುದ್ಧದ ಭಾಗ ಎಂದು ಸೂಚ್ಯವಾಗಿ ಉತ್ತರಿಸಿದರು. ಇಲ್ಲಿ ಉಗ್ರರ ನೆಲೆಗಳನ್ನು ನಾಶಮಾಡುವ ನಮ್ಮ ಗುರಿಗಳನ್ನು ನಾವು ಸಾಧಿಸಿದ್ದೇವೆ ಎಂಬುದಷ್ಟೇ ಮುಖ್ಯ. ನಾವು ನಿಗದಿಪಡಿಸಿದ ನಮ್ಮ ಗುರಿ ಸಾಧಿಸಿದ್ದೇವೆ ಎಂದರು.