ಬೆಂಗಳೂರು: ಮಾರ್ಚ್ 26ರಂದು ರಾಜ್ಯದಲ್ಲಿ ನಡೆಯಲಿರುವ ಮೊದಲ ಹಂತದ ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರ ಇಂದು ಸಂಜೆ ಅಂತ್ಯಗೊಳ್ಳಲಿದ್ದು, ವ್ಯಾಪಕ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
14 ಲೋಕಸಭಾ ಕ್ಷೇತ್ರಗಳಲ್ಲಿ ಮಾ.26ರಂದು ಚುನಾವಣೆಗಳು ನಡೆಯಲಿದ್ದು, ಇಂದು ಸಂಜೆಯಿಂದ ಅಭ್ಯರ್ಥಿಗಳು ಮತ್ತು ಬೆಂಬಲಿಗರು ಮನೆ ಮನೆ ಪ್ರಚಾರವನ್ನಷ್ಟೇ ಮಾಡಬಹುದಾಗಿದೆ.
ಮಾರ್ಚ್ 26ರಂದು ನಡೆಯಲಿರುವ 14 ಲೋಕಸಭಾ ಕ್ಷೇತ್ರಗಳ ಚುನಾವಣೆ ಪೈಕಿ 11 ಕ್ಷೇತ್ರಗಳಲ್ಲಿ ಕಾಂಗ್ರೆಸ್ –ಬಿಜೆಪಿ ನೇರ ಸ್ಪರ್ಧೆ ಇದ್ದು, ಉಳಿದ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಹಣಾಹಣಿ ನಡೆದಿದೆ.
ಉಡುಪಿ – ಚಿಕ್ಕಮಗಳೂರು , ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ , ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಸೆಂಟ್ರಲ್, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಕ್ಷೇತ್ರಗಳಲ್ಲಿ ಮೊದಲ ಹಂತದ ಚುನಾವಣೆ ನಡೆಯಲಿದ್ದು, ಒಟ್ಟು 247 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆ ಮಾಡುತ್ತಿದ್ದಾರೆ.
ಮೊದಲ ಹಂತದ ಚುನಾವಣೆಯಲ್ಲಿ ಬೆಂಗಳೂರಿನ ಎಲ್ಲ ಲೋಕಸಭಾ ಸ್ಥಾನಗಳಿಗೆ ಮತದಾನ ನಡೆಯಲಿದ್ದು, ಸಕಲ ಸಿದ್ದತೆಗಳು ನಡೆಯುತ್ತಿವೆ. ಉದ್ಯಾನ ನಗರಿಯಲ್ಲಿ 1.1 ಕೋಟಿ ಮತದಾರರಿದ್ದು, 4,492 ಮತಗಟ್ಟೆಗಳಿವೆ. 11,000 ಸಿಆರ್ ಪಿಎಫ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. 11 ಸಿಆರ್ ಪಿಎಳ್, 14 ಕೆಎಸ್ ಆರ್ಪಿ, 40 ಸಿಎಆರ್ ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಬೆಂಗಳೂರಿನಲ್ಲಿ ಇಂದು ಸಂಜೆ ಆರು ಗಂಟೆಯಿಂದಲೇ 144ನೇ ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗುತ್ತಿದ್ದು, ಏ.26ರವರೆಗೆ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.