ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇಂದು ಅದ್ದೂರಿ ಚಾಲನೆ ಸಿಕ್ಕಿದೆ. ಉದ್ಘಾಟನಾ ಭಾಷಣ ಮಾಡಿದ ಸಮ್ಮೇಳನದ ಸರ್ವಾಧ್ಯಕ್ಷರಾದ ನಾಡೋಜ ಗೊ. ರು. ಚನ್ನಬಸಪ್ಪ ಅವರು 1ನೇ ತರಗತಿಯಿಂದ 10ನೇ ತರಗತಿವರೆಗೆ ಕನ್ನಡ ಮಾಧ್ಯಮವೇ ಕಡ್ಡಾಯವಾಗಬೇಕು. ಯಾವುದೇ ಕಾರಣಕ್ಕೂ ಬೇರೆ ಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿ ಹೇರಬಾರದು. ಶಿಕ್ಷಣ ಮಾಧ್ಯಮ ಕನ್ನಡ ಮಾಧ್ಯಮದಲ್ಲೇ ಆಗಬೇಕು. ಎಲ್ಲರಿಗೂ ಶಿಕ್ಷಣ ನೀಡುವುದನ್ನು ಸರ್ಕಾರ ಕರ್ತವ್ಯವಾಗಿ ಪರಿಗಣಿಸಬೇಕು. ಒಬ್ಬನೇ ಒಬ್ಬ ವಿದ್ಯಾರ್ಥಿ ಇದ್ದರೂ ಸರ್ಕಾರಿ ಶಾಲೆ ಮುಚ್ಚಬಾರದು. ಆಧುನಿಕ ತಂತ್ರಜ್ಞಾನವನ್ನು ಭಾಷೆಯ ಬೆಳೆವಣಿಗೆಗೆ ಹೇಗೆ ಬೆಳಸಿಕೊಳ್ಳಬೇಕು ಎಂಬುದು ಮುಖ್ಯ. ಈ ವಿಚಾರದಲ್ಲಿ ರಾಜ್ಯ ಹಿಂದೆ ಬೀಳಬಾರದು ಎಂದು ಸಲಹೆ ನೀಡಿದ್ದಾರೆ.
ತೆರಿಗೆ ವಿಚಾರ ಪ್ರಸ್ತಾಪಿಸಿದ ಗೊರುಚ ಅವರು, ಹಣಕಾಸು ಆಯೋಗ ಕರ್ನಾಟಕಕ್ಕೆ ಬರಬೇಕಾದ ತೆರಿಗೆಯ ಪಾಲನ್ನು ವರ್ಗಾಯಿಸುತ್ತಿಲ್ಲ. ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತಿರುವುದರಲ್ಲಿ ಸತ್ಯಾಂಶವಿದೆ. ಈ ಮಾತನ್ನು ರಾಜಕೀಯವಾಗಿ ನೋಡದಂತೆ ಸಲಹೆ ನೀಡಿದ್ದಾರೆ.
ಮಂಡ್ಯದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಸಾಕಷ್ಟು ಖುಷಿಯ ವಿಚಾರ ಎಂದು ಗೊ.ರು ಚನ್ನಬಸಪ್ಪ ಅವರು ಭಾಷಣದ ಮಧ್ಯೆ ಭಾವುಕರಾಗಿದ್ದಾರೆ. ಕಸಾಪ ಕನ್ನಡ ಪ್ರಾತಿನಿಧಿಕ ಸಂಸ್ಥೆಯಾಗಿದೆ. ಮಂಡ್ಯ ಸಾಕಷ್ಟು ಹೆಸರು ಮಾಡಿರುವ ಜಿಲ್ಲೆ. ರಾಜಕೀಯಕ್ಕೆ ಹೆಚ್ಚು ಕೊಡುಗೆ ಕೊಟ್ಟಿದೆ. ಮಂಡ್ಯದಲ್ಲಿ ಹೆಚ್ಚು ಕನ್ನಡ ಮಾತನಾಡುತ್ತಾರೆ. ನನಗೆ ಗೌರವಾಧ್ಯಕ್ಷ ಮಾಡಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದ್ದಾರೆ.
1994ರಲ್ಲಿ ನಾನು ಕಸಾಪ ಅಧ್ಯಕ್ಷನಾಗಿದ್ದೆ. ಆಗ ಮಂಡ್ಯದಲ್ಲಿ ಸಾಹಿತ್ಯ ಸಮ್ಮೇಳನ ನಡೆದಿತ್ತು. ಸಿಕ್ಕಿರುವ ಅವಕಾಶ ಅನಿರೀಕ್ಷಿತ. ನನಗೆ ಅಧ್ಯಕ್ಷರಾಗಬೇಕು ಎಂದಾಗ ಬೆರಗಾದೆ. ಪರಿಷತ್ ಕನ್ನಡಿಗರ ಸಾರ್ವಭೌಮ ಸಂಸ್ಥೆ. ನನಗೆ ಧ್ವಜ ಹಸ್ತಾಂತರ ಮಾಡಿರುವುದು ರಾಜಕೀಯ ಅಲ್ಲ. ಇದಕ್ಕೆ ಒಂದು ಘನತೆ ಇದೆ. ಶಿಕ್ಷಣ, ತಂತ್ರಜ್ಞಾನ, ಹಿಂದಿ ಏರಿಕೆ, ಗಣಿಗ ಕಲಿಕಾ ಕೇಂದ್ರಗಳು, ಪರಿಸರ ಸಂರಕ್ಷಣೆ ಇವುಗಳ ಬಗ್ಗೆ ಚರ್ಚೆ ಮಾಡಬೇಕು. ನಮ್ಮ ಭಾಷೆ ಸಮೃದ್ಧವಾಗಿ ಬೆಳೆಯಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.