ಹಾಸನ: ಪ್ರಜ್ವಲ್ ರೇವಣ್ಣ ಎಸಗಿರುವ ಲೈಂಗಿಕ ಹಿಂಸಾಕಾಂಡದಲ್ಲಿ ನೊಂದ ಮಹಿಳೆಯರೊಂದಿಗೆ ಪ್ರತಿ ಹಂತದಲ್ಲಿ ನಾವು ಇದ್ದೇವೆ ಮತ್ತು ಇರುತ್ತೇವೆ. ಸಂತ್ರಸ್ತ ಮಹಿಳೆಯರು ಯಾವ ಕಾರಣಕ್ಕೂ ಅಂಜಬೇಕಿಲ್ಲ, ತಪ್ಪಿತಸ್ಥ ಭಾವದಲ್ಲಿ ನರಳಬೇಕಿಲ್ಲ, ಇದು ಎಲ್ಲರ ಹೋರಾಟ, ಧೈರ್ಯಗೆಡುವುದು ಬೇಡ ಎಂದು ಸಾಮಾಜಿಕ ಹೋರಾಟಗಾರ್ತಿ ಸುಭಾಷಿಣಿ ಅಲಿ ಹೇಳಿದರು.
ಕಾಮಕಾಂಡ ನಡೆಸಿ ವಿದೇಶಕ್ಕೆ ಪರಾರಿಯಾಗಿರುವ ಸಂಸದ, ಎನ್ ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣನನ್ನು ಬಂಧಿಸಬೇಕು ಮತ್ತು ಸಂತ್ರಸ್ತೆಯರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿ ಹಾಸನದಲ್ಲಿ ಇಂದು ನಡೆಯುತ್ತಿರುವ ಬೃಹತ್ ಹೋರಾಟದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಹೋರಾಟ ಹೊಸದೊಂದು ಇತಿಹಾಸ ಬರೆದಿದೆ, ನಾನು ಉತ್ತರ ಪ್ರದೇಶದಿಂದ ಬಂದು ನಿಮ್ಮೊಂದಿಗೆ ಸೇರಿಕೊಂಡಿದ್ದದೇನೆ. ಇಂದು ಪುರುಷಪ್ರಧಾನ ಮೌಲ್ಯಗಳು ಜೀವಂತವಾಗಿರುವುದರ ಜೊತೆಗೆ ನವ ಬಂಡವಾಳಶಾಹಿ ವ್ಯವಸ್ಥೆ, ನವ ಉದಾರವಾದಿ ವ್ಯವಸ್ಥೆ ಮಹಿಳೆಯರ ಮೇಲಿನ ಹಿಂಸೆಯನ್ನು ಮತ್ತೊಂದಷ್ಟು ಹೆಚ್ಚಿಸಿದೆ,. ಈಗ ನಾವು ಕೋಮುವಾದಿ ವ್ಯವಸ್ಥೆ, ಬಂಡವಾಳವಾದಿ ವ್ಯವಸ್ಥೆ ಮತ್ತು ಪಿತೃಪ್ರಧಾನ ವ್ಯವಸ್ಥೆಗಳ ವಿರುದ್ಧ ಏಕಕಾಲದಲ್ಲಿ ನಾವು ಹೋರಾಟ ಮಾಡಬೇಕಾಗಿದೆ ಎಂಧು ಅವರು ಹೇಳಿದರು.
ಈ ಸಂಘರ್ಷದ ನಮ್ಮ ಬಹುದೊಡ್ಡ ಆಗ್ರಹವೇನೆಂದರೆ ಆರೋಪಿ ಪ್ರಜ್ವಲ್ ರೇವಣ್ಣ, ರೇವಣ್ಣ ಮತ್ತು ಇನ್ನಿತರ ಎಲ್ಲ ಆರೋಪಿಗಳನ್ನು ಕೂಡಲೇ ಬಂಧೀಸಬೇಕು. ʼನೋ ಬೇಲ್ ಓನ್ಲೀ ಜೈಲ್ʼ, ಅವರಿಗೆ ಯಾವ ಕಾರಣಕ್ಕೂ ಜಾಮೀನು ನೀಡಬಾರದು, ಜೈಲು ಮಾತ್ರ ಅವರಿಗೆ ಸಿಗಬೇಕು. ಕರ್ನಾಟಕ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ, ಅವರು ತಮ್ಮ ಪ್ರಭಾವ ಬಳಸಬಹುದು, ಅದಕ್ಕೆ ಮಣಿಯಬಾರದು, ಅಪರಾಧ ಮಾಡಿದವರಿಗೆ ತಕ್ಕ ಶಿಕ್ಷೆ ನೀಡಲೇಬೇಕು ಎಂದು ಅವರು ಆಗ್ರಹಿಸಿದರು.
ಜನರು ನಿಮಗೆ ಮತ ಹಾಕಿದ್ದು ಯಾರಾದರೂ ತಮ್ಮ ಕಷ್ಟಗಳನ್ನು ಪರಿಹರಿಸಿಕೊಳ್ಳಲು ಬಂದಾಗ, ಪಂಚಾಯ್ತಿಗೆ ಟಿಕೆಟ್ ಕೇಳಲು ಬಂದಾಗ, ಕೆಲಸದಲ್ಲಿ ಮೇಲಕ್ಕೆ ಹೋಗಲು ನೆರವು ಕೇಳಿ ಬಂದಾಗ ಅವರಿಗೆ ಸಹಾಯ ಮಾಡಬೇಕೇ ಹೊರತು ಅವರನ್ನು ದುರ್ಬಳಕೆ ಮಾಡುವುದಲ್ಲ, ಹಾಗೆ ಅವರು ತಮ್ಮ ಅಧೀಕಾರವನ್ನು ದುರ್ಬಳಕೆ ಮಾಡಿದ್ದನ್ನು ಶಿಕ್ಷಿಸಬೇಕಾದದ್ದು ಸರ್ಕಾರದ ಕರ್ತವ್ಯ, ನೊಂದವರಿಗೆ ರಕ್ಷಣೆ, ಕಾನೂನು ನೆರವು ಮತ್ತು ಪರಿಹಾರ ಒದಗಿಸಲೇಬೇಕು. ಅದನ್ನು ಸರ್ಕಾರ ಮಾಡದಿದ್ದರೆ ಸರ್ಕಾರ ತನ್ನ ಜವಾಬ್ದಾರಿ ನಿಭಾಯಿಸುವಂತೆ ನಾವು ಮಾಡುತ್ತೇವೆ ಎಂದು ಅವರು ಎಚ್ಚರಿಸಿದರು.
ಸರ್ಕಾರದ ದೊಡ್ಡ ನಾಯಕರು ಹೇಳಿದರು, ಈ ಹತ್ತು ವರ್ಷಗಳಲ್ಲಿ ನಾವು ನಿಮಗೆ ಕೇವಲ ಟ್ರೈಲರ್ ತೋರಿಸಿದ್ದೇವೆ, ಇನ್ನೂ ಸಿನೆಮಾ ಬಾಕಿ ಇದೆ ಎಂದು. ಇವರು ತೋರಿಸಿದ ಟ್ರೈಲರ್ ಏನು? ಬಿಲ್ಕೀಸ್ ಬಾನು ಅಪರಾಧಿಗಳಿಗೆ ಬಿಡುಗಡೆ, ಬ್ರಿಜ್ ಭೂಷಣ್ ಸಿಂಗ್ ಮಗನಿಗೆ ಟಿಕೆಟ್, ಅಪರಾಧಿಗಳಿಗೆ ರಕ್ಷಣೆ- ಇವರಿಗೆ ನಾವು ಹೇಳಬೇಕಾಗಿದೆ, ನಿಮ್ಮ ಪಿಕ್ಚರ್ ನಡೆಯಲೂ ನಾವು ಬಿಡುವುದಿಲ್ಲ, ನಿಮ್ಮ ಪಿಕ್ಚರ್ ನಡೆಯಲೂ ನಾವು ಬಿಡುವುದಿಲ್ಲ. ನಾವು ಜೂನ್ 4ರ ನಂತರ ಬೇರೆಯೇ ಚಿತ್ರ ತೋರಿಸುತ್ತೇವೆ.
ನಾವು ಶಿಕ್ಷಣ ಪಡೆಯುತ್ತೇವೆ, ಉದ್ಯೋಗ ಪಡೆಯುತ್ತೇವೆ, ಚುನಾವಣೆಯಲ್ಲಿ ಸ್ಫರ್ಧಿಸಲು ಟಿಕೆಟ್ ಪಡೆಯುತ್ತೇವೆ, ನಿಮಗೆ ಸವಾಲೊಡ್ಡುತ್ತೇವೆ, ನಿಮ್ಮ ಪಾಳೆಗಾರಿಕೆಗೆ ಸೆಡ್ಡು ಹೊಡೆಯುತ್ತೇವೆ, ನಾವು ಎದ್ದು ಬಂದೇ ಬರುತ್ತೇವೆ. ನಾವು ಹೋರಾಡುತ್ತೇವೆ, ನಾವು ಗೆಲ್ಲುತ್ತೇವೆ ಎಂದು ಅವರು ಘೋಷಿಸಿದರು.