ಆನ್ ಲೈನ್ ಟ್ರೇಡಿಂಗ್ ಹಗರಣ ಪ್ರಕರಣವೊಂದರಲ್ಲಿ ಖಾಸಗಿ ಬ್ಯಾಂಕ್ ವ್ಯವಸ್ಥಾಪಕ ಸೇರಿದಂತೆ 8 ಮಂದಿಯನ್ನು ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ. ಈ ತಂಡವು ಆನ್ ಲೈನ್ ಟ್ರೇಡಿಂಗ್ ನಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ಗಳಿಸಬಹುದು ಎಂದು ಗ್ರಾಹಕರನ್ನು ನಂಬಿಸಿದ್ದರು. ಇವರ ಮಾತುಗಳಿಗೆ ಮರುಳಾದ ಅನೇಕ ಮಂದಿ ಹೂಡಿಕೆ ಮಾಡಿ ನಷ್ಟ ಮಾಡಿಕೊಂಡಿದ್ದರು.
ಇವರ ವಂಚನೆ ಕುರಿತು ಯಲಹಂಕದ ಉದ್ಯಮಿಯೊಬ್ಬರು ದೂರು ನೀಡಿದ್ದರು. ಇವರು ಸುಮಾರು 1.5 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದರು. ವಂಚಕರು ಮಾರ್ಚ್ ನಿಂದ ಜೂನ್ ತಿಂಗಳವರೆಗೆ ನಿಮಗೆ 28 ಕೋಟಿ ರೂಪಾಯಿ ಲಾಭ ಬಂದಿದೆ ಎಂದು ನಂಬಿಸಿದ್ದರು. ಇದಕ್ಕಾಗಿ ಇವರು ನಕಲಿ ವೆಬ್ ಸೈಟ್ ಸೃಷ್ಟಿಸಿ ಕೇವಲ ನಾಲ್ಕು ತಿಂಗಳಲ್ಲಿ ಲಾಭ ಬಂದಿರುವ ಹಾಗೆ ತೋರಿಸಿದ್ದರು. ಆದರೆ ಈ ಈ ಹಣವನ್ನು ಹಿಂಪಡೆಯಲು ಉದ್ಯಮಿಗೆ ಸಾಧ್ಯವಾಗಿರಲಿಲ್ಲ. ಈ ಹಣವನ್ನು ಹಿಂಪಡೆಯಲು ಮತ್ತೆ 75 ಲಕ್ಷ ರೂಪಾಯಿ ಶುಲ್ಕವನ್ನು ಪಾವತಿಸಬೇಕು ಎಂದು ವಂಚಕರು ನಂಬಿಸಿದ್ದರು.
ಉದ್ಯಮಿಗೆ ಇವರ ಮಾತುಗಳಲ್ಲಿ ನಂಬಿಕೆ ಉಂಟಾಗಲಿಲ್ಲ. ಹಾಗಾಗಿ ಇವರು ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರ ತಂಡ ನಕಲಿ ಆರೋಪಿಗಳ ಖಾಸಗಿ ಬ್ಯಾಂಕ್ ಗಳ ನಾಲ್ಕು ಖಾತೆಗಳನ್ನು ಪರಿಶೀಲಿಸಿದಾಗ ಇವರು ಭಾರಿ ಪ್ರಮಾಣದ ವಂಚನೆ ಎಸಗಿರುವುದು ಪತ್ತೆಯಾಗಿತ್ತು. ಚಿಕ್ಕಮಗಳೂರಿನ ಓರ್ವ ಮಹಿಳೆ ಸೇರಿದಂತೆ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಮಗಳೂರಿನ ಈ ವಂಚನೆಯ ಕಿಂಗ್ ಪಿನ್ ಸಧ್ಯ ದುಬೈನಲ್ಲಿದ್ದು ಅಲ್ಲಿಂದಲೇ ವಂಚಿಸುತ್ತಿದ್ದಾನೆ ಎಂದು ತಿಳಿದು ಬಂದಿದೆ. ಬಂದಿದೆ. ಈ ನಾಲ್ಕು ಖಾತೆಗಳಿಂದ ಸುಮಾರು 97 ಕೋಟಿ ರೂ. ವಹಿವಾಟು ನಡೆದಿದೆ. ಈ ತಂಡವು ದೇಶಾದ್ಯಂತ ಸುಮಾರು 254 ವಂಚನೆಯ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ವಂಚನೆ ನಡೆಸಲು ಬಳಸಿದ್ದ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿರುವ ಪೊಲೀಸರು 28 ಲಕ್ಷ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ.