ಅರಣ್ಯ ಅಪರಾಧಕ್ಕೆ ಇನ್ನು ಮುಂದೆ ಆನ್ ಲೈನ್ ಎಫ್ಐಆರ್

Most read

ಬೆಂಗಳೂರು: ಅರಣ್ಯ ಮತ್ತು ವನ್ಯಜೀವಿ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಚಾಲ್ತಿಯಲ್ಲಿರುವ ಕಾನೂನು ಚೌಕಟ್ಟನ್ನು ಬಲಪಡಿಸಲು “ಗರುಡಾಕ್ಷಿ” ಆನ್ ಲೈನ್ ಎಫ್.ಐ.ಆರ್. ವ್ಯವಸ್ಥೆ ಅಭಿವೃದ್ಧಿಪಡಿಸಿದ್ದು, ಜ.7ರಂದು ವಿಧಾನಸೌಧದಲ್ಲಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಉದ್ಘಾಟಿಸಲಿದ್ದಾರೆ.

ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ಕಾನೂನುಗಳ ಅಡಿಯಲ್ಲಿ ಅರಣ್ಯ ಅಪರಾಧ ಪ್ರಕರಣಗಳನ್ನು ನಿರ್ವಹಿಸಲು ಮತ್ತು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡಲು ಈ ತಂತ್ರಾಂಶವು ಸಹಕಾರಿಯಾಗಲಿದೆ.
ಈಗಾಗಲೇ ರಾಜ್ಯ ಪೊಲೀಸ್‌ ಇಲಾಖೆಯಲ್ಲಿರುವಂತೆ ಅರಣ್ಯ ಇಲಾಖೆಯಲ್ಲಿ ಸಹ ಪ್ರಥಮ ವರ್ತಮಾನ ವರದಿಯನ್ನು (FIR) ಗಳನ್ನು ಆನ್‌ಲೈನ್‌ ನಲ್ಲಿ/ ಡಿಜಿಟಲ್ ಸ್ವರೂಪಕ್ಕೆ ಪರಿವರ್ತಿಸುವಂತೆ ಈಶ್ವರ ಖಂಡ್ರೆ ಅವರು ಸೂಚಿಸಿದ್ದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ Wild Life Trust of India (WTI) ಸಹಯೋಗದೊಂದಿಗೆ ಗರುಡಾಕ್ಷಿ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ.

ಪ್ರಾಯೋಗಿಕವಾಗಿ 5 ವಿಭಾಗದಲ್ಲಿ ಜಾರಿ:

ಗರುಡಾಕ್ಷಿ ತಂತ್ರಾಂಶವನ್ನು ಪ್ರಾಯೋಗಿಕವಾಗಿ ಬೆಂಗಳೂರು ನಗರ ವಿಭಾಗ, ಬೆಂಗಳೂರು ಅರಣ್ಯ ಸಂಚಾರಿ ದಳ ವಿಭಾಗ, ಭದ್ರಾವತಿ ವಿಭಾಗ, ಶಿರಸಿ ವಿಭಾಗ ಮತ್ತು ಮಲೈ ಮಹದೇಶ್ವರ ವನ್ಯ ಜೀವಿ ವಿಭಾಗಗಳಲ್ಲಿ ಪ್ರಾಯೋಗಿಕವಾಗಿ (Pilot) ಜಾರಿಗೊಳಿಸಲಾಗತ್ತದೆ. ನಂತರ ಇದನ್ನು ಹಂತ ಹಂತವಾಗಿ ಎಲ್ಲ ವಿಭಾಗಕ್ಕೂ ವಿಸ್ತರಿಸಲಾಗುವುದು.

ಗರುಡಾಕ್ಷಿ ಆನ್ ಲೈನ್ ಎಫ್..ಆರ್. ವ್ಯವಸ್ಥೆ ಅರಣ್ಯ ಮತ್ತು ವನ್ಯಜೀವಿ ಅಪರಾಧಗಳ ನಿರ್ವಹಣೆಯಲ್ಲಿ ಅತ್ಯಂತ ಮಹತ್ವದ ಮೈಲಿಗಲ್ಲಾಗಿದ್ದು, ಪಾರದರ್ಶಕ, ಸುವ್ಯವಸ್ಥಿತ, ಪರಿಹಾರವಾಗಿ ಅರಣ್ಯ ಅಪರಾಧ ತಡೆಯಲು ಇಲಾಖೆಗೆ ಬಲ ತುಂಬಲಿದೆ.

More articles

Latest article