ಬೆಂಗಳೂರು: ಆನ್ಲೈನ್ ಜೂಜಾಟದ ಆಪ್ ನಲ್ಲಿ ಕೋಟ್ಯಂತರ ರೂಪಾಯಿ ಹಣ ಕಳೆದುಕೊಂಡಿರುವ ಬೆಂಗಳೂರಿನ ಖಾಸಗಿ ಕಂಪನಿಯೊಂದರ ಉದ್ಯೋಗಿಯೊಬ್ಬರು ಇದೀಗ ಆಪ್ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ. ನಿಶಾಂತ್ ಶ್ರೀವತ್ಸ ಎಂಬುವರು ಆನ್ಲೈನ್ ಗೇಮಿಂಗ್ ಆಪ್ನಲ್ಲಿ ಸುಮಾರು 3 ಕೋಟಿ ರೂ ಹಣವನ್ನು ಕಳೆದುಕೊಂಡಿದ್ದರು. ಈ ಸಂಬಂಧ ಅವರು ಇಂದು ಕೇಂದ್ರ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಮ್ಮ ಹಣವನ್ನು ದುರ್ಬಳಕೆ ಮಾಡಿಕೊಂಡು ಆಪ್ ವಂಚನೆ ಮಾಡಿದೆ. ಇದನ್ನು ನಂಬಿ ಹಲವು ಗ್ರಾಹಕರು ಮೋಸ ಹೋಗಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
ದೂರಿನ ಆಧಾರದ ಮೇಲೆ, ಪಾಕೆಟ್ 52 ಅಪ್ಲಿಕೇಶನ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಆನ್ಲೈನ್ ಜೂಜಿನ ಆಪ್ ಆಗಿರುವ ಪಾಕೆಟ್ 52 ಸಣ್ಣ ಪುಟ್ಟ ಮೊತ್ತದ ಹಣ ಹಾಕಿದಾಗ ಗೆಲ್ಲಲು ಅನುವು ಮಾಡಿಕೊಡುತ್ತದೆ. ದೊಡ್ಡ ಮೊತ್ತದ ಹಣ ಹಾಕಿದಾಗ ಸೋಲಿಸುತ್ತದೆ. ನಾವು ಆಡಿದ ಟೇಬಲ್ ಬಗ್ಗೆ ಮಾಹಿತಿಯನ್ನು ಒದಗಿಸುವುದಿಲ್ಲ. ಈ ಆಪ್ ಹಲವು ಲೋಪದೋಷಗಳನ್ನು ಹೊಂದಿದೆ ಮತ್ತು ಯಾವುದೇ ರೀತಿಯ ಭದ್ರತೆಯನ್ನು ಹೊಂದಿಲ್ಲ ಎಂದು ದೂರಿನಲ್ಲಿ ವಿವರಿಸಲಾಗಿದೆ.