ಒಂದು ರಾಷ್ಟ್ರ ಒಂದು ಚುನಾವಣೆ – ಬಹುತ್ವವನ್ನು ಕೊಲ್ಲುವ ಚಿತಾವಣೆ

Most read

ನಮ್ಮದು ಬಹುತ್ವ ಸ್ವರೂಪದ ದೇಶ. ವೈವಿಧ್ಯವೇ ಇಲ್ಲಿನ ವೈಶಿಷ್ಟ್ಯ. ಇಂಥ ದೇಶದಲ್ಲಿ ಏಕ ಮತಧರ್ಮ, ಏಕ ಸಂಸ್ಕೃತಿ, ಏಕ ಭಾಷೆ, ಏಕ ಆಹಾರ ಪದ್ಧತಿ, ಏಕ ಚುನಾವಣೆ ಎಂದೆಲ್ಲ ‘ಏಕ’ಗಳನ್ನು ಹೇರುವುದು ದೇಶದ ಅಸ್ತಿತ್ವಕ್ಕೇ ಅಪಾಯಕಾರಿ. ಬಹುತ್ವ ನಾಶವಾದ ದಿನ ಭಾರತವೇ ಇರುವುದಿಲ್ಲ. ಆದ್ದರಿಂದ ಇಂತಹ ಅಪಾಯಕಾರಿ ‘ಏಕ’ಗಳ ಹೇರಿಕೆಯನ್ನು ದೇಶದ ಜಾಗೃತ ಪ್ರಜೆಗಳೆಲ್ಲ ಒಟ್ಟುಸೇರಿ ವಿರೋಧಿಸುವ ಅಗತ್ಯವಿದೆ. ಶ್ರೀನಿವಾಸ ಕಾರ್ಕಳ.

‘ಒಂದು ದೇಶ ಒಂದು ಚುನಾವಣೆ’ಗೆ (ಏಕಕಾಲದ ಚುನಾವಣೆ) ಸಂಬಂಧಿಸಿದಂತೆ ರಾಮನಾಥ ಕೋವಿಂದ ನೇತೃತ್ವದ ಸಮಿತಿ ತನ್ನ ವರದಿಯನ್ನು ಕೊಟ್ಟಿದೆ ಮತ್ತು ಅದನ್ನು ಇತ್ತೀಚೆಗೆ ಕೇಂದ್ರದ ಕ್ಯಾಬಿನೆಟ್ ಅಂಗೀಕರಿಸಿದೆ. ಮುಂದಿನ ಅಧಿವೇಶನದಲ್ಲಿ ಅದನ್ನು ಮಂಡಿಸಲಾಗುವುದು, ಮೋದಿಯವರ ಮೂರನೆ ಅವಧಿ ಮುಗಿಯುವ ಮುನ್ನವಂತೂ ಅದು ಜಾರಿಯಾಗಿಯೇ ಆಗುತ್ತದೆ ಎಂದೆಲ್ಲ ಸುದ್ದಿಗಳು ಹರಡಿವೆ.

ಕೋವಿಂದ ಸಮಿತಿಯ ಶಿಫಾರಸಿನ ಪ್ರಕಾರ ಲೋಕಸಭೆ ಮತ್ತು 28 ರಾಜ್ಯಗಳಲ್ಲಿ (ಮತ್ತು ಶಾಸನ ಸಭೆಗಳನ್ನು ಹೊಂದಿರುವ ಕೇಂದ್ರಾಡಳಿತ ಪ್ರದೇಶಗಳಲ್ಲಿ) ಏಕಕಾಲಕ್ಕೆ ಚುನಾವಣೆ ನಡೆಯಬೇಕು.

ಸಂವಿಧಾನ ತಜ್ಞರಿಂದ ಕೂಡಿದ ಸಮಿತಿಯಾಗಿರಲಿಲ್ಲ!

ಈ ಸಲಹೆ ನೀಡಿದ 8 ಮಂದಿಯ ಸಮಿತಿಯಲ್ಲಿ ಒಬ್ಬರು ಮಾತ್ರ ಸಂವಿಧಾನ ಪರಿಣತರು. ಒಬ್ಬರು ಪಾರ್ಲಿಮೆಂಟರಿ ವಿಧಿವಿಧಾನ ಪರಿಣತರು, ಆದರೆ ಎಂದೂ ಕಾನೂನು ಬೋಧಿಸಿದವರಲ್ಲ. ಇಬ್ಬರು ರಾಜಕಾರಣಿಗಳು. ಒಬ್ಬರು ಅಧಿಕಾರಿಯಾಗಿದ್ದು ಮುಂದೆ ರಾಜಕಾರಣಿಯಾದವರು. ಮೂವರು ಜೀವನಪರ್ಯಂತ ನಾಗರಿಕ ಸೇವೆಯಲ್ಲಿದ್ದವರು (ಸಿವಿಲ್ ಸರ್ವೆಂಟ್). ಅಂದರೆ ಇಡೀ ದೇಶದ ಚುನಾವಣಾ ವ್ಯವಸ್ಥೆಯ ಮೇಲೆ ಗಂಭೀರ ಮತ್ತು ದೂರಗಾಮಿ ಪರಿಣಾಮ ಬೀರುವ ಒಂದು ವ್ಯವಸ್ಥೆಗೆ ಶಿಫಾರಸು ಮಾಡಲು ನೇಮಿಸಿದ ಸಮಿತಿಯು ಸಂವಿಧಾನ ತಜ್ಞರಿಂದ ಕೂಡಿರಲೇ ಇಲ್ಲ!

ಇಲ್ಲಿನ ‘ಟರ್ಮ್ಸ್ ಆಫ್ ರೆಫರೆನ್ಸ್’ ಇದ್ದುದೇ ಏಕಕಾಲದ ಚುನಾವಣೆಗೆ ಶಿಫಾರಸು ಮಾಡಿ ಎಂದು. ಸಮಿತಿಯು ಅದಕ್ಕೆ ಅನುಗುಣವಾಗಿಯೇ, ಐದು ವರ್ಷಗಳಿಗೊಮ್ಮೆ ಏಕಕಾಲಕ್ಕೆ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಚುನಾವಣೆ ನಡೆಯಬೇಕು ಎಂದು ಹೇಳಿದೆ. ಹಾಗೆ ನೋಡಿದರೆ, ಜಗತ್ತಿನ ಯಾವುದೇ ಅತಿ ದೊಡ್ಡ ಒಕ್ಕೂಟ ಸ್ವರೂಪದ ಮತ್ತು ಪ್ರಜಾತಂತ್ರ ವ್ಯವಸ್ಥೆ ಹೊಂದಿರುವ ದೇಶದಲ್ಲಿ ಇಂಥ ಏಕಕಾಲದ ಚುನಾವಣೆ ನಡೆಯುತ್ತಿರುವ ಉದಾಹರಣೆಯೇ ಇಲ್ಲ.

ಕೋವಿಂದ್ ಸಮಿತಿ ಈಗ ಏನು ಶಿಫಾರಸು ನೀಡಿದೆಯೋ ಅದು ಫೆಡರಲ್ ಸಂಸದೀಯ ಪ್ರಜಾತಂತ್ರಕ್ಕೆ ಸಂಪೂರ್ಣ ವಿರುದ್ಧವಾದುದು. ರಾಜ್ಯಗಳ ವಿಧಾನಸಭಾ ಚುನಾವಣೆ ಮತ್ತು ಲೋಕಸಭಾ ಚುನಾವಣೆ ಏಕಕಾಲಕ್ಕೆ ನಡೆದಾಗ ಅದು ರಾಷ್ಟ್ರಮಟ್ಟದ ವಿಚಾರಗಳನ್ನು ಆಧರಿಸಿ ನಡೆಯುವ ಅಪಾಯವಿರುತ್ತದೆ. ರಾಜ್ಯಗಳ ಆದ್ಯತೆಗಳೇ ಬೇರೆ, ದೇಶದ ಆದ್ಯತೆಯೇ ಬೇರೆ. ಉತ್ತರಪ್ರದೇಶ ಮತ್ತು ಕರ್ನಾಟಕದ ಸಮಸ್ಯೆಗಳು ಒಂದೇ ಅಲ್ಲ. ರಾಜ್ಯದ ಚುನಾವಣೆಗಳು ಪ್ರತ್ಯೇಕ ನಡೆದಾಗ ಮಾತ್ರ ಅಲ್ಲಿ ರಾಜ್ಯದ ಜ್ವಲಂತ ವಿಷಯಗಳ ಚರ್ಚೆ ನಡೆಯುತ್ತದೆ ಮತ್ತು ಅದರ ಮೇಲೆ ಜನರು ತಮ್ಮ ಮತ ಚಲಾಯಿಸುತ್ತಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ಇದು ಇರಬೇಕಾದುದೇ ಹೀಗೆ.

ಭಾರತ ಸಂವಿಧಾನ ರಚನಾ ಸಭೆ ನಡೆಯುತ್ತಿದ್ದಾಗ, ಭಾರತಕ್ಕೆ ಅಧ್ಯಕ್ಷೀಯ ಪದ್ಧತಿ ಬೇಕೋ, ಸಂಸದೀಯ ವ್ಯವಸ್ಥೆ ಬೇಕೋ ಎಂಬ ಬಗ್ಗೆ ಸಂವಿಧಾನ ನಿರ್ಮಾತೃಗಳು ವ್ಯಾಪಕವಾಗಿ ಚರ್ಚಿಸಿದ್ದರು. ಅಂತಿಮವಾಗಿ ಭಾರತದ ಬಹುತ್ವ ಸ್ವರೂಪಕ್ಕೆ ಸಂಸದೀಯ ವ್ಯವಸ್ಥೆಯೇ ಸೂಕ್ತ ಎಂದು ಅವರು ತೀರ್ಮಾನಿಸಿದ್ದರು. ಭಾರತವು ರಾಜ್ಯಗಳ ಒಕ್ಕೂಟ ಎಂದು ಸಂವಿಧಾನವೇ ಹೇಳುತ್ತದೆ. ಹಾಗಾಗಿ ರಾಜ್ಯಗಳ ಹಿತಾಸಕ್ತಿ ಮತ್ತು ಸ್ವಾಯತ್ತೆಗೆ ಧಕ್ಕೆಯಾದಾಗ ಅದರಿಂದ ದೇಶಕ್ಕೇ ತೊಂದರೆಯಾಗುತ್ತದೆ. ರಾಜ್ಯಗಳು ಗಟ್ಟಿಯಾದಾಗ ದೇಶ ಗಟ್ಟಿಯಾಗುತ್ತದೆ.

ಸಂವಿಧಾನ ತಿದ್ದುಪಡಿ ಮಾಡಬೇಕಾಗುತ್ತದೆ

ಕೋವಿಂದ್ ಸಮಿತಿಯ ಶಿಫಾರಸನ್ನು ಜಾರಿ ಮಾಡುವುದು ಅಷ್ಟು ಸುಲಭವಲ್ಲ. ಅದಕ್ಕೆ  ಸಂವಿಧಾನ ತಿದ್ದುಪಡಿ ಮಾಡಬೇಕಾಗುತ್ತದೆ. ಸಂವಿಧಾನದ ವಿಧಿ 327 ರ ತಿದ್ದುಪಡಿ ಮಾತ್ರವಲ್ಲ, 82A, 83(3), 83(4), 172(3), 172(4), 324A, 325(2), 325(3) ಇತ್ಯಾದಿ ವಿಧಿಗಳನ್ನು ಹೊಸದಾಗಿ ಸೇರಿಸಬೇಕಾಗುತ್ತದೆ.

ಇದೇ ವರ್ಷ, ಅಂದರೆ 2024ರ ನವೆಂಬರ್ ಡಿಸೆಂಬರ್ ನಲ್ಲಿ ಸಂವಿಧಾನ ತಿದ್ದುಪಡಿಗಳನ್ನು ಸಂಸತ್ ನಲ್ಲಿ ಪಾಸ್ ಮಾಡುತ್ತಾರೆ ಎಂದಿಟ್ಟು ಕೊಳ್ಳೋಣ. ಆಗ 2029 ಕ್ಕೆ ಏಕಕಾಲದ ಚುನಾವಣೆ ನಡೆಯಬೇಕಾಗುತ್ತದೆ. ಆಗ 2025, 2026, 2027 ಮತ್ತು 2028 (ಒಟ್ಟು 24) ರಲ್ಲಿ ಚುನಾವಣೆ ಕಾಣುವ ಅಸೆಂಬ್ಲಿಗಳ ಅಧಿಕಾರಾವಧಿ 1 ರಿಂದ 4 ವರ್ಷ ಮೊಟಕು ಗೊಳಿಸಬೇಕಾಗುತ್ತದೆ. 2027 ರಲ್ಲಿ ಚುನಾಯಿತವಾದ ಅಸೆಂಬ್ಲಿಯ ಆಯುಷ್ಯ 2 ವರ್ಷವಾದರೆ, 2028 ಅಸೆಂಬ್ಲಿಯ ಆಯುಷ್ಯ ಕೇವಲ 1 ವರ್ಷ!

ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬರದಿದ್ದರೆ, ಅಥವಾ ಚುನಾಯಿತ ಸರಕಾರವನ್ನು ವಿಧಾನಸಭೆಯ ಅಂಗಳದಲ್ಲಿ ಸೋಲಿಸಿದರೆ, ಅಥವಾ ಮುಖ್ಯಮಂತ್ರಿ ರಾಜೀನಾಮೆ ನೀಡಿ, ಯಾರಿಗೂ ಸರಕಾರ ರಚನೆಗೆ ಬಹುಮತ ಹೊಂದಿಸಲು ಸಾಧ್ಯವಾಗದಿದ್ದರೆ, ಆಗ ಹೊಸ ಚುನಾವಣೆ ನಡೆಯಬೇಕಾಗುತ್ತದೆ. ಆದರೆ ಅದರ ಆಯುಷ್ಯ ಉಳಿಕೆ ಅವಧಿಗೆ ಮಾತ್ರ. ಅಂದರೆ ಅದು ಕೆಲವೇ ತಿಂಗಳು ಮಾತ್ರ ಇರಲೂ ಬಹುದು! ಆಗ ಚುನಾವಣೆಗೆ ಅನಗತ್ಯ ಖರ್ಚಾಗುವುದಿಲ್ಲವೇ?

ಇಂತಹ ಚುನಾವಣೆ ಕೇವಲ ಒಂದು ಪ್ರಹಸನವಾಗಿರುತ್ತದೆ. ಚುನಾವಣಾ ಬಾಂಡ್ ನಂತಹ ಅಡ್ಡದಾರಿಯ ಮೂಲಕ ಅಪಾರ ಹಣ ಗುಡ್ಡೆ ಹಾಕಿದ ಪಕ್ಷಗಳಿಗೆ ಅಥವಾ ಅಭ್ಯರ್ಥಿಗಳಿಗೆ ಮಾತ್ರ ಹೀಗೆ ಆಗಾಗ ಚುನಾವಣೆಯಲ್ಲಿ ಸ್ಪರ್ಧಿಸುವುದು ಸಾಧ್ಯವಾದೀತು. ಇಂತಹ ಸಂದರ್ಭದಲ್ಲಿ, ಹೊಸ ಚುನಾವಣೆ ನಡೆಸುವ ಬೆದರಿಕೆ ಹಾಕುವ ಮೂಲಕ ಮುಖ್ಯಮಂತ್ರಿಗಳು ಅತೃಪ್ತ ಶಾಸಕರ ಅಸಮಾಧಾನವನ್ನು  ತಣ್ಣಗಾಗಿಸಲು ಈ ಶಿಫಾರಸು ಅವಕಾಶ ಮಾಡಿಕೊಡುತ್ತದೆ. ಇದು ಪ್ರಜಾತಂತ್ರಕ್ಕೆ ಮಾರಕ.

ಕುಣಿಯಲು ಬಾರದವರಿಗೆ ಅಂಗಳ ಡೊಂಕು

ಏಕಕಾಲಕ್ಕೆ ಚುನಾವಣೆ ಮಾಡಬೇಕು ಎನ್ನುವವರು ಮುಂದಿಡುವ ಕಾರಣಗಳು ಅನೇಕ ಬಾರಿ ಅರ್ಥಹೀನವಾಗಿರುತ್ತವೆ. ಚುನಾವಣಾ ವೆಚ್ಚ ಕಡಿಮೆಯಾಗುತ್ತದೆ ಎಂದು ಕೆಲವರು ಹೇಳುವುದಿದೆ. ಆದರೆ ತಜ್ಞರು ಅಧ್ಯಯನ ಮಾಡಿ ಮಂಡಿಸಿದ ವರದಿಯ ಪ್ರಕಾರ ಏಕಕಾಲದ ಚುನಾವಣೆಯಿಂದ ಹೆಚ್ಚೆಂದರೆ 5,000 ಕೋಟಿ ಉಳಿಯಬಹುದು. ದೇಶದ ಪ್ರಜಾತಂತ್ರದ ರಕ್ಷಣೆಯ ಮುಂದೆ ಇದು ಏನೇನೂ ಅಲ್ಲ. ಅಲ್ಲದೆ ಪ್ರಜಾತಂತ್ರದ ಮೌಲ್ಯವನ್ನು ಹಣದ ಮೂಲಕ ಅಳೆಯಲಾಗದು.

ಇನ್ನು ನೀತಿ ಸಂಹಿತೆಯ ಕಾರಣ ಅಭಿವೃದ್ಧಿ ಕುಂಠಿತವಾಗುತ್ತದೆ ಎನ್ನುವವರಿದ್ದಾರೆ. ಕರ್ನಾಟಕದಲ್ಲಿ ಚುನಾವಣೆ ನಡೆಯುವಾಗ ನೀತಿ ಸಂಹಿತೆ ಅನ್ವಯವಾಗುವುದು ಕರ್ನಾಟಕಕ್ಕೆ ಮಾತ್ರ. ಇತರ ರಾಜ್ಯಗಳ ಅಭಿವೃದ್ಧಿಗೆ ಇಲ್ಲಿ ಹೇಗೆ ತೊಂದರೆಯಾಗುತ್ತದೆ? ಅಲ್ಲದೆ ನೀತಿ ಸಂಹಿತೆಯಿಂದ ಅಭಿವೃದ್ಧಿ ಕುಂಠಿತವಾಗುತ್ತದೆ ಎನ್ನುವುದು ಕುಂಟು ನೆಪ ಅಷ್ಟೇ. ಕುಣಿಯಲು ಬಾರದವರಿಗೆ ಅಂಗಳ ಡೊಂಕಾಗಿಯೇ ಇರುತ್ತದೆ.

1951- ಮತ್ತು 2021 ರ ನಡುವಿನ ಏಳು ದಶಕಗಳ ಚುನಾವಣೆಯಲ್ಲಿ ಕೇವಲ ಎರಡು ದಶಕಗಳ ನಡುವೆ ಮಾತ್ರ ಅಸ್ಥಿರತೆ ಇತ್ತು. ಅವೆಂದರೆ 1981-1990 ಮತ್ತು 1991-2000. 1999 ರ ನಂತರ ಅಸ್ಥಿರ ಸರಕಾರಗಳೇ ಇಲ್ಲ. ಹೆಚ್ಚಿನ ರಾಜ್ಯ ಸರಕಾರಗಳು ಐದು ವರ್ಷಗಳ ಅಧಿಕಾರಾವಧಿ ಮುಗಿಸಿವೆ. ಆಗಾಗ ನಡೆಯುವ ಚುನಾವಣೆಗಳಿಂದ ಆರ್ಥಿಕ ಪ್ರಗತಿಗೆ ಯಾವ ತೊಂದರೆಯೂ ಆಗಿಲ್ಲ.

ಮಸೂದೆ ಅಂಗೀಕಾರ ಅಸಾಧ್ಯ

ಎಲ್ಲಕ್ಕಿಂತ ಮುಖ್ಯ ಸಂಗತಿಯೇನೆಂದರೆ, ಈ ಸಂವಿಧಾನ ತಿದ್ದುಪಡಿಗಳನ್ನು ಪಾಸ್ ಮಾಡಲು ಲೋಕಸಭೆಯಲ್ಲಿ ಮೂರನೇ ಎರಡರಷ್ಟು ಸಂಖ್ಯೆಯ ಸಂಸದರ ಬೆಂಬಲದ ಅಗತ್ಯವಿದೆ. ಈಗಿನ ಎನ್ ಡಿ ಎ ಒಕ್ಕೂಟದ ಬಳಿ ಅಂತಹ ಬಲವಿಲ್ಲ. ಲೋಕಸಭೆಯಲ್ಲಿ 182 ಸಂಸದರ ಬಲದೊಂದಿಗೆ  ಮತ್ತು ರಾಜ್ಯಸಭೆಯಲ್ಲಿ 83 ಸಂಸದರ ಬಲದೊಂದಿಗೆ ವಿಪಕ್ಷಗಳು ಸುಲಭದಲ್ಲಿ ಈ ಮಸೂದೆಯನ್ನು ಸೋಲಿಸಬಲ್ಲವು. ಹಾಗಾಗಿ ಏಕಕಾಲದ ಚುನಾವಣೆ ಕೇವಲ ಇನ್ನೊಂದು ಗಿಮಿಕ್ ಆಗಿಯೇ ಉಳಿಯುವ ಸಾಧ್ಯತೆಯೇ ಅಧಿಕ.

ಅದೇನೇ ಇರಲಿ. ನಮ್ಮದು ಬಹುತ್ವ ಸ್ವರೂಪದ ದೇಶ. ಅನೇಕತೆಯ ಮೂಲಕವೇ ಏಕತೆಯನ್ನು ಕಂಡುಕೊಂಡ ದೇಶ. ವೈವಿಧ್ಯವೇ ಇಲ್ಲಿನ ವೈಶಿಷ್ಟ್ಯ. ಇಂಥ ದೇಶದಲ್ಲಿ ಏಕ ಮತಧರ್ಮ, ಏಕ ಸಂಸ್ಕೃತಿ, ಏಕ ಭಾಷೆ, ಏಕ ಆಹಾರ ಪದ್ಧತಿ, ಏಕ ಚುನಾವಣೆ ಎಂದೆಲ್ಲ ‘ಏಕ’ಗಳನ್ನು ಹೇರುವುದು ದೇಶದ ಅಸ್ತಿತ್ವಕ್ಕೇ ಅಪಾಯಕಾರಿ. ಬಹುತ್ವ ನಾಶವಾದ ದಿನ ಭಾರತವೇ ಇರುವುದಿಲ್ಲ. ಆದ್ದರಿಂದ ಇಂತಹ ಅಪಾಯಕಾರಿ ‘ಏಕ’ಗಳ ಹೇರಿಕೆಯನ್ನು ದೇಶದ ಜಾಗೃತ ಪ್ರಜೆಗಳೆಲ್ಲ ಒಟ್ಟುಸೇರಿ ವಿರೋಧಿಸುವ ಅಗತ್ಯವಿದೆ.

ಶ್ರೀನಿವಾಸ ಕಾರ್ಕಳ

ಚಿಂತಕರು

ಇದನ್ನೂ ಓದಿ- http://ಸಿದ್ದರಾಮಯ್ಯ- ಸಿದ್ದ, ಬದ್ಧ, ಬುದ್ದನಾಗಬೇಕು…https://kannadaplanet.com/siddaramaiah-must-be-ready/

More articles

Latest article