ಲಖನೌ: ನೇಮಕಾತಿ ಪತ್ರ ನೀಡುವ ಸಂದರ್ಭದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮಹಿಳೆಯೊಬ್ಬರ ಹಿಜಾಬ್ ಎಳೆದ ವಿವಾದಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸಚಿವ ಸಂಜಯ್ ನಿಶಾದ್ ಅವರು ಮತ್ತೊಂದು ವಿವಾದವನ್ನು ಹುಟ್ಟುಹಾಕಿದ್ದಾರೆ.
ಸಂಜಯ್ ನಿಶಾದ್ ಅವರು ನಿತೀಶ್ ಕುಮಾರ್ ಅವರನ್ನು ಸಮರ್ಥಿಸಿಕೊಳ್ಳುತ್ತಾ ಮುಸುಕು ಮುಟ್ಟಿದ ಮಾತ್ರಕ್ಕೆ ಇಷ್ಟೊಂದು ವಿವಾದವನ್ನು ಏಕೆ ಸೃಷ್ಟಿ ಮಾಡಬೇಕು? ಅಕಸ್ಮಾತ್ ಬೇರೆಡೆ ಮುಟ್ಟಿದ್ದರೆ ಏನಾಗುತ್ತಿತ್ತು?’ ಎಂದು ಜೋರಾಗಿ ನಕ್ಕಿದ್ದಾರೆ. ಅವರ ಈ ಅಸಭ್ಯ ಹೇಳಿಕೆ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.
ನಿಶಾದ್ ಅವರ ಹೇಳಿಕೆಗೆ ದೇಶದಾದ್ಯಂತ ಟೀಕೆಗಳು ವ್ಯಕ್ತವಾಗುತ್ತಿದ್ದು, ಪ್ರತಿ ಪಕ್ಷಗಳು ನಿಶಾದ್ ಅವರನ್ನು ಮಹಿಳಾ ವಿರೋಧಿ ಎಂದು ಜರಿದಿವೆ. ಅನೇಕ ಮಹಿಳಾ ಸಂಘಟನೆಗಳೂ ನಿಶಾದ್ ಅವರನ್ನು ಟೀಕಿಸಿವೆ.
ವಿವಾದ ಭುಗಿಲೇಳುತ್ತಿದ್ದಂತೆ ಸ್ಪಷ್ಟನೆ ನೀಡಿರುವ ನಿಶಾದ್ ಅವರು, ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಹೇಳಿಕೆಯನ್ನು ಹಿಂಪಡೆದುಕೊಳ್ಳಲು ಸಿದ್ಧನಿದ್ದೇನೆ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಭೋಜಪುರಿ ಭಾಷೆಯಲ್ಲಿ ಇಂತಹ ಮಾತಗಳು ಸರ್ವೇ ಸಾಮಾನ್ಯವಾಗಿರುತ್ತವೆ. ಅದೇ ಮಾದರಿಯಲ್ಲಿ ಹಿಂದಿಯಲ್ಲಿ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ.

