“ಮೆಟ್ರೋಸಿಟಿಯಲ್ಲೊಂದು ಇಳಿಸಂಜೆ”

Most read

ಪೋಷಕರ ಅನುಪಸ್ಥಿತಿಯಲ್ಲಿ ಮಕ್ಕಳ ಮೇಲಾಗುವ ತರಹೇವಾರಿ ದೌರ್ಜನ್ಯಗಳು ಮತ್ತು ಒಟ್ಟಾರೆಯಾಗಿ ಮಹಾನಗರಗಳಲ್ಲಿ ಹೆಚ್ಚುತ್ತಿರುವ ಅಪ್ರಾಪ್ತರ ಮೇಲಾಗುತ್ತಿರುವ ಅಪರಾಧ ಪ್ರಕರಣಗಳನ್ನು ಗಮನಿಸಿದರೆ, ನಮ್ಮ ಮನೆಗಳಲ್ಲಿ ಹಿರಿಯರ ಉಪಸ್ಥಿತಿಯು ಪೋಷಕರಿಗೆ ನೀಡಬಲ್ಲ ಸುರಕ್ಷತಾ ಭಾವ ಮತ್ತು ಮಕ್ಕಳಿಗೆ ನೀಡಬಲ್ಲ ಜೀವನಮೌಲ್ಯಗಳ ಕಲಿಕೆಯನ್ನು ಯಾವ ದುಬಾರಿ ಖಾಸಗಿ ಸಂಸ್ಥೆಗಳೂ ನೀಡಲಾರವು- ಪ್ರಸಾದ್‌ ನಾಯ್ಕ್‌, ದೆಹಲಿ.

ನಿಧಾನಗತಿಯ ಬದುಕನ್ನು ಇಷ್ಟಪಡುವವರಿಗೆ ಸಾಮಾನ್ಯವಾಗಿ ಮಹಾನಗರಿಗಳು ಗಾಬರಿ ಹುಟ್ಟಿಸುವುದು ಸಹಜ.

ಹಾಗೆ ನೋಡಿದರೆ ಇಂಥವರಿಗೆ ಮಹಾನಗರಿಗಳು ಏರ್-ಪೋರ್ಟ್‌ಗಳಿದ್ದಂತೆ. ವಿಮಾನ ನಿಲ್ದಾಣಗಳು ನೋಡಲು ಸುಂದರವಾಗಿರುತ್ತವೆ. ಅದ್ದೂರಿತನ ಎಷ್ಟಿರುತ್ತದೆಯೆಂದರೆ ಒಂದಿಷ್ಟು ಹೊತ್ತು ಕೂತು ಹೋಗೋಣ, ಈ ವಿಲಾಸಗಳನ್ನು ನೋಡ್ತಾ ಇರೋಣ ಅಂತೆಲ್ಲ ಅನ್ನಿಸತೊಡಗುತ್ತದೆ. ಇಷ್ಟೆಲ್ಲ ಇದ್ದೂ ನಾವು ಕಾಯುತ್ತಿರುವ ವಿಮಾನವು ಒಂದೈದು ತಾಸು ತಡವಾಗಿಬಿಟ್ಟರೆ, ಏರ್-ಪೋರ್ಟಿನಲ್ಲಿ ಹೆಚ್ಚಿನ ಸಮಯವನ್ನು ಕಳೆಯುವುದು ನಾವಂದುಕೊಂಡಷ್ಟು ಸೊಗಸೇನಲ್ಲ ಎಂಬುದು ನಿಧಾನವಾಗಿ ಮನದಟ್ಟಾಗುತ್ತದೆ. ಏರ್-ಪೋರ್ಟುಗಳಲ್ಲಿ ಕೆಲ ಹೊತ್ತು ಸಮಯ ಕಳೆಯುವುದೇನೋ ಚಂದವೇ. ಹಾಗಂತ ಶಾಶ್ವತವಾಗಿ ಅಲ್ಲೇ ಇರಲಾಗುವುದಿಲ್ಲವಲ್ಲ!

ಬದುಕನ್ನು ಕೊಂಚ ವ್ಯವಧಾನ ಮತ್ತು ಸಮಾಧಾನದೊಂದಿಗೆ ಕಳೆಯಲು ಬಯಸುವವರಿಗೆ ಮಹಾನಗರಿಗಳು ಕೂಡ ಈ ಅದ್ದೂರಿ ವಿಮಾನ ನಿಲ್ದಾಣಗಳಂತೆ ಕಾಣುವುದು ಸ್ವಾಭಾವಿಕ. ದಿಲ್ಲಿಯ ಬದುಕಿನ ನಿಲ್ಲದ ಓಟದಿಂದ ಬೇಸತ್ತಿದ್ದ ನಾನು ಮುಂದೆ ಯಾವಾಗಾದರೊಮ್ಮೆ ಕೋಲ್ಕತ್ತಾದಲ್ಲಿ ಸೆಟಲ್ ಆಗಬೇಕು ಅಂತ ಯೋಚಿಸುತ್ತಿದ್ದ ದಿನಗಳಿದ್ದವು. ಇದರ ಹಿಂದಿದ್ದ ಏಕೈಕ ಕಾರಣವೆಂದರೆ ದಿನನಿತ್ಯದ ಬದುಕು ಕೋಲ್ಕತ್ತಾದಲ್ಲಿ ಬಹಳ ನಿಧಾನವಾಗಿ ಸಾಗುತ್ತದೆಂದು ನಾನು ಹಲವರಿಂದ ಕೇಳಿದ್ದೆ. ಇದರಲ್ಲಿ ಸತ್ಯವೆಷ್ಟಿದೆ ಎಂಬುದನ್ನು ಅಲ್ಲಿಗೆ ಹೋಗಿಯೇ ತಿಳಿಯಬೇಕು ಅನ್ನುವುದು ಬೇರೆ ಮಾತು. ಒಟ್ಟಿನಲ್ಲಿ ಕೆಲವು ದಿನಗಳ ಮಟ್ಟಿಗಾದರೂ ಕೋಲ್ಕತ್ತಾಗೆ ಹೋಗಿ ಈ ಮುಗಿಯದ ಓಟದಿಂದ ತಾತ್ಕಾಲಿಕ ಮುಕ್ತಿಯನ್ನು ಪಡೆಯಬೇಕೆಂಬುದು, ಇಂದಿಗೂ ಬಾಕಿಯುಳಿದಿರುವ ನನ್ನ ಬಕೆಟ್-ಲಿಸ್ಟ್ ಹಂಬಲಗಳಲ್ಲೊಂದು. ಥೇಟು “ಲಂಚ್ ಬಾಕ್ಸ್” ಚಿತ್ರದಲ್ಲಿ ಬರುವ ಇಳಾ ಸಿಂಗ್ ಎಂಬ ಪಾತ್ರವು “ಸಂತಸದ ಸೂಚ್ಯಂಕ” ಹೆಚ್ಚಿರುವ ಭೂತಾನ್ ದೇಶಕ್ಕೆ ತೆರಳಿ, ಅಲ್ಲಿ ನೆಲೆಯೂರುವ ಕನಸು ಕಾಣುತ್ತಾ ತನ್ನೊಲವಿನ ಗೆಳೆಯನಿಗೆ ಪತ್ರ ಬರೆಯುವ ಹಾಗೆ!

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ಸಾಮಾನ್ಯವಾಗಿ ಮಹಾನಗರಗಳಲ್ಲಿ ನೆಲೆಯೂರಿರುವ ವೃದ್ಧರನ್ನು ಕಂಡಾಗ ನನ್ನ ಮನದಲ್ಲಿ ಮೂಡುವ ಪ್ರಶ್ನೆಗಳು ಕೂಡ ಬಹುತೇಕ ಇಂಥದ್ದೇ. ಕೆಲ ವರ್ಷಗಳ ಹಿಂದೆಲ್ಲ ನಮ್ಮೂರಿನ ವೃದ್ಧರಿಗೆ ತಾವಿರುವ ಹಳ್ಳಿಯನ್ನು ಬಿಟ್ಟುಬರುವ ಕಲ್ಪನೆಯೇ ದಿಗಿಲು ಹುಟ್ಟಿಸುತ್ತಿತ್ತು. ಹಳ್ಳಿಯಲ್ಲಿರುವ ಸ್ವಂತ ಮನೆ, ಮನೆಯ ಎದುರಿನಲ್ಲೊಂದು ಅಂಗಳ, ಕೈಯಾರೆ ಚಂದಗಾಣಿಸಿದ ಚಿಕ್ಕ ಕೈತೋಟ, ಮುಖ್ಯರಸ್ತೆಯವರೆಗೆ ಹೋಗಲು ಕಾಲುಹಾದಿ, ಕಾಲಿಟ್ಟಲ್ಲಿ ಎಡತಾಕುತ್ತಾ ಮನೆಯ ಸದಸ್ಯರೇ ಆಗಿಹೋಗಿದ್ದ ಸಾಕುಪ್ರಾಣಿಗಳು, ಕೊಂಚ ದೂರ ಹೋದರೆ ಸುತ್ತಲೂ ಕಾಣುತ್ತಿದ್ದ ಹಸಿರು… ಇವುಗಳನ್ನೆಲ್ಲ ಬಿಟ್ಟು ಬರುವುದು ಅವರಿಗೆ ಅಸಾಧ್ಯವೆಂಬಂತೆ ಕಾಣುತ್ತಿತ್ತು. ಈ ಮಧ್ಯೆ ನಗರಗಳಿಗೆ ಆಗೊಮ್ಮೆ ಈಗೊಮ್ಮೆ ಹೋಗಿಬರುತ್ತಿದ್ದವರಿಗೆ ಅಲ್ಲಿಯ ಜೀವನಶೈಲಿಯ ಬಗ್ಗೆ ಒಂದಿಷ್ಟು ಪರಿಚಯವಿತ್ತೇ ಹೊರತು, ಈ ಅರೆಬೆಂದ ಮಾಹಿತಿಗಳು ಅವರನ್ನು ನಗರಗಳತ್ತ ಅಷ್ಟೇನೂ ಆಕರ್ಷಿಸಿದಂತೆ ಕಾಣುತ್ತಿರಲಿಲ್ಲ. ಹೀಗಾಗಿ ಹಳ್ಳಿಗಳು ಮತ್ತು ನಗರಗಳು ಹೆಚ್ಚಿನ ಕೊಡುಕೊಳ್ಳುವಿಕೆಗಳಿಲ್ಲದೆ ಕೆಲ ಕಾಲ ತಮ್ಮ ಪಾಡಿಗೆ ತಾವಿರುವಂತೆ ತಣ್ಣಗಿದ್ದವು. 

ಆದರೆ ನಂತರದ ವರ್ಷಗಳಲ್ಲಿ ಹಳ್ಳಿಗಳಿಂದ ಅಥವಾ ಪುಟ್ಟ ಪಟ್ಟಣಗಳಿಂದ ಮಹಾನಗರಗಳತ್ತ ವಲಸೆ ಹೋಗುವವರ ಸಂಖ್ಯೆಯು ಗಣನೀಯವಾಗಿ ಏರತೊಡಗಿದಾಗ, ಮಹಾನಗರಿಯ ನೆರಳು ಎಲ್ಲೆಡೆ ವಿಶಾಲವಾಗಿ ಹಬ್ಬುವ ಬೆಳವಣಿಗೆಯೂ ಆರಂಭವಾಗಿತ್ತು. ಸಮಾಜದ ದೊಡ್ಡ ವರ್ಗವೊಂದು ಉದ್ಯೋಗ ಮತ್ತು ಸುಧಾರಿತ ಜೀವನಮಟ್ಟಕ್ಕೆಂದು ಮಹಾನಗರಗಳತ್ತ ಮುಖ ಮಾಡಿದ್ದಲ್ಲದೆ, ಕ್ರಮೇಣ ಅಲ್ಲೇ ನೆಲೆಯೂರಿದ್ದರ ಪರಿಣಾಮಗಳು ತಡವಾಗಿಯಾದರೂ ಈ ವಲಸಿಗರ ಪೂರ್ವಾಶ್ರಮದ ಹೆಜ್ಜೆಗಳನ್ನು ಪ್ರಭಾವಿಸುವುದು ಖಚಿತವಾಗಿತ್ತು. ಇವೆಲ್ಲದರಿಂದಾಗಿ ಈವರೆಗೆ ಮಹಾನಗರಗಳಿಂದ ದೂರವುಳಿದಿದ್ದ ಹಿರಿಯ ನಾಗರಿಕರು ಈ ಬಾರಿ ಅನಿವಾರ್ಯತೆಗೆ ಕಟ್ಟುಬಿದ್ದು ತಾವೂ ಮಹಾನಗರಗಳತ್ತ ಬರುವಂತಾಯಿತು. ಈ ಬಾರಿ ಹೋಗಲೋ ಬೇಡವೋ ಎಂಬ ಆಯ್ಕೆಗಳೇ ಅವರ ಬಳಿ ಉಳಿದಿರಲಿಲ್ಲ. ಕ್ಷೀಣಿಸುತ್ತಿರುವ ಆರೋಗ್ಯ, ಸಂಪನ್ಮೂಲಗಳ ಕೊರತೆ, ಇಳಿವಯಸ್ಸಿನ ಅಸಹಾಯಕತೆ, ಕೌಟುಂಬಿಕ ವ್ಯವಸ್ಥೆಯ ಬೆಂಬಲದ ಅವಶ್ಯಕತೆಗಳೆಲ್ಲವೂ ಒಂದಕ್ಕೊಂದು ಗಂಟು ಹಾಕಿಕೊಂಡು, ನಮ್ಮ ಹಿಂದಿನ ಪೀಳಿಗೆಯ ಮಂದಿಯನ್ನು ಕೂಡ ಮಹಾನಗರಗಳವರೆಗೆ ಬರಲೇಬೇಕಾದ ಅನಿವಾರ್ಯತೆಗೆ ದೂಡಿದ್ದು ಹೀಗೆ.

ಸಾಂದರ್ಭಿಕ ಚಿತ್ರ

ಜೀವನದ ಹಳೆಯ ಕೊಂಡಿಗಳನ್ನು ತಮ್ಮೂರಿನಲ್ಲಿ ಕಳಚಿಕೊಂಡು ಮಹಾನಗರಗಳನ್ನು ಸೇರಿದ ವೃದ್ಧರಿಗೆ ಈ ರೂಪಾಂತರವು ಸುಲಭದ್ದೇನೂ ಆಗಿರಲಿಲ್ಲ. ಅದರಲ್ಲೂ ತಮ್ಮ ಬದುಕಿನುದ್ದಕ್ಕೂ ಮಹಾನಗರಗಳ ಪ್ರಭಾವದಿಂದ ದೂರವುಳಿದಿದ್ದ ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ಹಿರಿಯರಿಗೆ ಇದು ಬಹುದೊಡ್ಡ ಸವಾಲಾಗಿತ್ತು. ನಿಸ್ಸಂದೇಹವಾಗಿ ಮಹಾನಗರದ ಕೆಲ ಅಂಶಗಳು ಈ ಮಂದಿಗೆ ತಕ್ಕಮಟ್ಟಿನ ಕಂಫರ್ಟ್‌ಗಳನ್ನು ಒದಗಿಸಿದ್ದೇನೋ ಸತ್ಯ. ಹಾಗಂತ ಬದುಕಿನ ಕೊನೆಯ ಹಂತವನ್ನು ನಾವಿನ್ನು ಇಲ್ಲೇ ಕಳೆಯೋಣ ಎಂದು ಸ್ವತಃ ನಿರ್ಧರಿಸಿ, ಅದಕ್ಕೆ ತಕ್ಕಂತೆ ಮುನ್ನಡೆದವರ ಸಂಖ್ಯೆಯು ದೊಡ್ಡದೇನೂ ಆಗಿರಲಿಲ್ಲ. ಅಷ್ಟಕ್ಕೂ ಮಹಾನಗರಿಯ ಮುಗಿಯದ ಓಟ ಮತ್ತು ವಿಚಿತ್ರ ವೇಗವು ಈ ವರ್ಗದ ಜನರನ್ನು ಆಕರ್ಷಿಸಿದ್ದಕ್ಕಿಂತ ಹೆಚ್ಚಾಗಿ ಗಾಬರಿಯಾಗಿಸಿದ್ದೇ ಹೆಚ್ಚು.

ಇಷ್ಟೆಲ್ಲ ಆಗಿಯೂ ಮನುಷ್ಯ ತಾನಿರುವ ಪರಿಸ್ಥಿತಿಗೆ ಕ್ರಮೇಣ ಹೊಂದಿಕೊಳ್ಳುತ್ತಾನೆ. ಇದು ರಾತ್ರೋರಾತ್ರಿ ಆಗದಿದ್ದರೂ, ನಿಧಾನವಾಗಿ ಒಂದು ಹಂತದ ನಂತರ ಖಂಡಿತ ಆಗುವಂಥದ್ದೇ. ಅಸಲಿಗೆ ಇಂದು ಮಹಾನಗರಗಳಲ್ಲಿ ವಾಸವಾಗಿರುವ ಮಧ್ಯಮವರ್ಗ ಮತ್ತು ಕೆಳ ಮಧ್ಯಮವರ್ಗದ ಬಹುತೇಕ ಹಿರಿಯರು ಈ ಹಂತಗಳನ್ನು ದಾಟಿಕೊಂಡು ಬಂದವರು. ಹೀಗಾಗಿ ಈ ಮಂದಿಗೆ ಮಹಾನಗರಿಗಳು ನಿಜಾರ್ಥದಲ್ಲಿ ಮೆಚ್ಚುಗೆಯಾಗದಿದ್ದರೂ, ಅವುಗಳು ಈಗ ಹಿಂದಿನಂತೆ ಹೆದರಿಸುವುದಿಲ್ಲ. ದಿನಕ್ಕೆರಡು ಬಾರಿ ವಾಕಿಂಗ್ ಮಾಡಿದರೆ ಎಂಥಾ ಬೀದಿಯೂ ತನ್ನ ಪರಿಚಯವನ್ನು ಬಿಟ್ಟುಕೊಡುತ್ತದೆ ಎಂಬುದು ಅವರಿಗೀಗ ಅರಿವಾಗಿದೆ. ಮೆಟ್ರೋಗಳಲ್ಲಿ, ಪಾರ್ಕುಗಳಲ್ಲಿ ಪರಿಚಿತ ಮುಖವೊಂದು ಹಲೋ ಎಂದಾಗ ಸಿಟಿಗಳೂ ಪರವಾಗಿಲ್ಲ ಎಂದನ್ನಿಸತೊಡಗುತ್ತದೆ. ದಿನನಿತ್ಯದ ಸಂವಹನಕ್ಕಾಗಿ ಸ್ಥಳೀಯ ಆಡುಭಾಷೆಯ ಕೆಲ ಆಯ್ದ ಪದಗಳು ಗೊತ್ತಿದ್ದರೂ, ಜೀವನ ನಿರ್ವಹಣೆಗೆ ಇದಿಷ್ಟು ಸಾಕು ಎಂಬ ಸಮಾಧಾನವು ಮನಸ್ಸಿನಲ್ಲಿ ಅದೆಂಥದ್ದೋ ಬಗೆಯ ಆತ್ಮವಿಶ್ವಾಸವನ್ನು ಮೂಡಿಸಿದಂತಾಗುತ್ತದೆ.

ಇಂದು ಹೌಸಿಂಗ್ ಸೊಸೈಟಿ, ಅಪಾರ್ಟ್‌ಮೆಂಟ್ಸ್, ರೆಸಿಡೆನ್ಷಿಯಲ್ ಕಾಲೊನಿಗಳಲ್ಲಿ ಕಾಣಲು ಸಿಗುವ ದೊಡ್ಡ ಸಂಖ್ಯೆಯ ಹಿರಿಯರು ಮೇಲೆ ಹೇಳಿರುವ ಬಹುತೇಕ ಅಂಶಗಳನ್ನು ಬದುಕಿನ ಒಂದಲ್ಲ ಒಂದು ಹಂತದಲ್ಲಿ ಅನುಭವಿಸಿರುವವರೇ. ಹೀಗಾಗಿ ಹೆಚ್ಚಿನವರು ಬದುಕಿನ ಈ ಸತ್ಯವನ್ನು ಒಪ್ಪಿಕೊಂಡು ದೇವರು ಇಟ್ಟಂತಾಗುತ್ತದೆ ಎಂದು ಧೈರ್ಯವಾಗಿಯೇ ಮುನ್ನಡೆದಿದ್ದಾರೆ. ಇನ್ನು ಅವಿಭಕ್ತ ಕುಟುಂಬ ವ್ಯವಸ್ಥೆಯಿಂದ ಸಿಡಿದು, ವಿಭಕ್ತ ವ್ಯವಸ್ಥೆಯನ್ನು ಅಪ್ಪಿಕೊಂಡಿರುವ ನಮ್ಮ ಆಧುನಿಕ ಕುಟುಂಬಗಳು, ಈ ಸವಾಲಿನ ದಿನಗಳನ್ನು ಎದುರಿಸುವ ನಿಟ್ಟಿನಲ್ಲಿ ಮತ್ತೆ ಕೌಟುಂಬಿಕ ವ್ಯವಸ್ಥೆಯತ್ತಲೇ ಕೈಚಾಚಿದ್ದು ಮತ್ತು ತಕ್ಕಮಟ್ಟಿಗೆ ಯಶಸ್ವಿಯಾಗಿದ್ದು ನಾವಿಲ್ಲಿ ಗಮನಿಸಬೇಕಾಗಿರುವ ಅಂಶಗಳಲ್ಲೊಂದು.

ಇಂದು ಮಹಾನಗರಗಳಲ್ಲಿ ನೆಲೆಯೂರಿ, ಇಲ್ಲಿನ ಜೀವನಶೈಲಿಯ ದುಬಾರಿ ಖರ್ಚುವೆಚ್ಚಗಳನ್ನು ಸರಿದೂಗಿಸಲು ಗಂಡ-ಹೆಂಡಿರಿಬ್ಬರೂ ಉದ್ಯೋಗಕ್ಕೆ ತೆರಳಬೇಕಾಗಿರುವ ಅವಶ್ಯಕತೆಯಿರುವಾಗ, ಮನೆಯ ಮಕ್ಕಳೊಂದಿಗೆ ಜೊತೆಯಾಗಿ ಅವರಲ್ಲಿ ಮೌಲ್ಯಗಳನ್ನು ತುಂಬುವ ಸವಾಲನ್ನು ಮತ್ತು ಈ ರೀತಿಯಾಗಿ ಒಟ್ಟಾರೆಯಾಗಿ ಕುಟುಂಬ ನಿರ್ವಹಣೆಯ ಭಾರವನ್ನು ಸಹನೀಯವಾಗಿಸುವುದು ಇದೇ ಹಿರಿಯರು. ಅಪ್ಪ-ಅಮ್ಮಂದಿರು ವಾರಕ್ಕೆ ಐದು ದಿನ ತಮ್ಮ ಉದ್ಯೋಗದಲ್ಲಿ ವ್ಯಸ್ತರಾಗಿದ್ದು, ಈ ಅವಧಿಯಲ್ಲಿ ಮನೆಯ ಮಕ್ಕಳು ಅಜ್ಜ-ಅಜ್ಜಿಯರೊಂದಿಗೆ ಸುರಕ್ಷಿತವಾಗಿದ್ದಾರೆ ಎಂಬುದು ಪೋಷಕರಲ್ಲಿ ತರುವ ಸಮಾಧಾನವು ಚಿಕ್ಕದೇನಲ್ಲ. ಮಹಾನಗರಗಳಲ್ಲಿ ಇಂದು ಮನೆಯ ನಿರ್ವಹಣೆ ಮತ್ತು ಮಕ್ಕಳ ಆರೈಕೆಗೆಂದು ಹಲವು ಸೌಲಭ್ಯ-ಸಂಪನ್ಮೂಲಗಳಿದ್ದರೂ, ಇದ್ಯಾವುದೂ ಕೌಟುಂಬಿಕ ಬೆಂಬಲವು ನೀಡುವ ಸುರಕ್ಷತಾ ಭಾವಕ್ಕೆ ಸಮವಲ್ಲ ಎಂಬುದು ಒಪ್ಪಿಕೊಳ್ಳಲೇಬೇಕಾದ ಸತ್ಯ.       

ಸಾಂದರ್ಭಿಕ ಚಿತ್ರ

ಮಹಾನಗರಗಳ ಬದುಕು ನಮ್ಮ ಹಿರಿಯರಿಗೆ ಪರಿಪೂರ್ಣವೆನಿಸದೆ ಇರಬಹುದು. ಆದರೆ ಇಲ್ಲಿಯ ಕೌಟುಂಬಿಕ ಅನಿವಾರ್ಯತೆಗಳು ನೀಡುವ ಇಂತಹ ಜವಾಬ್ದಾರಿ ಮತ್ತು ಮೈತ್ರಿಗಳು ಅವರನ್ನು ತಕ್ಕಮಟ್ಟಿಗಾದರೂ ಕ್ರಿಯಾಶೀಲರನ್ನಾಗಿಸಿ ಇಡುತ್ತಿವೆ. ಆಸುಪಾಸಿನ ವಾಕಿಂಗ್ ಗೆಳೆಯರು, ಮೊಮ್ಮಕ್ಕಳೊಂದಿಗೆ ನಿತ್ಯವೂ ಕಾಲ್ನಡಿಗೆಯಲ್ಲಿ ಪಾರ್ಕು-ಶಾಲೆಗಳಿಗೆ ಹೋಗುವ ಖುಷಿ, ಈ ನೆಪಗಳಲ್ಲಿ ಹೊಸಬರೊಂದಿಗೆ ಬೆರೆಯಲು ಸಿಗುವ ಅವಕಾಶಗಳು, ಹೊಸ ಅನುಭವಗಳು… ಹೀಗೆ ಜೀವನಪ್ರೀತಿ ಮತ್ತು ಮುಕ್ತ ಮನೋಭಾವದೊಂದಿಗೆ ಬದುಕಬಲ್ಲ ವೃದ್ಧರನ್ನು ಮಹಾನಗರಗಳು ಹೆಚ್ಚೇನೂ ಕಾಡಲಾರವು. ಇಳಿಸಂಜೆಯ ಹೊತ್ತಿನಲ್ಲಿ ನಮ್ಮ ಸುತ್ತಮುತ್ತಲಿನ ಪುಟ್ಟ ಪಾರ್ಕುಗಳು ಪುಟಾಣಿ ಮಕ್ಕಳೊಂದಿಗೆ ಮತ್ತು ಅವರೊಂದಿಗೆ ನೆರಳಿನಂತೆ ಬರುವ ಜವಾಬ್ದಾರಿಯುತ ವೃದ್ಧರಿಂದಾಗಿ ಹೆಚ್ಚು ಸ್ವಾರಸ್ಯಕರವಾಗಿ ಕಾಣುವುದು ಹೀಗೆ.

ಕೊಡುಕೊಳ್ಳುವಿಕೆಯ ವ್ಯಾವಹಾರಿಕ ಮನೋಭಾವವೇ ಸದ್ಯ ಹೆಚ್ಚಿರುವ ಮಹಾನಗರಗಳಲ್ಲಿ, ಕೆಲ ಚಿಕ್ಕಪುಟ್ಟ ಕೊರತೆಗಳ ನಡುವೆಯೂ ಕುಟುಂಬ ವ್ಯವಸ್ಥೆಯು ಹೀಗೆ ಪರಿಣಾಮಕಾರಿಯೆಂದು ಸಾಬೀತಾಗುತ್ತಿರುವುದು ಒಂದು ಸಂತಸದ ಸಂಗತಿ. ಪೋಷಕರ ಅನುಪಸ್ಥಿತಿಯಲ್ಲಿ ಮಕ್ಕಳ ಮೇಲಾಗುವ ತರಹೇವಾರಿ ದೌರ್ಜನ್ಯಗಳು ಮತ್ತು ಒಟ್ಟಾರೆಯಾಗಿ ಮಹಾನಗರಗಳಲ್ಲಿ ಹೆಚ್ಚುತ್ತಿರುವ ಅಪ್ರಾಪ್ತರ ಮೇಲಾಗುತ್ತಿರುವ ಅಪರಾಧ ಪ್ರಕರಣಗಳನ್ನು ಗಮನಿಸಿದರೆ, ನಮ್ಮ ಮನೆಗಳಲ್ಲಿ ಹಿರಿಯರ ಉಪಸ್ಥಿತಿಯು ಪೋಷಕರಿಗೆ ನೀಡಬಲ್ಲ ಸುರಕ್ಷತಾ ಭಾವ ಮತ್ತು ಮಕ್ಕಳಿಗೆ ನೀಡಬಲ್ಲ ಜೀವನಮೌಲ್ಯಗಳ ಕಲಿಕೆಯನ್ನು ಯಾವ ದುಬಾರಿ ಖಾಸಗಿ ಸಂಸ್ಥೆಗಳೂ ನೀಡಲಾರವು. ಜೊತೆಗೇ ಈ ನೆಪದಲ್ಲಿ ಮನೆಯ ಮಕ್ಕಳೊಂದಿಗೆ ಸ್ವತಃ ಮಗುವಾಗುತ್ತಾ, ಒಂದಿಲ್ಲೊಂದು ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿರುತ್ತಾ, ಇಳಿವಯಸ್ಸನ್ನು ಸಂತಸದಾಯಕವಾಗಿ ಕಳೆಯುವ ಅವಕಾಶವು ಆಧುನಿಕ ಕುಟುಂಬ ವ್ಯವಸ್ಥೆಯು ಹಿರಿಯರಿಗೆ ನೀಡಿರುವ ಅತ್ಯುತ್ತಮ ವರಗಳಲ್ಲೊಂದು ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ.

ಎಲ್ಲರಿಗೂ ಸಲ್ಲುವವನಂತೆ ಕಾಣುವ ಮಹಾನಗರಗಳಲ್ಲಿ ಹಲವು ಪೀಳಿಗೆಗಳು ಜೊತೆಯಾಗಿ ಹೆಜ್ಜೆಹಾಕುತ್ತಾ ಅರ್ಥಪೂರ್ಣವಾಗಿ ಮುನ್ನಡೆಯುತ್ತಿರುವುದು ಹೀಗೆ!

ಪ್ರಸಾದ್‌ ನಾಯ್ಕ್‌, ದೆಹಲಿ 

ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ಅಡಿಷನಲ್ ಚೀಫ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರಸಾದ್ ನಾಯ್ಕ್ ಪ್ರಸ್ತುತ ದೆಹಲಿ ಮಹಾನಗರದ ನಿವಾಸಿ. “ಹಾಯ್ ಅಂಗೋಲಾ”, “ಸಫಾ”, “ಸ್ನೇಹಗ್ರಾಮದ ಸಂಸತ್ತು” ಮತ್ತು “ಮರ ಏರಲಾರದ ಗುಮ್ಮ” ಇವರ ಪ್ರಕಟಿತ ಕೃತಿಗಳು. ಕನ್ನಡದ ಓದುಗರಿಗೆ ಕತೆಗಾರರಾಗಿ, ಅಂಕಣಕಾರರಾಗಿ ಮತ್ತು ಅನುವಾದಕರಾಗಿ ಪರಿಚಿತರು.

ಇದನ್ನೂ ಓದಿ- ಫೇಕ್ ಅಂಡ್ ಹೇಟ್ ಫ್ಯಾಕ್ಟರಿಗಳ ಒಂದು ನೆನಪು

More articles

Latest article