ನಿವೃತ್ತ ಡಿಜಿಪಿ ಓಂಪ್ರಕಾಶ್‌ ಹತ್ಯೆ ಪ್ರಕರಣ: ತಾಯಿ, ಸಹೋದರಿ ಹೆಸರು ಉಲ್ಲೇಖಿಸದೆ ದೂರು ನೀಡಿದ ಪುತ್ರ ಕಾರ್ತಿಕೇಶ್‌

Most read

ಬೆಂಗಳೂರು: ಕರ್ನಾಟಕದ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಅವರ ಹತ್ಯೆ ಪ್ರಕರಣದ ಸಂಬಂಧ ಎಚ್.ಎಸ್.ಆರ್ ಲೇಔಟ್ ಠಾಣೆಯಲ್ಲಿ ಎಫ್‌ ಐ ಆರ್ ದಾಖಲಿಸಲಾಗಿದೆ. ಘಟನೆ ಕುರಿತು ಅವರ ಪುತ್ರ ಕಾರ್ತಿಕೇಶ್‌ ದೂರು ನೀಡಿದ್ದಾರೆ.‌‌ ಆದರೆ ಅವರು ದೂರಿನಲ್ಲಿ ಯಾರ ಹೆಸರನ್ನೂ ಉಲ್ಲೇಖಿಸಿಲ್ಲ. ತಂದೆಯ ಸಾವಿಗೆ ಕಾರಣರಾದವರ ಪತ್ತೆ‌ ಮಾಡುವಂತೆ‌ ಮನವಿ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಡಿವಾಳ ಎಸಿಪಿ ವಾಸುದೇವ್ ಅವರಿಗೆ ಪ್ರಕರಣದ ತನಿಖೆ ನಡೆಸುವ ಜವಾಬ್ದಾರಿಯನ್ನು ವಹಿಸಲಾಗಿದೆ.

ಓಂ ಪ್ರಕಾಶ್ ಅವರ ಹತ್ಯೆ ಸಂಬಂಧ ಅವರ ಪತ್ನಿ ಪಲ್ಲವಿ ಹಾಗೂ ಪುತ್ರಿ ಕೃತಿ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಇಬ್ಬರನ್ನೂ ಭಾನುವಾರ ರಾತ್ರಿ ಮಹಿಳಾ ಸಾಂತ್ವನ‌ ಕೇಂದ್ರದಲ್ಲಿ ಇರಿಸಲಾಗಿತ್ತು. ಸೋಮವಾರ ಬೆಳಿಗ್ಗೆ ಇಬ್ಬರನ್ನೂ ಠಾಣೆಗೆ ಕರೆತಂದು ವಿಚಾರಣೆ ನಡೆಸಲು ಆರಂಭಿಸಿದಾಗ ಅವರು ಯಾವುದೇ ರೀತಿಯ ಸಹಕಾರ ನೀಡಿಲ್ಲ. ಬದಲಾಗಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ. ನಮ್ಮನ್ನು ಏಕೆ ವಶಕ್ಕೆ ಪಡೆದುಕೊಂಡಿದ್ದೀರಿ’ ಎಂದು ಪ್ರಶ್ನಿಸಿದ್ದಾರೆ. ಹೊಯ್ಸಳ ಜೀಪಿನಿಂದ ಕೆಳಕ್ಕೆ ಇಳಿಯದೇ ಜೀಪಿನಲ್ಲೇ ಕುಳಿತು ಮೊಂಡಾಟ ಪ್ರದರ್ಶಿಸಿದ್ದಾರೆ. ಕೊನೆಗೆ ಪೊಲೀಸರು ಅವರಿಬ್ಬರನ್ನೂ ಮನವೊಲಿಸಿ ಕೆಳಕ್ಕೆ ಇಳಿಸಿ ವಿಚಾರಣೆಗೆ ಕರೆದೊಯ್ದಿದ್ದಾರೆ.

ಇಂದು ಇಬ್ಬರನ್ನೂ ವಿಚಾರಣೆ ನಡೆಸಿ ಸಂಜೆ ವೇಳೆಗೆ ಕೋರ್ಟ್‌ಗೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಪಲ್ಲವಿ ಅವರನ್ನು ಭಾನುವಾರ ರಾತ್ರಿಯೇ ವೈದ್ಯಕೀಯ ಪರೀಕ್ಷೆಗೆ ಪೊಲೀಸರು ಒಳಪಡಿಸಲಾಗಿತ್ತು. ತಪಾಸಣೆ ವೇಳೆ ಪಲ್ಲವಿ ಅವರಿಗೆ ಆರೋಗ್ಯ ಸಮಸ್ಯೆ ಇರುವುದು ಪತ್ತೆಯಾಗಿದೆ. ಮೃತದೇಹವನ್ನು ಸೇಂಟ್ ಜಾನ್ಸ್ ಆಸ್ಪತ್ರೆಯ ‌ಶವಾಗಾರದಲ್ಲಿ ಇರಿಸಲಾಗಿದೆ. ಓಂ‌ ಪ್ರಕಾಶ್ ಅವರ ಕುಟುಂಬದವರ ಒಪ್ಪಿಗೆ ಪಡೆದು ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಪುತ್ರಿ ಕೃತಿ ಡಿಸಿಪಿ ಸಾರಾ ಫಾತೀಮಾ ಅವರು ಎಚ್‌ ಎಸ್‌ ಆರ್‌ ಪೊಲೀಸ್‌ ಠಾಣೆಗೆ ಆಗಮಿಸಿದ್ದು ಕೃತಿ ವಿಚಾರಣೆ ನಡೆಸಲಿದ್ದಾರೆ. ಈ ವೇಳೆ ಕೃತಿ ಅವರು, ಮಹಿಳಾ ಎಸ್‌ ಐ ಒಬ್ಬರ ಕೈ ಪರಚಿದ ಮಾಹಿತಿಯೂ ಲಭ್ಯವಾಗಿದೆ. ಆದರೂ ಕೃತಿ ಅವರ ಫಿಂಗರ್‌ ಪ್ರಿಂಟ್‌ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ನ್ಯಾಯಾದೀಶರ ಮುಂದೆ ಹಾಜರುಪಡಿಸಿ ಬಳಿಕ ವಶಕ್ಕೆ ಪಡೆದು ತಾಯಿ ಮಗಳ ವಿಚಾರಣೆ ನಡೆಸಲಿದ್ದಾರೆ.

More articles

Latest article