ಮಹಾಮಳೆ: ಪಶ್ಚಿಮಘಟ್ಟದ ಒತ್ತುವರಿದಾರರು, ಹೋಮ್ ಸ್ಟೇ ಮಾಲಿಕರ ಮೇಲೆ ಸರ್ಕಾರದ ಕೆಂಗಣ್ಣು

Most read

ಬೆಂಗಳೂರು: ಶಿರೂರು ಬಳಿ ಸಂಭವಿಸಿದ ಗುಡ್ಡ ಕುಸಿತದಲ್ಲಿ 11 ಜನ ಬಲಿಯಾದ ಬೆನ್ನಲ್ಲೇ ಕೇರಳದ ವಯನಾಡಿನಲ್ಲಿ ಸಂಭವಿಸಿರುವ ಗುಡ್ಡ ಕುಸಿತದಲ್ಲಿ 250ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಭವಿಷ್ಯದಲ್ಲಿ ಇಂಥ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲು ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.

ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು, ಚಾಮರಾಜನಗರ, ಬೆಳಗಾವಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಹಾಸನ ಸೇರಿದಂತೆ ರಾಜ್ಯದ ಪಶ್ಚಿಮಘಟ್ಟದ ಎಲ್ಲ ಗಿರಿ ಪ್ರದೇಶಗಳಲ್ಲಿ ಅನಧಿಕೃತವಾಗಿ ಮತ್ತು ಅರಣ್ಯ ಪ್ರದೇಶ ಒತ್ತುವರಿ ಮಾಡಿ ನಿರ್ಮಿಸಲಾಗಿರುವ ಬಡಾವಣೆ, ತೋಟ, ಹೋಂ ಸ್ಟೇ ಮತ್ತು ರೆಸ್ಟೋರೆಂಟ್ ಗಳ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಆದೇಶಿಸಿದೆ.

ಪಶ್ಚಿಮಘಟ್ಟದಲ್ಲಿ 2015 ರಿಂದೀಚೆಗೆ ಆಗಿರುವ ಎಲ್ಲ ಅರಣ್ಯ ಒತ್ತುವರಿ ತೆರವುಗೊಳಿಸಲು ತತ್ ಕ್ಷಣವೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮತ್ತು ಒಂದು ತಿಂಗಳೊಳಗೆ ಕೈಗೊಂಡ ಕ್ರಮದ ವಿವರದೊಂದಿಗೆ ಕಡತದಲ್ಲಿ ವರದಿ ಸಲ್ಲಿಸಲು ಅರಣ್ಯ ಸಚಿವ ಈಶ್ವರ್ ಖಂಡ್ರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಪ್ರಕೃತಿ ದತ್ತವಾದ ಪಶ್ಚಿಮ ಘಟ್ಟದ ಗುಡ್ಡಗಳು ಮತ್ತು ಶೋಲಾ ಅರಣ್ಯಗಳನ್ನು ಕಡಿದು ಕಾಫಿ ತೋಟ, ಮನೆ, ಹೋಂಸ್ಟೇ, ರೆಸ್ಟೋರೆಂಟ್ ಮಾಡುತ್ತಿರುವುದರಿಂದ ಹಾಗೂ ಬೇರಿನಿಂದ ಗಟ್ಟಿಯಾಗಿ ಮಣ್ಣು ಹಿಡಿದಿಡುವ ಬೃಹತ್ ಮರಗಳ ಕಡಿತ, ಅವೈಜ್ಞಾನಿಕವಾಗಿ ಗುಡ್ಡ ಕತ್ತರಿಸಿ ನಿರ್ಮಿಸಿರುವ ರಸ್ತೆಗಳಿಂದ ಇಂತಹ ದುರಂತ ಮರುಕಳಿಸುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಈ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಸಚಿವರು ತಿಳಿಸಿದ್ದಾರೆ.

ಗಿರಿ ಮತ್ತು ಘಟ್ಟ ಪ್ರದೇಶದಲ್ಲಿ ವಿಪರೀತ ವಾಹನಗಳ ಸಂಚಾರದಿಂದಲೂ ಅಪಾಯ ಎದುರಾಗುತ್ತಿದೆ. ಜನರು ರಜಾ ಸಮಯದಲ್ಲಿ ಪ್ರವಾಸ, ಚಾರಣದ ಹೆಸರಲ್ಲಿ ಗಿರಿ ಮತ್ತು ಕಾಡಿನ ಪ್ರದೇಶಕ್ಕೆ ಸಾವಿರಾರು ಸಂಖ್ಯೆಯಲ್ಲಿ ಬರುವುದೂ ಇಂತಹ ದುರಂತಗಳಿಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಪ್ರದೇಶ ಒತ್ತುವರಿ ಸೇರಿದಂತೆ ಪಶ್ಚಿಮಘಟ್ಟದಲ್ಲಿ ಆಗಿರುವ ಎಲ್ಲ ಅಕ್ರಮಗಳ ತಡೆಗೆ ಸರ್ಕಾರ ಮುಂದಾಗಿದೆ.

More articles

Latest article