ನರ್ಸ್ ಸ್ವಾತಿ ಕೊಲೆ ಪ್ರಕರಣ: ಆರೋಪಿ ನಯಾಜ್ ಬಂಧನ, ಉಳಿದ ಇಬ್ಬರಿಗೆ ಶೋಧ

Most read

ಹಾವೇರಿ: ರಾಣೆಬೆನ್ನೂರು ತಾಲ್ಲೂಕಿನ ಪತ್ತೇಪುರ ಬಳಿ ತುಂಗಭದ್ರಾ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದ ಸ್ವಾತಿ ಬ್ಯಾಡಗಿ ಎಂಬುವರ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಸ್ವಿಯಾಗಿದ್ದಾರೆ. 22 ವರ್ಷದ ಸ್ವಾತಿಯನ್ನು ಹತ್ಯೆ ಮಾಡಿದ ಆರೋಪದ ಮೇಲೆ ಹಲಗೇರಿ ಠಾಣೆಯ ಪೊಲೀಸರು ಈಕೆಯ ಪ್ರಿಯಕರ ನಯಾಜ್ ಇಮಾಮ್ಸಾಬ್ ಬೆಣ್ಣಿಗೇರಿ (28) ಎಂಬಾತನನ್ನು ಬಂಧಿಸಿದ್ದಾರೆ. ಕೊಲೆಗೆ ಸಹಕಾರ ನೀಡಿದ್ದ ಆತನ ಸ್ನೇಹಿತರಾದ ಮಾಸೂರಿನ ದುರ್ಗಾಚಾರಿ ಬಡಿಗೇರ ಮತ್ತು ವಿನಾಯಕ ಪೂಜಾರ ತಲೆಮರೆಸಿಕೊಂಡಿದ್ದಾರೆ.

ರಟ್ಟೀಹಳ್ಳಿ ತಾಲ್ಲೂಕಿನ ಮಾಸೂರು ಗ್ರಾಮದ ಸ್ವಾತಿ, ರಾಣೆಬೆನ್ನೂರಿನ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಮಾರ್ಚ್ 6ರಂದು ಅವರ ಮೃತದೇಹ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆ ನಡೆಸಿದಾಗ ಕೊಲೆ ಎನ್ನುವುದು ಬೆಳಿಕೆಗೆ ಬಂದಿತ್ತು. ಹಿರೇಕೆರೂರು ತಾಲ್ಲೂಕಿನ ಹಳೇ ವೀರಾಪುರದ ಆರೋಪಿ ನಯಾಜ್, ಇಬ್ಬರು ಸ್ನೇಹಿತರ ಜೊತೆ ಸೇರಿ ಕೃತ್ಯ ಎಸಗಿದ್ದ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ತಿಳಿಸಿದ್ದಾರೆ.

ಹೋರಿ ಹಬ್ಬದ ಸಂದರ್ಭದಲ್ಲಿ ಸ್ವಾತಿಗೆ ನಯಾಜ್ ಪರಿಚಯವಾಗಿತ್ತು. ಈ ಸ್ನೇಹ ಪ್ರೀತಿಗೆ ತಿರುಗಿತ್ತು. ತನ್ನನ್ನು ಮದುವೆಯಾಗುವಂತೆ ಸ್ವಾತಿ ಒತ್ತಾಯಿಸಿದಾಗ ನಯಾಜ್ ಒಪ್ಪಿರಲಿಲ್ಲ. ಈತನಿಗೆ ತನ್ನದೇ ಕೋಮಿನ ಬೇರೊಂದು ಯುವತಿ ಜೊತೆ ಮದುವೆ ನಿಶ್ಚಯವಾಗಿತ್ತು. ಈ ವಿಷಯ ತಿಳಿದ ತೆರಳಿ ಸ್ವಾತಿ ಗಲಾಟೆ ಮಾಡಿದ್ದರು. ಇದರಿಂದ ಸಿಟ್ಟಿಗೆದ್ದ ನಯಾಜ್, ಸ್ವಾತಿಯ ಕೊಲೆ ಮಾಡಲು ಸಂಚು ರೂಪಿಸಿದ್ದ ಎಂದು ತಿಳಿದು ಬಂದಿದೆ. ಮಾತುಕತೆ ನೆಪದಲ್ಲಿ ಸ್ವಾತಿ ಅವರನ್ನು ಮಾರ್ಚ್ 3ರಂದು ರಟ್ಟೀಹಳ್ಳಿಗೆ ಕರೆಸಿದ್ದ ಆರೋಪಿ ನಯಾಜ್, ಬಾಡಿಗೆ ಕಾರಿನಲ್ಲಿ ರಾಣೆಬೆನ್ನೂರಿನಲ್ಲಿರುವ ಸುವರ್ಣ ಉದ್ಯಾನಕ್ಕೆ ಕರೆದುಕೊಂಡು ಹೋಗಿದ್ದ. ಅಲ್ಲಿಗೆ ದುರ್ಗಾಚಾರಿ ಹಾಗೂ ವಿನಾಯಕ ಬಂದಿದ್ದರು. ನಂತರ, ನಾಲ್ವರು ರಟ್ಟೀಹಳ್ಳಿಯ ಕಬ್ಬಿಣಕಂತಿಮಠ ಬಳಿಯ ಪಾಳು ಬಿದ್ದ ತರಳಬಾಳು ಶಾಲೆಗೆ ಹೋಗಿದ್ದರು. ಅಲ್ಲಿ ನಯಾಜ್ ಹಾಗೂ ಸ್ವಾತಿ ನಡುವೆ ಜೋರು ಜಗಳ ನಡೆದಿತ್ತು. ಆಗ ಮೂವರು ಆರೋಪಿಗಳು ಸೇರಿ ಸ್ವಾತಿ ಮೇಲೆ ಹಲ್ಲೆ ಮಾಡಿ ಕುತ್ತಿಗೆಗೆ ಟವಲ್ನಿಂದ ಬಿಗಿದು ಉಸಿರುಗಟ್ಟಿಸಿ ಸಾಯಿಸಿದ್ದರು. ಮೃತದೇಹವನ್ನು ಕಾರಿನ ಡಿಕ್ಕಿಯಲ್ಲಿ ಹಾಕಿಕೊಂಡು ಕೂಸಗಟ್ಟಿ ನಂದಿಗುಡಿ ಗ್ರಾಮದ ಬಳಿಯ ತುಂಗಭದ್ರಾ ನದಿಗೆ ಎಸೆದಿದ್ದರು. ಇದೇ ಶವ ಮಾರ್ಚ್ 6ರಂದು ಪತ್ತೇಪುರ ಬಳಿ ಪತ್ತೆಯಾಗಿತ್ತು ಎಂದು ಪೊಲೀಸರು ವಿವರಿಸಿದ್ದಾರೆ.

ಮಾರ್ಚ್ 6ರಂದು ಪತ್ತೆಯಾಗಿದ್ದ ಸ್ವಾತಿ ಮೃತದೇಹವನ್ನು ರಕ್ಷಿಸುವ ಸ್ಥಿತಿಯಲ್ಲಿ ಇರಲಿಲ್ಲ. ದುರ್ನಾತ ಬರುತ್ತಿತ್ತು. ಆದ್ದರಿಂದ ವೈದ್ಯರ ಸಲಹೆಯಂತೆ ಕಾನೂನು ಪ್ರಕಾರ ಮಾರ್ಚ್ 7ರಂದು ಅಂತ್ಯಕ್ರಿಯೆ ಮಾಡಲಾಗಿದೆ ಎಂದು ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್ ತಿಳಿಸಿದ್ದಾರೆ.
ಸ್ವಾತಿ ಅವರ ಮೃತದೇಹ ಪತ್ತೆಯಾದ 24 ಗಂಟೆಯಲ್ಲೇ ಪೊಲೀಸರು ಅಂತ್ಯಕ್ರಿಯೆ ನಡೆಸಿದ್ದಾರೆ. ಶವದ ಗುರುತು ಪತ್ತೆ ಮಾಡದೇ ಮತ್ತು ಪೋಷಕರನ್ನು ಹುಡುಕದೇ ಅಂತ್ಯಕ್ರಿಯೆ ಮಾಡಿ ಕರ್ತವ್ಯಲೋಪ ಎಸಗಿರುವವರನ್ನು ಅಮಾನತು ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಪಡಿಸಿದ್ದಾರೆ. ‘ಸ್ವಾತಿ ಕಾಣೆಯಾದ ಬಗ್ಗೆ ಅವರ ತಾಯಿ ಹಿರೇಕೆರೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ಸುಳಿವು ಸಿಕ್ಕಿರಲಿಲ್ಲ. ಅಂತ್ಯಕ್ರಿಯೆ ನೆರವೇರಿಸಿದ್ದ ಹಲಗೇರಿ ಠಾಣೆ ಪೊಲೀಸರು ಮಾರ್ಚ್ 7ರ ಸಂಜೆ ತಾಯಿಗೆ ವಿಷಯ ತಿಳಿಸಿದ್ದರು. ಮೃತದೇಹದ ಚಿತ್ರ ತೋರಿಸಿದಾಗ ತಾಯಿ ಗುರುತಿಸಿದ್ದರು. ಆದರೆ ತಾವೇ ಅಂತ್ಯಕ್ರಿಯೆ ನಡೆಸಿರುವುದಾಗಿ ಪೊಲೀಸರು ಹೇಳಿದರು. ಇದರಿಂದ ನೊಂದ ತಾಯಿ ನನ್ನ ಮಗಳ ಮುಖ ನೋಡಲು ಆಗಲಿಲ್ಲ ಎಂದು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

More articles

Latest article