ಮುಂಬಯಿ: ದೇಶದ ಅಣು ಪರೀಕ್ಷೆಗಳಲ್ಲಿ ಮಹತ್ವದ ಪಾತ್ರ ವಹಿಸಿದ್ದ ದಿಗ್ಗಜ ನ್ಯೂಕ್ಲಿಯರ್ ವಿಜ್ಞಾನಿ ಡಾ ಆರ್. ಚಿದಂಬರಂ ಅವರು ಶನಿವಾರ ನಿಧನರಾದರು. ಪೋಖ್ರಾನ್ನಲ್ಲಿ 1974 ಹಾಗೂ 1998ರಲ್ಲಿ ನಡೆಸಲಾದ ಭಾರತದ ಪರಮಾಣು ಸ್ಫೋಟ ಪರೀಕ್ಷೆಗಳಲ್ಲಿ ಚಿದಂಬರಂ ಅವರು ಪ್ರಮುಖ ಪಾತ್ರ ವಹಿಸಿದ್ದರು. ಮುಂಬಯಿಯ ಜಸ್ಲೋಕ್ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು ಎಂದು ಆಟೋಮಿಕ್ ಎನರ್ಜಿ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭಾರತದ ಆಟೋಮಿಕ್ ಎನರ್ಜಿ ಕಮಿಷನ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು, ಭಾರತ ಸರ್ಕಾರಕ್ಕೆ ಪ್ರಧಾನ ವೈಜ್ಞಾನಿಕ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದಾರೆ. ದೇಶವನ್ನು ಅಣ್ವಸ್ತ್ರ ದೇಶವನ್ನಾಗಿ ರೂಪಿಸುವಲ್ಲಿ ಗಣನೀಯ ಕೊಡುಗೆ ನೀಡಿದ ಅವರನ್ನು ಪದ್ಮ ವಿಭೂಷಣ ಪುರಸ್ಕಾರ ನೀಡಿ ಗೌರವಿಸಲಾಗಿತ್ತು.
1936ರಲ್ಲಿ ಜನಿಸಿದ ಚಿದಂಬರಂ, ಚೆನ್ನೈನ ಪ್ರೆಸಿಡೆನ್ಸಿ ಕಾಲೇಜ್ ಹಾಗೂ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಹಳೆಯ ವಿದ್ಯಾರ್ಥಿಯಾಗಿದ್ದರು. ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ (2001- 2018), ಭಾಭಾ ಆಟೋಮಿಕ್ ಸಂಶೋಧನಾ ಕೇಂದ್ರದ ನಿರ್ದೇಶಕ (1990- 1993), ಅಣು ಶಕ್ತಿ ಆಯೋಗದ ಅಧ್ಯಕ್ಷ ಮತ್ತು ಭಾರತದ ಸರ್ಕಾರದ ಡಿಎಇ ಕಾರ್ಯದರ್ಶಿಯಾಗಿ (1993- 2000) ಸೇವೆ ಸಲ್ಲಿಸಿದ್ದರು.
1974ರಲ್ಲಿ ‘ಆಪರೇಷನ್ ಸ್ಮೈಲಿಂಗ್ ಬುದ್ಧ’ ಹಾಗೂ 1998ರಲ್ಲಿ ‘ಆಪರೇಷನ್ ಶಕ್ತಿ’ ಎರಡರಲ್ಲಿಯೂ ಅವರ ಪಾತ್ರ ಸ್ಮರಣೀಯ. 1974ರಲ್ಲಿ ದೇಶದ ಮೊದಲ ಅಣು ಪರೀಕ್ಷೆಯಲ್ಲಿ ಅವರು ಪ್ರಧಾನ ಪಾತ್ರ ವಹಿಸಿದ್ದರು. 1998ರಲ್ಲಿ ಪೋಖ್ರಾನ್- II ಪರಮಾಣು ಪರೀಕ್ಷೆಯಲ್ಲಿ ಆಟೋಮಿಕ್ ಎನರ್ಜಿ ಇಲಾಖೆಯ ತಂಡವನ್ನು ಮುನ್ನಡೆಸಿದ್ದರು. ಜಾಗತಿಕ ಮಟ್ಟದಲ್ಲಿ ಭಾರತವನ್ನು ಪರಮಾಣು ಶಕ್ತಿಯ ದೇಶವನ್ನಾಗಿ ನಿಲ್ಲಿಸುವಲ್ಲಿ ಅವರು ಕೊಡುಗೆ ಸಲ್ಲಿಸಿದ್ದರು.