ಬೆಂಗಳೂರು: ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್ ಎಚ್ ಎಂ) ಮತ್ತು ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದಡಿಯಲ್ಲಿ (ಎನ್ ಯುಎಚ್ಎಂ) ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಹಾಗೂ ಹೊರಗುತ್ತಿಗೆ ಸಿಬ್ಬಂದಿಯನ್ನು ಮೌಲ್ಯಮಾಪನದ ಹೆಸರಿನಲ್ಲಿ ಕೆಲಸದಿಂದ ವಜಾಗೊಳಿಸಬಾರದು ಎಂದು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘವು ಸರ್ಕಾರವನ್ನು ಒತ್ತಾಯಿಸಿದೆ.
ಅನುದಾನ ಉಳಿಸಲು ಆರೋಗ್ಯ ಇಲಾಖೆಯು ಸಿಬ್ಬಂದಿಯನ್ನು ಕೆಲಸದಿಂದ ತೆಗೆಯುವ ಕ್ರಮ ಕೈಗೊಳ್ಳಲಾಗಿದೆ. ಈ ನಿರ್ಧಾರದಿಂದ ಸುಮಾರು 15-18 ವರ್ಷಗಳಿಂದ ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಅನ್ಯಾಯವಾಗಲಿದೆ. ಆರ್ಥಿಕ ಸಂಕಷ್ಟದಿಂದ ಅವರ ಕುಟುಂಬಗಳು ಬೀದಿಗೆ ಬೀಳುತ್ತವೆ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯ ಪ್ರವೇಶಿಸಿ, ಸಮಸ್ಯೆ ಪರಿಹರಿಸಬೇಕು ಎಂದು ಸಂಘದ ಅಧ್ಯಕ್ಷ ಶ್ರೀಕಾಂತ್ ಸ್ವಾಮಿ ಮನವಿ ಮಾಡಿಕೊಂಡಿದ್ದಾರೆ.
ಎನ್ ಎಚ್ ಎಂ–ಎನ್ ಯುಎಚ್ ಎಂ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಸಿಬ್ಬಂದಿಯನ್ನು ಪ್ರಸಕ್ತ ಸಾಲಿಗೆ ಕೆಲಸದಲ್ಲಿ ಮುಂದುವರಿಸುವಂತೆ ಕೂಡಲೇ ಆದೇಶ ಹೊರಡಿಸಬೇಕು. ಸುಧೀರ್ಘ ಅವಧಿಗೆ ಸೇವೆ ಸಲ್ಲಿಸಿದವರನ್ನು ಕೆಲಸದಿಂದ ವಜಾಗೊಳಿಸಬಾರದು ಮತ್ತು ಮೌಲ್ಯಮಾಪನದ ಪ್ರಕ್ರಿಯೆ ರದ್ದುಪಡಿಸಬೇಕು ಎಂದೂ ಅವರು ಆಗ್ರಹಪಡಿಸಿದ್ದಾರೆ.