ಉತ್ತರ ಕನ್ನಡದಲ್ಲಿ ಈಗ ಡಾ. ಅಂಜಲಿ ಅಲೆ, ಹೋದಲ್ಲೆಲ್ಲ ಪ್ರೀತಿಯ ಹೂಮಳೆ

Most read

ಕಾರವಾರ: ಲೋಕಸಭಾ ಚುನಾವಣೆ ಘೋಷಣೆಗೆ ಮುನ್ನ ʻʻಉತ್ತರ ಕನ್ನಡ ಕ್ಷೇತ್ರ ಬಿಜೆಪಿಯ ಭದ್ರಕೋಟೆ, ಅದನ್ನು ಯಾರೂ ಅಲುಗಾಡಿಸಲು ಆಗುವುದಿಲ್ಲʼʼ ಎಂಬ ಸಾಮಾನ್ಯ ಮಾತುಗಳು ಎಲ್ಲೆಡೆ ಕೇಳಿಬರುತ್ತಿದ್ದವು. ಆದರೆ ಕಳೆದ ಹದಿನೈದು ದಿನಗಳಲ್ಲಿ ಕ್ಷೇತ್ರದ ಚಿತ್ರಣವೇ ಬದಲಾಗಿದೆ. ಯಾರೂ ಊಹಿಸಿದ ರೀತಿಯಲ್ಲಿ ಡಾ. ಅಂಜಲಿ ಹೇಮಂತ್ ನಿಂಬಾಳ್ಕರ್ ಇಡೀ ಕ್ಷೇತ್ರದಾದ್ಯಂತ ತಮ್ಮ ಛಾಪು ಮೂಡಿಸಿದ್ದಾರೆ. ತಮ್ಮ ಸರಳತೆ, ಸಜ್ಜನಿಕೆ, ಸ್ನೇಹಭಾವದಿಂದಲೇ ಭಿನ್ನವಾಗಿ ಕಾಣುವ ಅವರು ಈಗ ಗೆಲ್ಲುವ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ.

ಖಾನಾಪುರ ಕ್ಷೇತ್ರದಲ್ಲಿ ಜಯಿಸಿ ಒಮ್ಮೆ ಶಾಸಕಿಯಾಗಿ ಕಾರ್ಯನಿರ್ವಹಿಸಿರುವ ಡಾ. ಅಂಜಲಿ ಹೇಮಂತ್ ನಿಂಬಾಳ್ಕರ್ ಅವರಿಗೆ ರಾಜಕಾರಣ ಹೊಸದಲ್ಲ. ಜನರ ನಿರೀಕ್ಷೆಗಳೇನು, ಅವುಗಳನ್ನು ಈಡೇರಿಸುವುದು ಹೇಗೆ? ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ. ಖಾನಾಪುರ ಶಾಸಕಿಯಾಗಿದ್ದಾಗ ಅವರು ಮಾಡಿದ ಜನೋಪಯೋಗಿ ಕಾರ್ಯಗಳನ್ನು ಅಲ್ಲಿನ ಜನರು ಬಾಯ್ತುಂಬ ಕೊಂಡಾಡುತ್ತಾರೆ.

ಈ ಬಾರಿ ಅವರು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾದಾಗ ಕ್ಷೇತ್ರದ ಕೆಲವರಿಗೆ ಅವರ ಬಗ್ಗೆ ಅಷ್ಟಾಗಿ ಗೊತ್ತಿರಲಿಲ್ಲ. ಆದರೆ ದಿನಗಳೆದಂತೆ ಡಾ. ಅಂಜಲಿ ಎಲ್ಲರ ಮನೆಮಗಳಾಗಿ ಹೋಗಿದ್ದಾರೆ. ಹೆಣ್ಣುಮಕ್ಕಳಿಗೆ ಉಡಿ ತುಂಬುವುದು, ಬಾಗಿನ ನೀಡುವುದು ಉತ್ತರ ಕನ್ನಡ ಜಿಲ್ಲೆಯ ಜನರ ಸಂಸ್ಕೃತಿ. ಹೀಗಾಗಿ ಹೋದಲ್ಲೆಲ್ಲ ಅವರಿಗೆ ಹೆಣ್ಣುಮಕ್ಕಳು ಉಡಿ ತುಂಬುತ್ತಿದ್ದಾರೆ. ಎಷ್ಟೋ ಕಡೆ ಈ ಹೆಣ್ಣುಮಕ್ಕಳ ಪ್ರೀತಿಗೆ ಭಾವುಕರಾಗಿ ಡಾ. ಅಂಜಲಿ ಅವರ ಕಣ್ಣು ತುಂಬಿಬಂದಿದ್ದೂ ಇದೆ.

ಅತಿಹೆಚ್ಚು ಗಮನ ಸೆಳೆಯುತ್ತಿರುವುದು ಡಾ. ಅಂಜಲಿ ಅವರ ಸರಳತೆ. ತಾನು ಚುನಾವಣೆ ಪ್ರಚಾರಕ್ಕೆ ಬಂದಿದ್ದೇನೆ ಎಂಬುದನ್ನು ಮರೆತು ಅವರು ಜನರೊಂದಿಗೆ ಜನರಾಗಿ ಬೆರೆತುಹೋಗಿರುತ್ತಾರೆ. ಬುಡಕಟ್ಟು ಸಮುದಾಯ ಮಹಿಳೆಯೊಬ್ಬರ ಬಳಿ ಎಲೆ ಅಡಿಕೆ ಪಡೆದು ಮೆಲ್ಲುವ ಒಂದು ವಿಡಿಯೋ ಈಗ ವೈರಲ್ ಆಗಿದೆ. ಅವರ ವಾತ್ಸಲ್ಯ, ಪ್ರೀತಿಯನ್ನು ಕಂಡು ಬೆರಗಾಗಿ ಹೋದವರು ಅನೇಕರು. ಡಾ. ಅಂಜಲಿ ಅವರನ್ನು ಖಾನಾಪುರದ ಜನರು ಪ್ರೀತಿಯಿಂದ ಅಂಜಲಿ ತಾಯಿ ಎಂದು ಕರೆಯುತ್ತಾರೆ. ಈಗ ಉತ್ತರ ಕನ್ನಡ ಜಿಲ್ಲೆಯಲ್ಲೂಅವರ ತಾಯ್ತನವನ್ನು ನೋಡಿ ಅಂಜಲಿ ತಾಯಿ ಎಂದೇ ಕರೆಯಲಾಗುತ್ತಿದೆ.

ʻʻ ಅಂಜಲಿ ಮೇಡಂ ನೋಡಿದರೆ ಅವರಿಗೆ ಕೈ ಮುಗಿಯಬೇಕು ಅನ್ನಿಸುತ್ತೆ. ಅಂಥ ಗೌರವಾನ್ವಿತ ಸುಸಂಸ್ಕೃತ ಹೆಣ್ಣುಮಗಳು ಅವರು. ಅವರು ಸ್ವತಃ ವೈದ್ಯರು. ಆರೋಗ್ಯ ಕ್ಷೇತ್ರ ನನ್ನ ಆದ್ಯತೆಯ ವಿಷಯ ಎಂದು ಅವರು ಮೊದಲ ದಿನದಿಂದಲೇ ಹೇಳುತ್ತಿದ್ದಾರೆ. ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತಂದೇ ತರುತ್ತೇನೆ ಎಂದು ಅವರು ಹೇಳುತ್ತಿದ್ದಾರೆ. ಅವರ ಮಾತುಗಳಲ್ಲಿ ಯಾವುದೇ ಕೃತಕತೆ ಇಲ್ಲ. ಅದೇ ನಮ್ಮೆಲ್ಲರ ಉತ್ಸಾಹವನ್ನು ಇಮ್ಮಡಿಗೊಳಿಸಿದೆʼʼ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳುತ್ತಾರೆ.

ಡಾ. ಅಂಜಲಿ ಅವರ ಪ್ರಚಾರದ ವಿಶೇಷವೆಂದರೆ ಅವರು ಎಲ್ಲೇ ಹೋದರೂ ಹೆಣ್ಣುಮಕ್ಕಳು ಅವರ ಸುತ್ತ ನೆರೆದುಬಿಡುತ್ತಾರೆ. ಅವರ ಜೊತೆ ಸಂವಾದ ನಡೆಸುವಾಗ ಮೊದಲು ಕೇಳುವ ಪ್ರಶ್ನೆಯೇ, ಗೃಹಲಕ್ಷ್ಮಿಯ 2000 ಹಣ ಬರ್ತಾ ಇದೆಯಾ ಇಲ್ವಾ ಎಂದು. ಗ್ಯಾರೆಂಟಿ ಯೋಜನೆಗಳು ನಿಮ್ಮನ್ನು ತಲುಪಿದೆಯಾ ಇಲ್ಲವಾ ಎಂದು. ಸರ್ಕಾರದ ಗ್ಯಾರೆಂಟಿಗಳೆಲ್ಲ ನಮ್ಮನ್ನು ತಲುಪಿದೆ ಎಂದು ಆ ಮಹಿಳೆಯರು ಹೇಳಿದಾಗ ಡಾ. ಅಂಜಲಿಯವರ ಮೊಗದಲ್ಲಿ ಮಂದಹಾಸ ಮೂಡುತ್ತದೆ. ಚುನಾವಣೆ ಗೆಲುವು, ಸೋಲು ಬೇರೆ, ಆದರೆ ಜನರು ನೆಮ್ಮದಿಯಾಗಿ ಇರುವುದು ಮುಖ್ಯವಲ್ಲವೇ ಎಂಬುದು ಅವರ ಭಾವ.

ಡಾ. ಅಂಜಲಿ ಹೇಮಂತ್ ನಿಂಬಾಳ್ಕರ್ ಪ್ರಚಾರದ ವೈಖರಿಯೇ ಭಿನ್ನ. ಅವರು ಹೋದಲ್ಲಿ ಒಂದು ಸಾಮಾನ್ಯ ಸಿದ್ಧಪಡಿಸಿದ ಭಾಷಣ ಇಟ್ಟುಕೊಂಡು ಹೋಗುವುದಿಲ್ಲ. ಎಲ್ಲೇ ಹೋದರೂ ಅಲ್ಲಿನ ಜನರನ್ನು ಒಂದೆಡೆ ಸೇರಿಸಿ ಅವರ ಕಷ್ಟ ಸುಖಗಳನ್ನು ಕೇಳುತ್ತಾರೆ. ಅವರ ಸಮಸ್ಯೆಗಳನ್ನು ಅರಿತುಕೊಳ್ಳುತ್ತಾರೆ. ನಂತರವೇ ಅವರು ತಮ್ಮ ಮಾತುಗಳನ್ನು ಹೇಳುತ್ತಾರೆ. ಡಾ. ಅಂಜಲಿ ಸಾಮಾಜಿಕ ಕಾರ್ಯಕರ್ತೆ ( Activist ) ಆಗಲು ಬಯಸಿದ್ದರು. ಆಕಸ್ಮಿಕವಾಗಿ ರಾಜಕಾರಣಕ್ಕೆ ಬಂದರು. ಆದರೆ ಸಾಮಾಜಿಕ ಕಾರ್ಯಕರ್ತೆಯ ಮನಸ್ಥಿತಿ ಅವರಲ್ಲಿ ಇನ್ನೂ ಇದ್ದೇ ಇದೆ. ಅದೇ ಕಾರಣಕ್ಕೆ ಅವರು ಎಲ್ಲರ ಜೊತೆ ಸುಲಭವಾಗಿ ಯಾವುದೇ ಹಮ್ಮು ಬಿಮ್ಮು ಇಲ್ಲದೆ ಬೆರೆಯುತ್ತಾರೆ.

ಉತ್ತರ ಕನ್ನಡ ಕ್ಷೇತ್ರದಲ್ಲಿ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳಿದ್ದು, ಬೆಳಗಾವಿ ಜಿಲ್ಲೆಯ ಖಾನಾಪುರ ಮತ್ತು ಕಿತ್ತೂರು ಕ್ಷೇತ್ರಗಳೂ ಸೇರುತ್ತವೆ. ಉಳಿದಂತೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಕುಮಟಾ, ಭಟ್ಕಳ, ಹಳಿಯಾಳ, ಶಿರಸಿ ಮತ್ತು ಸಿದ್ಧಾಪುರ ಕ್ಷೇತ್ರಗಳು ಈ ಲೋಕಸಭಾ ವ್ಯಾಪ್ತಿಗೆ ಬರುತ್ತವೆ. ಹಿಂದೆ ಕೆನೆರಾ ಕ್ಷೇತ್ರವೆಂದು ಕರೆಯಲ್ಪಡುತ್ತಿದ್ದ ಇಲ್ಲಿ ಕರಾವಳಿಯೂ ಇದೆ, ಮಲೆನಾಡೂ ಇದೆ. ಎಲ್ಲ ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು ಸುತ್ತಿನ ಪ್ರಚಾರ ನಡೆಸಿರುವ ಡಾ. ಅಂಜಲಿ ಈಗ ಎರಡನೇ ಸುತ್ತಿನ ಪ್ರಚಾರ, ಸಭೆಗಳನ್ನು ನಡೆಸುತ್ತಿದ್ದಾರೆ. ಮುಂದಿನ ವಾರದಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆದಿಯಾಗಿ ರಾಜ್ಯಮಟ್ಟದ ನಾಯಕರೂ ಡಾ.ಅಂಜಲಿ ಪರವಾಗಿ ಪ್ರಚಾರ ನಡೆಸಲಿದ್ದಾರೆ.

ದ್ವೇಷ ಹರಡುವ ಮಾತುಗಳು, ಸಂವಿಧಾನ ಬದಲಾವಣೆಯ ದಾರ್ಷ್ಟ್ಯದ ಹೇಳಿಕೆಗಳು, ದಿಲ್ಲಿನಾಯಕರ ಭಜನೆಯಿಂದ ಮತ ಪಡೆಯುವ ಹುನ್ನಾರಗಳು, ಜನಸಾಮಾನ್ಯರ ನೋವಿಗೆ ಕಿವುಡಾದ ಜನರ ಆರ್ಭಟಗಳ ನಡುವೆ ಡಾ. ಅಂಜಲಿ ಹೇಮಂತ್ ನಿಂಬಾಳ್ಕರ್ ತಂಗಾಳಿಯಂತೆ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ಜನರ ನಡುವೆಯೇ ಬೆರೆತುಹೋಗಿದ್ದಾರೆ. ಅವರ ಮಾತುಗಳಿಗೆ ಕಿವಿಯಾಗಿದ್ದಾರೆ. ಈ ಬಾರಿ ಉತ್ತರ ಕನ್ನಡದಲ್ಲಿ ಬದಲಾವಣೆ ನಿಶ್ಚಿತ ಎಂಬ ಮಾತು ಈಗ ಎಲ್ಲಡೆ ಕೇಳಿಬರುತ್ತಿದೆ.

More articles

Latest article