ನವದೆಹಲಿ: ಚಳಿಗಾಲದ ಸಂಸತ್ ಅಧಿವೇಶನ ನವೆಂಬರ್ 25ರಿಂದ ಡಿಸೆಂಬರ್ 20ರವರೆಗೆ ನಡೆಯಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಾಹಿತಿ ನೀಡಿದ್ದಾರೆ. ಅಧಿವೇಶನ ಸಂಬಂಧ ನವೆಂಬರ್ 24, ಭಾನುವಾರದಂದು ಸರ್ವಪಕ್ಷಗಳ ಸಭೆಯನ್ನು ಕರೆಯಲಾಗಿದೆ.
ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ರಿಜಿಜು, ‘ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೂ ಮುನ್ನ ನವೆಂಬರ್ 24ರಂದು ಬೆಳಿಗ್ಗೆ 11ಕ್ಕೆ ಸರ್ವಪಕ್ಷಗಳ ಸಭೆಯನ್ನು ಕರೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಂವಿಧಾನ ಅಂಗೀಕರಿಸಿ 75ನೇ ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ನವೆಂಬರ್ 26ಕ್ಕೆ ಸೆಂಟ್ರಲ್ ಹಾಲ್ನ ಸಂವಿಧಾನ ಸದನ ಅಥವಾ ಹಳೆಯ ಸಂಸತ್ತಿನ ಕಟ್ಟಡದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಅಧಿವೇಶನ ಆರಂಭಕ್ಕೂ ಮುನ್ನ ಸರ್ವಪಕ್ಷಗಳ ಸಭೆ ಕರೆದು ಸಮಸ್ಯೆಗಳ ಕುರಿತು ಚರ್ಚಿಸಿ ಒಮ್ಮತ ಮೂಡಿಸುವುದು ಸಂಪ್ರದಾಯವಾಗಿದೆ. ಈ ಸಂದರ್ಭದಲ್ಲಿ ಸರ್ಕಾರ ತನ್ನ ಕಾರ್ಯಸೂಚಿಯನ್ನು ಸಭೆಯ ಮುಂದಿಡಲಿದೆ. ವಿವಿಧ ವಿಷಯಗಳನ್ನು ಕುರಿತು ಚರ್ಚೆಗೆ ಪ್ರತಿಪಕ್ಷಗಳು ಪಟ್ಟುಹಿಡಿಯುವ ಸಾಧ್ಯತೆಗಳಿವೆ.