ವಕ್ಫ್ ಆಸ್ತಿ ಹೆಸರಿನಲ್ಲಿ ವಿಜಯಪುರ ಜಿಲ್ಲೆಯ ರೈತರಿಗೆ ನೀಡಿರುವ ನೋಟಿಸ್ ಗಳನ್ನು ನೀಡಿರುವ ನಿರ್ಧಾರವನ್ನು ಪರಾಮರ್ಶಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಭರವಸೆ ನೀಡಿದ್ದಾರೆ.
ಹಳೆಯ ದಾಖಲೆಗಳ ಆಧಾರದಲ್ಲಿ ನೋಟಿಸ್ ನೀಡಲಾಗಿದೆ. ಹಾಗಾಗಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇತ್ತೀಚೆಗೆ ಅಲ್ಲಿಗೆ ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ಭೇಟಿ ನೀಡಿ ಸಭೆ ನಡೆಸಿದ ನಂತರ ನೋಟಿಸ್ ನೀಡಲಾಗುತ್ತಿದೆ ಮತ್ತು ಈ ಹೋರಾಟ ಆರಂಭವಾಗಿದೆ.
ಜಿಲ್ಲೆಯಲ್ಲಿ ಸುಮಾರು 1,500 ಎಕರೆ ಜಮೀನು ತನ್ನ ಆಸ್ತಿ ಎಂದು ವಕ್ಫ್ ಪ್ರತಿಪಾದಿಸುತ್ತಿದೆ. ವಿಶೇಷವಾಗಿ ಇಂಡಿ ತಿಕೋಟಾ ತಾಲೂಕು ರೈತರು ಕಂಗಾಲಾಗಿದ್ದಾರೆ. ರೈತರು ಹಲವಾರು ದಶಕಗಳಿಂದ ರೈತರು ಕೃಷಿ ಮಾಡುತ್ತಿದ್ದ ಜಮೀನನ್ನು ಈಗ ಬಿಟ್ಟುಕೊಡುವಂತೆ ವಕ್ಫ್ ನೋಟಿಸ್ ನೀಡಿದೆ.
ವಕ್ಫ್ ಕಾಯಿದೆ ಹೆಸರಿನಲ್ಲಿ ರೈತರನ್ನು ಬೀದಿಪಾಲು ಮಾಡಬೇಡಿ: ವಿಜಯೇಂದ್ರ ವಕ್ಫ್ ಕಾಯಿದೆ ಹೆಸರು ಹೇಳಿಕೊಂಡು ರೈತರು ಬೀದಿಪಾಲಾಗಬಾರದು. ಆ ನಿಟ್ಟಿನಲ್ಲಿ ಸರಕಾರ ಎಚ್ಚರಿಕೆ ವಹಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ.
ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ರೈತರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಬಿಜೆಪಿ ಯಾವ ಹಂತಕ್ಕೆ ಹೋಗಲೂ ಸಿದ್ಧವಿದೆ ಎಂದು ಪ್ರಕಟಿಸಿದರು. ನಾವು ಹೋರಾಟಕ್ಕೂ ಇಳಿಯುತ್ತೇವೆ. ಆದರೆ, ರೈತರಿಗೆ ಅನ್ಯಾಯ ಆಗಲು ನಾವು ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಈಗಾಗಲೇ ಕೇಂದ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಎನ್‍ಡಿಎ ಸರಕಾರ ವಕ್ಫ್ ಕಾಯಿದೆಯಲ್ಲಿ ಬದಲಾವಣೆಗಳನ್ನು ಮಾಡಲು ಮುಂದಾಗಿರುವುದನ್ನು ಇಲ್ಲಿ ಸ್ಮರಿಸಬಹುದು.