ವಿರಾಟ್ ಕೊಹ್ಲಿಯಲ್ಲ, ಡುಪ್ಲೆಸಿಯಲ್ಲ, ಪ್ಲೇ ಆಫ್ ನಲ್ಲಿ ಈ RCB ಬ್ಯಾಟರ್ ಡೇಂಜರಸ್

Most read

by ಪಾಂಡುರಂಗ ಸಿ.

ಅಹಮದಾಬಾದ್: ಐಪಿಎಲ್ ಪಂದ್ಯಾವಳಿಯ ಮೊದಲಾರ್ಧದಲ್ಲಿ ಹೀನಾಯ ಸೋಲುಗಳ ನಂತರ ಆರ್ ಸಿಬಿ ಗೆಲುವಿನ ಲಯಕ್ಕೆ ಮರಳಿತ್ತು. ಆಗ `ನಾವೀಗ ಪಾಯಿಂಟ್ಸ್ ಗಾಗಿ, ಪ್ಲೇ ಆಫ್ ಗಾಗಿ ಆಡುತ್ತಿಲ್ಲ, ನಮ್ಮ ಆತ್ಮಗೌರವಕ್ಕಾಗಿ ಆಡುತ್ತಿದ್ದೇವೆ’ ಎಂದು ಹೇಳಿದ್ದರು ವಿರಾಟ್ ಕೊಹ್ಲಿ. ಲೀಗ್‌ ಹಂತದ ಪಂದ್ಯಗಳು ಮುಗಿಯುವಷ್ಟರಲ್ಲಿ RCB ( Royal Challengers of Bengaluru ) ಆತ್ಮಗೌರವ ಉಳಿಸಿಕೊಂಡಿದ್ದಷ್ಟೇ ಅಲ್ಲ, ಎದುರಾಳಿಗಳ ಆತ್ಮಶಕ್ತಿಯನ್ನು ಅಲುಗಾಡಿಸುತ್ತಿದೆ.

ಚೆನ್ನೈ ಸೂಪರ್ ಕಿಂಗ್ಸ್ ( Chennai Super Kings ) ಎದುರು ಆರ್ ಸಿಬಿ ಆಡುತ್ತಿದ್ದ ಪರಿಯನ್ನು ನೋಡಿದ ಕೆಕೆಆರ್, ಎಸ್ ಆರ್ ಎಚ್, ಆರ್ ಆರ್ ತಂಡಗಳ ಆಟಗಾರರು ಇವರು ಮಾತ್ರ ಪ್ಲೇ ಆಫ್ ಗೆ ಬಾರದೇ ಇರಲಿ ಎಂದು ಬೇಡಿಕೊಂಡಿದ್ದರೂ ಆಶ್ಚರ್ಯವಿಲ್ಲ. ಯಾಕೆಂದರೆ ಆರ್ ಸಿಬಿಯೇ ಈಗ ಎಲ್ಲ ತಂಡಗಳಿಗೂ ಕಬ್ಬಿಣದ ಕಡಲೆಯಾಗಲಿದೆ.

ಆರ್ ಸಿಬಿ ತಂಡದಲ್ಲಿ ಈಗ ಎಲ್ಲ ಆಟಗಾರರು ಅದ್ಭುತ ಫಾರಂಗೆ ಬಂದುಬಿಟ್ಟಿರುವುದೇ ಎದುರಾಳಿ ತಂಡಗಳಲ್ಲಿ ನಡುಕ ಹುಟ್ಟಿಸಲು ಕಾರಣವಾಗಿದೆ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಹೀಗೆ ಎಲ್ಲ ವಿಭಾಗಗಳಲ್ಲೂ ಆರ್ ಸಿಬಿ ಪ್ರಬಲವಾಗಿದೆ.

ವಿರಾಟ್ ಕೊಹ್ಲಿ ಸರಣಿ ಆರಂಭವಾದಾಗಿನಿಂದಲೂ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸುತ್ತ ಕಿತ್ತಳೆ ಟೋಪಿ (ಆರೆಂಜ್ ಕ್ಯಾಪ್) ಪಡೆದಿದ್ದಾರೆ. 14 ಪಂದ್ಯಗಳಲ್ಲಿ ಅವರು 64.36 ರನ್ ಸರಾಸರಿಯಲ್ಲಿ 708 ರನ್ ಗಳಿಸಿದ್ದಾರೆ. ತಂಡದ ನಾಯಕ ಫಾಪ್ ಡುಪ್ಲಿಸಿ ಜೊತೆಯಲ್ಲಿ ಅವರು ಅತ್ಯುತ್ತಮ ಆರಂಭ ನೀಡುತ್ತ ಬಂದಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ರಜತ್ ಪಟಿದಾರ್, ‍ಕ್ಯಾಮರೂನ್ ಗ್ರೀನ್ ಅತ್ಯುತ್ತಮ ಫಾರಂ ನಲ್ಲಿದ್ದಾರೆ. ಅತ್ಯುತ್ತಮ ಫಿನಿಶರ್ ಎನಿಸಿಕೊಂಡಿರುವ  ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ದಿನೇಶ್ ಕಾರ್ತಿಕ್ ಎಂಥ ಸನ್ನಿವೇಶದಲ್ಲೂ ರನ್ ಗಳಿಸುವ ಸಾಮರ್ಥ್ಯ ಹೊಂದಿದ್ದಾರೆ.

ಆದರೆ ಎದುರಾಳಿ ತಂಡಗಳಿಗೆ ಹೆಚ್ಚು ಚಿಂತೆಗೆ ಕಾರಣರಾಗಿರುವವರು ಇವರ್ಯಾರೂ ಅಲ್ಲ. ಅವರಿಗೆ ಗಾಬರಿ ಹುಟ್ಟಿಸುತ್ತಿರುವುದು ಗ್ಲೆನ್ ಮ್ಯಾಕ್ಸ್ ವೆಲ್. ಆಸ್ಟ್ರೇಲಿಯಾದ ಈ ಆಟಗಾರ ಚೆನ್ನೈ ವಿರುದ್ಧ ಪಂದ್ಯದಲ್ಲಿ ಆಡಿದ ರೀತಿಯನ್ನು ಗಮನಿಸಿದರೆ `ದಿ ಡೆವಿಲ್ ಈ ಬ್ಯಾಕ್’ ಎಂದು ಎನಿಸದೇ ಇರದು.

ಈ ಪಂದ್ಯಾವಳಿಯ ಆರಂಭದ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ತೋರಿದ್ದ ಗ್ಲೆನ್ ಮ್ಯಾಕ್ಸ್ ವೆಲ್ ತಾನಾಗಿಯೇ ಕೆಲವು ಪಂದ್ಯಗಳಿಂದ ದೂರ ಉಳಿದಿದ್ದರು. ಅವರ ಸ್ಥಾನ ಭರ್ತಿ ಮಾಡಿದ ವಿಲ್ ಜಾಕ್ಸ್ ಕೂಡ ಮೊದಲು ವಿಫಲರಾದರೂ ನಂತರ ಭರ್ಜರಿ ಪ್ರದರ್ಶನ ನೀಡಿ ಒಂದು ಅಮೋಘ ಶತಕವನ್ನೂ ಬಾರಿಸಿದ್ದರು. ಆದರೆ ಜಾಕ್ಸ್ ವಿಶ್ವಕಪ್ ತಯಾರಿಯ ಹಿನ್ನೆಲೆಯಲ್ಲಿ ಸ್ವದೇಶಕ್ಕೆ ವಾಪಾಸಾದ ಹಿನ್ನೆಲೆಯಲ್ಲಿ ಗ್ಲೆನ್ ಮ್ಯಾಕ್ಸ್ ವೆಲ್ ಚೈನ್ನೈ ಎದುರಿನ ಪಂದ್ಯದಲ್ಲಿ ಆಡಿದ್ದರು.

ಬ್ಯಾಟ್ ಮಾಡುವ ಸಂದರ್ಭದಲ್ಲಿ ಮ್ಯಾಕ್ಸ್ ವೆಲ್ ಗೆ ಅವಕಾಶ ಸಿಕ್ಕಿದ್ದು ಕಡಿಮೆ. ಕೇವಲ 5 ಎಸೆತ ಎದುರಿಸಿದ ಅವರು 16 ರನ್ ಚೆಚ್ಚಿದ್ದರು. ಅದರಲ್ಲಿ ಅವರು ಹೊಡೆದ ಒಂದು ಸಿಕ್ಸರ್ ಅವರದ್ದೇ ಶೈಲಿಯ ಟ್ರೇಡ್ ಮಾರ್ಕ್ ಹೊಡೆತವಾಗಿತ್ತು. ಅದನ್ನು ಗಮನಿಸಿದ ಯಾರಿಗೇ ಆದರೂ `ಡೆವಿಲ್ ಈಸ್ ಬ್ಯಾಕ್’ ಅನಿಸದೇ ಇರದು. ಚೆನ್ನೈ ತನ್ನ ಇನ್ನಿಂಗ್ಸ್ ಆರಂಭಿಸಿದಾಗ ಆಶ್ಚರ್ಯಕರ ರೀತಿಯಲ್ಲಿ ಆರ್ ಸಿಬಿ ನಾಯಕ ಫಾಪ್ ಡುಪ್ಲಿಸಿ ಮೊದಲ ಓವರ್ ಎಸೆಯಲು ಮ್ಯಾಕ್ಸ್ ವೆಲ್ ಅವರನ್ನು ಕರೆದರು. ನಾಯಕನ ವಿಶ್ವಾಸವನ್ನು ಅವರು ಉಳಿಸಿಕೊಂಡರು, ಮೊದಲ ಎಸೆತದಲ್ಲೇ ಚೆನ್ನೈ ನಾಯಕ ರುತುರಾಜ್ ಗಾಯಕ್ವಾಡ್ ಅವರನ್ನು ಔಟ್ ಮಾಡಿ ಪೆವಿಲಿಯನ್ ಗೆ ವಾಪಾಸ್ ಕಳಿಸಿದರು. ಚೆನ್ನೈ ತಂಡದಲ್ಲಿ ಭರ್ಜರಿ ಲಯದಲ್ಲಿದ್ದ ಆಟಗಾರ ಗಾಯಕ್ವಾಡ್. ಅವರನ್ನೇ ಔಟ್ ಮಾಡುವ ಮೂಲಕ ಚೆನ್ನೈ ಸೋಲಿಗೆ ಮೊದಲ ಮೊಳೆ ಹೊಡೆದಿದ್ದರು ಮ್ಯಾಕ್ಸ್ ವೆಲ್. ತನ್ನ ಕೋಟಾದ 4 ಓವರ್ ಗಳನ್ನು ಬೌಲ್ ಮಾಡಿದ್ದ ಮ್ಯಾಕ್ಸ್ ವೆಲ್ ಬಿಟ್ಟುಕೊಟ್ಟಿದ್ದು ಕೇವಲ 25 ರನ್ ಗಳನ್ನು ಮಾತ್ರ.

ಮ್ಯಾಕ್ಸ್ ವೆಲ್ ನಿನ್ನೆಯ ಪಂದ್ಯದಲ್ಲಿ ಆಡಿದ ರೀತಿಯನ್ನು ಗಮನಿಸಿದರೆ ಅವರು ದೊಡ್ಡ ಆಟವೊಂದಕ್ಕೆ ಸಜ್ಜಾಗಿದ್ದಾರೆ ಎಂಬುದು ಅರ್ಥವಾಗುತ್ತಿತ್ತು. ರನ್ ಹಸಿವು ಅವರ ಮ್ಯಾನರಿಜಂನಲ್ಲೇ ಎದ್ದು ಕಾಣುತ್ತಿತ್ತು. ಆತ ಹೀಗೆ ಎದ್ದು ನಿಂತರೆ ನಿಜವಾದ ಅರ್ಥದಲ್ಲಿ ರಣಬೇಟೆಗಾರನೇ ಸರಿ. ಕಳೆದ ವರ್ಷವಷ್ಟೇ ನಡೆದ ವಿಶ್ವಕಪ್ ಪಂದ್ಯಾವಳಿಯಲ್ಲಿ ಮ್ಯಾಕ್ಸ್ ವೆಲ್ ಆಡಿದ ರೀತಿಯನ್ನು ಯಾರು ಮರೆಯಲು ಸಾಧ್ಯ. ಅಫಘಾನಿಸ್ತಾನ ವಿರುದ್ಧ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ 2023ರ ನವೆಂಬರ್ 7ರಂದು ಮ್ಯಾಕ್ಸ್ ವೆಲ್ ಆಡಿದ ಆಟ ಒಂದು ದಿನದ ಅಂತಾರಾಷ್ಟ್ರೀಯ ಪಂದ್ಯಗಳಲ್ಲೇ ಅತ್ಯಂತ ಶ್ರೇಷ್ಠ ಆಟವಾಗಿತ್ತು.

ಅಫಘಾನಿಸ್ತಾನ ತಂಡ ಗಳಿಸಿದ್ದ 292 ರನ್ ಚೇಸ್ ಮಾಡುತ್ತಿದ್ದ ಆಸ್ಟ್ರೇಲಿಯಾ 49 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದಾಗ ಮ್ಯಾಕ್ಸ್ ವೆಲ್ ಆಡಲು ಬಂದಿದ್ದರು. ಆ ನಂತರ ಮಾರ್ನಸ್ ಲಾಬುಶೇನ್, ಮಾರ್ಕಸ್ ಸ್ಟೋನಿಸ್, ಮಿಚೆಲ್ ಸ್ಟಾ‍ರ್ಕ್ ಅವರ ವಿಕೆಟ್ ಗಳೂ ಉದುರಿಹೋಗಿ ಆಸ್ಟ್ರೇಲಿಯಾ 91 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡಿತ್ತು. 50 ಓವರ್ ಫೀಲ್ಡಿಂಗ್ ಮಾಡಿ ದಣಿದಿದ್ದ ಮ್ಯಾಕ್ಸಿಗೆ ಸ್ನಾಯು ಸೆಳೆತ ಕಾಣಿಸಿಕೊಂಡಿತ್ತು. ಆಡುತ್ತ ಆಡುತ್ತ ಅದು ತೀವ್ರವಾಗುತ್ತಲೇ ಹೋಗಿ, ಇನ್ನೇನು ಈತ ಆಡಲು ಸಾಧ್ಯವೇ ಇಲ್ಲವೆಂಬ ಹಾಗೆ ಕಾಣುತ್ತಿತ್ತು. ಅಂಥ ಸ್ಥಿತಿಯಲ್ಲಿ ಒಂದೇ ಕಾಲಲ್ಲಿ ನಿಂತು ಆತ ಹಲ್ಲುಕಚ್ಚಿ ಆಡಿದ ರೀತಿಯಿದೆಯಲ್ಲ ಅದನ್ನು ಯಾವ ಕ್ರಿಕೆಟ್ ಅಭಿಮಾನಿಯೂ ಮರೆಯಲಾರ. ಮ್ಯಾಕ್ಸ್ ವೆಲ್ ಜೊತೆ ಆಡುತ್ತಿದ್ದ ನಾಯಕ ಪ್ಯಾಟ್ ಕಮಿನ್ಸ್ 68 ಎಸೆತಗಳಲ್ಲಿ 12 ರನ್ ಗಳಿಸಿ ಬಂಡೆಕಲ್ಲಿನಂತೆ ಒಂದು ಕಡೆ ಕಚ್ಚಿಕೊಂಡಿದ್ದರೆ, ಮ್ಯಾಕ್ಸಿ ಕ್ರೀಡಾಂಗಣದ ಎಲ್ಲ ದಿಕ್ಕುಗಳಲ್ಲೂ ಸಿಕ್ಸರ್, ಫೋರ್ ಗಳ ಸುರಿಮಳೆಯನ್ನೇ ಸುರಿಸಿದ್ದರು. ಕೊನೆಯ ನಾಲ್ಕು ಓವರ್ ಗಳಲ್ಲಿ 21 ರನ್ ಬೇಕಾಗಿದ್ದಾಗ ಮ್ಯಾಕ್ಸಿ ತಡವೇಕೆ ಎಂದು ಮುಜಿಬುರ್ ರೆಹಮಾನ್ ಬೌಲಿಂಗ್ ನಲ್ಲಿ 6,6,4,6 ಸಿಡಿಸಿ ತಮ್ಮ ತಂಡವನ್ನು ಗೆಲುವಿನ ಗೆರೆ ದಾಟಿಸಿದ್ದರು. ಅಂತಿಮವಾಗಿ 128 ಎಸೆತಗಳಲ್ಲಿ 201 ರನ್ ಗಳಿಸಿ ಮ್ಯಾಕ್ಸ್ ವೆಲ್ ಔಟಾಗದೇ ಉಳಿದಿದ್ದರು.

ಗ್ಲೆನ್ ಮ್ಯಾಕ್ಸ್ ವೆಲ್ ನಿಜಕ್ಕೂ ಅಪಾಯಕಾರಿ ಆಟಗಾರ. ಆತ ಯಾವ ಕ್ಷಣದಲ್ಲಾದರೂ ಲಯಕ್ಕೆ ಮರಳಬಹುದು, ಯಾವ ಪಂದ್ಯದಲ್ಲಾದರೂ ತನ್ನ ವಿರಾಟ್ ಸ್ವರೂಪ ತೋರಿಸಬಹುದು ಎಂಬ ಭೀತಿ ಎದುರಾಳಿ ತಂಡಗಳಿಗೆ ಇದ್ದೇ ಇರುತ್ತದೆ. ಆಸ್ಟ್ರೇಲಿಯಾದ ಆಟಗಾರರು ನಾಕ್ ಔಟ್ ಪಂದ್ಯಗಳಲ್ಲಿ ದೆವ್ವ ಹಿಡಿದಂತೆ ಆಡುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಗ್ಲೆನ್ ಮ್ಯಾಕ್ಸ್ ವೆಲ್ ಇದಕ್ಕೆ ಹೊರತಲ್ಲ. ಹೀಗಾಗಿ ಆರ್ ಸಿಬಿ ತಂಡದಲ್ಲಿ ಅತಿ ಹೆಚ್ಚು ಆತಂಕ ಹುಟ್ಟಿಸುತ್ತಿರುವುದು ಈಗ ಗ್ಲೆನ್ ಮ್ಯಾಕ್ಸ್ ವೆಲ್.  ಯಾಕೆಂದರೆ ಶನಿವಾರ ಚೆನ್ನೈ ಮೇಲಿನ ಪಂದ್ಯದಲ್ಲೇ ಅವರು ದೊಡ್ಡದಾಗಿ ಒಂದು ಸಂದೇಶವನ್ನು ಕೊಟ್ಟಾಗಿದೆ. ಹಸಿದ ಹುಲಿ ಎದ್ದು ಬಂದು ನಿಂತಾಗಿದೆ.!

More articles

Latest article