ಕಾಶ್ಮೀರದಲ್ಲಿ ಒಂದೇ ಒಂದು ಡ್ರೋಣ್ ಕೂಡ ಇಲ್ಲ: ಸಚಿವ ಲಾಡ್‌ ವಾಗ್ದಾಳಿ

Most read

ಬೆಂಗಳೂರು:  ಕಾಶ್ಮೀರದ ಪಹಲ್ಗಾಮ್‌ ದಾಳಿಯ ನಂತರ ಕಾಶ್ಮೀರದಲ್ಲಿ ಉಗ್ರರ ಮನೆಗಳನ್ನು ಧ್ವಂಸ ಮಾಡಲಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಹಾಗಿದ್ದರೆ, ಉಗ್ರರ ಮನೆಗಳು ಅಲ್ಲಿ ಇದ್ದದ್ದು ಮೂಮಚಿತವಾಗಿ ಗೊತ್ತಿರಲಿಲ್ಲವೇ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್‌ ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪಾಕಿಸ್ತಾನಕ್ಕೆ ಹರಿಯುತ್ತಿರುವ ನೀರು ನಿಲ್ಲಿಸಲು ಸಾಧ್ಯವಿದೆಯೇ? ಇದರ ಬಗ್ಗೆ ಪರಾಮರ್ಶೆ ಆಗಿದೆಯೇ? ಸರ್ಕಾರ ನಿರ್ಣಯ ತೆಗೆದುಕೊಳ್ಳುವ ಮೊದಲು ಮಾಧ್ಯಮಕ್ಕೆ ಸುದ್ದಿ ಹರಿಯಬಿಡುತ್ತಾರೆ. ವಾಸ್ತವ ವಿಷಯವನ್ನು ದಾರಿ ತಪ್ಪಿಸಲು ಇಂತಹ ವಿಚಾರ ಚರ್ಚೆಗೆ ಬರುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಯುದ್ಧ ಆರಂಭವಾಗಲಿದೆ. ಫೈಟರ್ ಜೆಟ್ ಸಿದ್ಧವಾಗಿದೆ ಎಂದು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ. ಪಾಕಿಸ್ತಾನಕ್ಕೆ ನೀರು ಹೋಗುತ್ತಿಲ್ಲ ಎಂದು ಯಾವುದೊ ಕೆರೆ ನೀರು ತೋರಿಸುತ್ತಿದ್ದಾರೆ ಎಂದು ಲಾಡ್‌ ವ್ಯಂಗ್ಯವಾಡಿದರು.

ಆ ತಂತ್ರಜ್ಞಾನ, ಈ ತಂತ್ರಜ್ಞಾನ, ಎಐ ತಂತ್ರಜ್ಞಾನ ಎಂದು ಮೋದಿ ಹೇಳುತ್ತಾರೆ. ಆದರೆ, ಕಾಶ್ಮೀರದಲ್ಲಿ ಒಂದು ಡ್ರೋಣ್ ಕೂಡ ಇಲ್ಲ. ಪುಲ್ವಾಮಾ ದಾಳಿ ಬಗ್ಗೆ ಬಿಜೆಪಿಯ ಯಾರೊಬ್ಬರೂ ಈಗ ಮಾತನಾಡುತ್ತಿಲ್ಲ. ಪಹಲ್ಗಾಮ್‌ ದಾಳಿ ಮುಂದಿಟ್ಟುಕೊಂಡು ಮುಂಬರುವ ಬಿಹಾರ ಚುನಾವಣೆ ಎದುರಿಸಲು ಬಿಜೆಪಿಯವರು ಹೊರಟಿದ್ದಾರೆ ಎಂದು ಲಾಡ್‌ ವ್ಯಂಗ್ಯವಾಡಿದರು.

More articles

Latest article