ಮಂಡ್ಯ: ಪಕ್ಷೇತರಳಾಗಿ ಸ್ಪರ್ಧೆ ಮಾಡುವುದಿಲ್ಲ ಎಂದು ಸಂಸದೆ ಸುಮಲತಾ ಇಂದು ಘೋಷಿಸುವುದರೊಂದಿಗೆ ಕಳೆದ ಹದಿನೈದು ದಿನಗಳಿಂದ ನಡೆಯುತ್ತಿದ್ದ ರಾಜಕೀಯ ಹೈಡ್ರಾಮಾಗೆ ತೆರೆ ಬಿದ್ದಿದೆ.
ಮಂಡ್ಯದಲ್ಲಿ ಸ್ಪರ್ಧೆ ಮಾಡುವಂತೆ ಬೆಂಬಲಿಗರು ಆಗ್ರಹಿಸುತ್ತಿದ್ದಾರೆ. ಪಕ್ಷೇತರರಾಗಿ ಸ್ಪರ್ಧಿಸಿ ಎಂದು ಅಭಿಮಾನಿಗಳು ಹೇಳಿದ್ರು. ನಾನು ಮಂಡ್ಯ ಬಿಟ್ಟು ಬೇರೆ ಕಡೆ ಸ್ಪರ್ಧಿಸಲು ಒಪ್ಪಲಿಲ್ಲ. ಇನ್ನೂ ಕೆಲವರು ಕಾಂಗ್ರೆಸ್ ನಿಂದ ಸ್ಪರ್ಧಿಸಲು ಹೇಳಿದ್ದಾರೆ. ಅದಕ್ಕೂ ನನಗೆ ಒಪ್ಪಿಗೆ ಇಲ್ಲ.
ಎಂಪಿ ಚುನಾವಣೆ ಅನ್ನೋದು ಹುಡುಗಾಟಿಕೆ ಅಲ್ಲ. ಬದಲಾದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಪಕ್ಷೇತರವಾಗಿ ನಿಂತರೆ ದ್ವೇಷ ಸಾಧಿಸಿದಂತೆ. ಇದರಿಂದ ಯಾರಿಗೂ ಉಪಯೋಗವಿಲ್ಲ. ಹೀಗಾಗಿ ಪಕ್ಷೇತರವಾಗಿ ಸ್ಪರ್ಧಿಸುವುದಿಲ್ಲ ಎಂದು ಸುಮಲತಾ ಹೇಳಿದರು.
ಇಂದು ಮಂಡ್ಯದಲ್ಲಿ ತಮ್ಮ ಮುಂದಿನ ನಡೆ ಕುರಿತು ಮಾಹಿತಿ ನೀಡಲು ಪುತ್ರ ಅಭಿಷೇಕ್ ಅಂಬರೀಷ್ ಮತ್ತು ನಟ ದರ್ಶನ್ ಅವರೊಂದಿಗೆ ಸುಮಲತಾ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ಅಧಿಕಾರಕ್ಕಾಗಿ ಮಂಡ್ಯ ಬಿಟ್ಟರೆ ಮಣ್ಣಿನ ಸೊಸೆ ಅನ್ನಿಸಿಕೊಳ್ಳುವುದಿಲ್ಲ. ನನ್ನ ಮನೆಯ ಮಕ್ಕಳಾಗಿ ದರ್ಶನ್, ಯಶ್ ಕಳೆದ ಚುನಾವಣೆ ವೇಳೆ ನನ್ನ ಜೊತೆಯಾಗಿ ನಿಂತಿದ್ದರು. ನನ್ನ ಗೆಲುವಿಗೆ ದರ್ಶನ್ , ಯಶ್ ಕಾರಣರಾಗಿದ್ದರು. ಕೇವಲ ಧನ್ಯವಾದ ಹೇಳಿದ್ರೆ ಸಾಲದು, ಇದನ್ನು ಸ್ಮರಿಸಲೇಬೇಕು. 2019ರ ಚುನಾವಣೆಯನ್ನು ಎಂದಿಗೂ ಮರೆಯಲು ಆಗಲ್ಲ ಎಂದು ಅವರು ಭಾವುಕರಾಗಿ ನುಡಿದರು.
5 ವರ್ಷ ಹೇಗೆ ಕಳೆದುಹೋಯ್ತೋ ನನಗೆ ಗೊತ್ತಾಗಲಿಲ್ಲ. ಈಗ ಮತ್ತೆ ಚುನಾವಣೆ ಬಂದಿದೆ ಎಂದ ಅವರು ಬದಲಾದ ಪರಿಸ್ಥಿತಿಯೇ ಈಗ ಸವಾಲಾಗಿದೆ, ಮಂಡ್ಯ ಕ್ಷೇತ್ರ ಉಳಿಸಿಕೊಳ್ಳಲು ಕೊನೇ ಕ್ಷಣದವರೆಗೆ ಯತ್ನಿಸಿದೆ. ಬೆಂಗಳೂರು ಉತ್ತರ, ಮೈಸೂರು ಸೇರಿ ಹಲವು ಕಡೆ ಆಫರ್ ನೀಡಲಾಯಿತು. ನಾನು ಎಂದಿಗೂ ಮಂಡ್ಯ ಕ್ಷೇತ್ರ ಬಿಡಲ್ಲ ಎಂದಿದ್ದೇನೆ. ನಾನು ಎಂದಿಗೂ ಸ್ವಾರ್ಥ ರಾಜಕಾರಣ ಮಾಡೋದಿಲ್ಲ ಎಂದು ಅವರು ನುಡಿದರು.
ಹಲವು ಸವಾಲುಗಳ ನಡುವೆ ಕಳೆದ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದೆ. ಅಭೂತಪೂರ್ವ ಗೆಲುವು ತಂದುಕೊಟ್ಟ ಜನತೆಗೆ ಧನ್ಯವಾದ. ನನ್ನ ರಾಜಕೀಯ ಪ್ರವೇಶ ಆಕಸ್ಮಿಕ. ಅಂಬರೀಶ್ ಸೇವೆ ಮುಂದುವರಿಸಲು ರಾಜಕೀಯ ಪ್ರವೇಶ ಮಾಡಿದೆ, ನನಗೆ ರಾಜಕೀಯ ಅನಿವಾರ್ಯವಲ್ಲ.
ಮಂಡ್ಯದಲ್ಲಿ 5 ವರ್ಷಗಳ ರಾಜಕೀಯ ಪಯಣ ಅಷ್ಟು ಸುಲಭವಾಗಿರಲಿಲ್ಲ. ಎಲ್ಲಾ ಸವಾಲು ಮೆಟ್ಟಿ ಜಿಲ್ಲೆಯ ಜನತೆಗಾಗಿ ಕೆಲಸ ಮಾಡಿದ್ದೇನೆ. ಅಂಬರೀಶ್ ಎಂದಿಗೂ ಪ್ರಚಾರವನ್ನು ಬಯಸಿದವರಲ್ಲ. ನಾವು ಮಾಡಿದ ಸಾಧನೆಗಳೇ ನಮ್ಮ ಬಗ್ಗೆ ಮಾತಾಡಬೇಕು. ಅಂಬರೀಶ್ ಅವರು ನನಗೆ ಈ ಮಾತನ್ನು ಹೇಳುತ್ತಿದ್ದರು. ಅಂಬರೀಶ್ ಹಾಕಿಕೊಟ್ಟ ಹಾದಿಯಲ್ಲೇ ನಾನು ಸಾಗಿದ್ದೇನೆ.
ವಿಷಯ ತಿಳಿಯಬೇಕೆಂದು ನಾನು ಸಾಕ್ಷ್ಯ ಚಿತ್ರ ಮಾಡಿದ್ದೇನೆ. ಪ್ರಚಾರಕ್ಕಾಗಿ ನಾನು ಸಾಕ್ಷ್ಯ ಚಿತ್ರವನ್ನು ಮಾಡಿಕೊಂಡಿಲ್ಲ. ಕೇವಲ ಮಾಹಿತಿ ನೀಡಲಷ್ಟೇ ಸಾಕ್ಷ್ಯಚಿತ್ರ ತೋರಿಸಿದ್ದೇವೆ. ಮಂಡ್ಯ ಅಭಿವೃದ್ಧಿಗಾಗಿ ರಾಜಕೀಯಕ್ಕೆ ಬಂದೆ. KRS ಸಂರಕ್ಷಣೆ.. ಅಕ್ರಮ ಗಣಿಗಾರಿಕೆ ವಿರುದ್ಧ ದನಿ ಎತ್ತಿದ್ದೇನೆ. ನಾನು ಪ್ರಚಾರಪ್ರಿಯಳಲ್ಲ. ನಮ್ಮ ಸಾಧನೆಗಳು ಮಾತಾಡಬೇಕು ಎಂದು ಸುಮಲತಾ ನುಡಿದರು.
ಸಾಕಷ್ಟು ಸಮುದಾಯ ಭವನಗಳನ್ನು ಕಟ್ಟಿಸಿದ್ದೇನೆ. ಅಂಬರೀಶ್ ನಂತರ ಯಾರೂ ಮಂಡ್ಯದಲ್ಲಿ ಸರಿಯಾಗಿ ಕೆಲಸ ಮಾಡಿರಲಿಲ್ಲ. ಅಂಬರೀಶ್ ನಿಲ್ಲಿಸಿದ್ದ ಕೆಲಸ ಮುಂದುವರಿಸಿದೆ. ಮೈ ಶುಗರ್ ಕಾರ್ಖಾನೆಗಾಗಿ ಹೋರಾಡಿದ್ದೇನೆ. ಬೆಂಗಳೂರು – ಮೈಸೂರು ಹೈವೇಗಾಗಿ ಶ್ರಮಿಸಿದ್ದೇನೆ.
ಮಳೆ ಬಂದಾಗ ಸಾಕಷ್ಟು ಲೋಪದೋಷ ಬೆಳಕಿಗೆ ಬಂದಿದ್ದವು. ಲೋಪದೋಷ ಪರಿಹರಿಸುವ ಕೆಲಸ ಮಾಡಿದ್ದೇನೆ. ಎಲ್ಲ ನೋವುಗಳನ್ನು ನುಂಗಿ ಕೆಲಸ ಮಾಡಿದ್ದೇನೆ. ನರೇಗಾ ಯೋಜನೆಯಲ್ಲಿ ಮಂಡ್ಯ, ರಾಜ್ಯಕ್ಕೆ 2ನೇ ಸ್ಥಾನ ಪಡೆದಿದೆ. ಟೀಕೆ ಮಾಡುವವರು ಟೀಕಿಸುತ್ತಲೇ ಇರುತ್ತಾರೆ. ಅಡಚಣೆ, ಅಡೆತಡೆ ಎದುರಿಸಿ ಗುರಿ ತಲುಪಿದ್ದೇನೆ ಎಂದು ಅವರು ಹೇಳಿದರು.
ಅಧಿಕಾರಿಗಳಿಂದ ಹೇಗೆ ಕೆಲಸ ಮಾಡಿಸಬೇಕೆಂದು ಕಲಿತಿದ್ದೇನೆ. ಮಂಡ್ಯ ರೈಲ್ವೆ ನಿಲ್ದಾಣದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಅದನ್ನು ಯಾರು ಉದ್ಘಾಟಿಸುತ್ತಾರೋ ನನಗೆ ಗೊತ್ತಿಲ್ಲ. ನೆಪಗಳನ್ನು ಕೇಳದೆ ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡಿದ್ದೇನೆ. ಲೋಕಸಭೆಯಲ್ಲಿ ಕ್ಷೇತ್ರವನ್ನು ಸಮರ್ಥವಾಗಿ ಪ್ರತಿನಿಧಿಸಿದ್ದೇನೆ.
ಸುಮಲತಾ ಏನು ಅಭಿವೃದ್ಧಿ ಮಾಡಿದ್ದಾರೆಂದು ಟೀಕಿಸಿದ್ದಾರೆ. ಟೀಕೆ ಮಾಡುವವರ ಮುಂದೆ ನನ್ನ ಸಾಧನೆಗಳ ಬಗ್ಗೆ ಹೇಳಿ. ನನ್ನ ಯಶಸ್ಸಿಗೆ ಮಂಡ್ಯ ಜಿಲ್ಲೆಯ ಮತದಾರರೇ ಕಾರಣ. 5 ವರ್ಷಗಳಲ್ಲಿ ಸಾಕಷ್ಟು ಶ್ರಮ ಹಾಕಿದ್ದೇನೆ. ಒಂದಷ್ಟು ಗುರಿಗಳನ್ನು ತಲುಪಿದ ಹೆಮ್ಮೆ ಇದೆ ಎಂದು ಸುಮಲತಾ ಭಾವುಕರಾದರು.
ನನ್ನನ್ನು ಯಾರು ಒಪ್ಪುತ್ತಾರೋ ಇಲ್ಲವೋ ನನಗೆ ಗೊತ್ತಿಲ್ಲ. ನನಗೆ ನಮ್ಮ ಮಾವ, ಪತಿ ಅಂಬರೀಶ್ ಆಶೀರ್ವಾದವಿದೆ. ಮಳವಳ್ಳಿ ಸೊಸೆ ಮಳವಳ್ಳಿ ಋಣವನ್ನು ತೀರಿಸಿದ್ದಾರೆ. ಈ ಮಾತನ್ನು ನೀವು ಬಹಳ ಧೈರ್ಯವಾಗಿ ಹೇಳಬಹುದು. ಯಾರ ಋಣವನ್ನು ನಾನು ಉಳಿಸಿಕೊಂಡಿಲ್ಲ, ತೀರಿಸಿದ್ದೇನೆ ಎಂದು ಅವರು ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ ನಟ ದರ್ಶನ್, ಎಳನೀರು ಕೊಟ್ಟು ನಮ್ಮನ್ನು ತಂಪು ಮಾಡಿದ ರೈತರಿಗೆ ಧನ್ಯವಾದ. ನಮಗೆ ಪ್ರೀತಿ ತೋರಿದ ತಾಯಂದಿರಿಗೆ ಧನ್ಯವಾದಗಳು. ಅಮ್ಮ ಅವರ ನಿರ್ಧಾರಕ್ಕೆ ನಾವು ಬೆಂಬಲವಾಗಿರುತ್ತೇವೆ. ಆ ತಾಯಿಗೆ ಸದಾಕಾಲ ಮಕ್ಕಳಾಗಿಯೇ ಇರುತ್ತೇವೆ. ಇವತ್ತು ತಾಯಿ ಅಂದು ನಾಳೆ ಬಿಟ್ಟುಬಿಡೋದಲ್ಲ. ಸುಮಮ್ಮ ಅವರ ನಿರ್ಧಾರಕ್ಕೆ ನಾವು ಬೆಂಬಲ ನೀಡ್ತೇವೆ ಎಂದು ಹೇಳಿದರು.