ಬೆಂಗಳೂರು: ವಕ್ಫ್ ಬೋರ್ಡ್ ಹೆಸರಿನಲ್ಲಿ ಒಂದು ಎಕರೆ ಬಿಡಿ, ಒಂದಿಂಚು ಭೂಮಿಯೂ ಇಲ್ಲ. ಈ ಆಸ್ತಿಗಳು ದರ್ಗಾ, ಅಂಜುಮನ್, ಈದ್ಗಾ, ಮಸೀದಿಗಳು ಸೇರಿದಂತೆ ಮುಸ್ಲಿಮ್ ಧಾರ್ಮಿಕ ಸಂಸ್ಥೆಗಳಿಗೆ ಸಂಬಂಧ ಪಟ್ಟಿದ್ದಾಗಿವೆ. ವಕ್ಫ್ ಬೋರ್ಡ್ ಈ ಆಸ್ತಿಗಳ ರಕ್ಷಣೆ ಮಾಡುವ ವಿವಾದಗಳನ್ನು ಇತ್ಯರ್ಥ ಮಾಡುವ ಅಂಗವಾಗಿ ಕಾರ್ಯ ನಿರ್ವಹಿಸುತ್ತದೆ. ಎಷ್ಟರವರೆಗೆ ಎಂದರೆ ವಕ್ಫ್ ಬೋರ್ಡ್‌ನ ಕಚೇರಿಯೂ ಕೂಡ ವಕ್ಫ್‌ನ ಹೆಸರಿನಲ್ಲಿ ಇಲ್ಲ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಸದಸ್ಯ ನಸೀರ್ ಅಹ್ಮದ್‌ರವರು ಸ್ಪಷ್ಟಪಡಿಸಿದ್ದಾರೆ. ಗುರುವಾರ ನಡೆದ ವಿಧಾನ ಪರಿಷತ್ ಕಲಾಪದ ವೇಳೆ ವಕ್ಫ್‌ಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕುರಿತ ಚರ್ಚೆ ನಡೆಯುತ್ತಿದ್ದಾಗ ಅವರು ಮಾತನಾಡಿದರು.
ರಾಜ್ಯದಲ್ಲಿ ನಾಲ್ಕು ಟ್ರಿಬ್ಯೂನಲ್‌ಗಳಿವೆ
ಟ್ರಿಬ್ಯೂನಲ್ ತೀರ್ಮಾನವೇ ಅಂತಿಮ ಎಂದು ಹೇಳುವವರಿಗೆ ರಾಜ್ಯದಲ್ಲಿ ನಾಲ್ಕು ಟ್ರಿಬ್ಯೂನಲ್‌ಗಳಿರುವುದನ್ನು ನೆನಪಿಸಿದ ನಸೀರ್ ಅಹ್ಮದ್, ಸರ್ಕಾರವು ಈ ಟ್ರಿಬ್ಯೂನಲ್‌ಗಳಿಗೆ ನ್ಯಾಯಾಧೀಶರನ್ನು ನೇಮಿಸಬೇಕೆಂದು ಮನವಿ ಸಲ್ಲಿಸಿದ ಬಳಿಕ ಈ ಟ್ರಿಬ್ಯೂನಲ್‌ಗಳ ನ್ಯಾಯಾಧೀಶರನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ನೇಮಕ ಮಾಡುತ್ತಾರೆ. ಬೆಂಗಳೂರಿನಲ್ಲಿರುವ ಟ್ರಿಬ್ಯೂನಲ್‌ನಲ್ಲಿ ಸುಧಾ ಸೀತಾರಾಮನ್ ಓಂಕಾರ್, ಕಲಬುರಗಿಯಲ್ಲಿರುವ ಟ್ರಿಬ್ಯೂನಲ್‌ನಲ್ಲಿ ಶ್ರೀನಿವಾಸ್, ಬೆಳಗಾವಿಯಲ್ಲಿರುವ ಟ್ರಿಬ್ಯೂನಲ್‌ನಲ್ಲಿ ಶ್ರೀಮತಿ ಕಟಿಯಾನಿ ಹಾಗೂ ಮೈಸೂರಿನಲ್ಲಿರುವ ಟ್ರಿಬ್ಯೂನಲ್‌ನಲ್ಲಿ ಗುರುರಾಜ್ ಸೋಮ ತಳವಾರ್‌ರವರು ಜಿಲ್ಲಾ ನ್ಯಾಯಾಧೀಶರಾಗಿದ್ದು, ಈ ನ್ಯಾಯಾಧೀಶರ ಜೊತೆಗೆ ಸರ್ಕಾರದಿಂದ ಕಂದಾಯ ಇಲಾಖೆಯಲ್ಲಿ ಅನುಭವವುಳ್ಳ ನಿವೃತ್ತ ಐಎಎಸ್, ಕೆಎಎಸ್ ಅಧಿಕಾರಿಯೊಬ್ಬರನ್ನು ನೇಮಿಸಲಾಗುತ್ತದೆ. ಜೊತೆಗೆ ಇಸ್ಲಾಮಿಕ್ ಧಾರ್ಮಿಕ ವಿದ್ವಾಂಸರೊಬ್ಬರನ್ನು ನೇಮಿಸಲಾಗುತ್ತದೆ. ಆದರೆ, ಇದುವರೆಗೆ ಈ ನಾಲ್ಕು ಟ್ರಿಬ್ಯೂನಲ್‌ಗಳಲ್ಲಿ ಎರಡು ಟ್ರಿಬ್ಯೂನಲ್‌ಗಳಿಗೆ ಮಾತ್ರ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಇನ್ನೆರಡು ಟ್ರಿಬ್ಯೂನಲ್‌ಗಳಲ್ಲಿ ಅಧಿಕಾರಿಗಳನ್ನು ನೇಮಿಸಿಯೇ ಇಲ್ಲ ಎಂದು ಅವರು ಹೇಳಿದರು.
ಬಾಕಿ ಇರುವ ಪ್ರಕರಣಗಳು ಎಷ್ಟು ಗೊತ್ತೇ?
ಸುಪ್ರೀಂ ಕೋರ್ಟಿನಲ್ಲಿ 17, ಹೈಕೋರ್ಟ್‌ನಲ್ಲಿ 904 ಹಾಗೂ ನಾಲ್ಕು ಟ್ರಿಬ್ಯೂನಲ್‌ಗಳಲ್ಲಿ 1341, ಸೆಷನ್ ನ್ಯಾಯಲಯಗಳಲ್ಲಿ 1380 ಪ್ರಕರಣಗಳು ಬಾಕಿ ಉಳಿದಿವೆ. ಇವು ಒಟ್ಟು ಆಸ್ತಿ 5 ಸಾವಿರ ಎಕರೆ ಆಸ್ತಿಗೆ ಸಂಬಂಧಿಸಿವೆ. ಈ ಪ್ರಕರಣಗಳ ಬಗ್ಗೆಯೂ ಅಧ್ಯಯನ ಮಾಡಬೇಕಾದ ಅಗತ್ಯತೆ ಇದೆ ಎಂದು ಅವರು ಒತ್ತಿ ಹೇಳಿದರು.
ಮುಜರಾಯಿ ಹಾಗೂ 1974ರ ನೋಟಿಫಿಕೇಷನ್:
ಈ ಆಸ್ತಿಗಳೆಲ್ಲ ಮೊದಲಿಂದಲೂ ವಕ್ಫ್ ಅಧೀನದಲ್ಲಿ ಇರಲಿಲ್ಲ. ಬದಲಿಗೆ ಇವುಗಳು ಮುಜರಾಯಿ ಇಲಾಖೆಯಲ್ಲಿ ಇದ್ದಂತಹ ಆಸ್ತಿಗಳು. 1974ನಲ್ಲಿ ನೋಟಿಫಿಕೇಷನ್ ಹೊರಡಿಸುವ ಮೂಲಕ ಸರ್ವೇ ನಡೆಸಲಾಗಿದ್ದು, ಅಂದು ಅಧಿಕಾರದಲ್ಲಿದ್ದ ಅಡಿಷನಲ್ ಚೀಫ್ ಸೆಕ್ರೆಟರಿಯವರು ಸರ್ವೆ ಕಮಿಷನ್ ಕಮಿಷನರ್ ಆಗಿದ್ದರು ಹಾಗೂ ಜಿಲ್ಲಾ ಮಟ್ಟದಲ್ಲಿ ಡೆಪ್ಯುಟಿ ಕಮಿಷನರ್‌ಗಳ ನಿಗಾದಲ್ಲಿ ಈ ಸರ್ವೇಗಳನ್ನು ಮಾಡಲಾಗಿತ್ತು. ಈ ಸರ್ವೇಯ ಫಲವಾಗಿ 1962-74ರವರೆಗೆ 35,೦೦೦ ಆಸ್ತಿಗಳನ್ನು ಹಾಗೂ 1978-2002ವರೆಗೆ 11,೦೦೦ ಹೆಚ್ಚುವರಿ ಆಸ್ತಿಗಳನ್ನು ಗುರುತಿಸಲಾಗಿತ್ತು. ಒಟ್ಟು 47,೦೦೦ ವಕ್ಫ್ ಆಸ್ತಿಗಳಿವೆ ಎಂದು ಈ ಸರ್ವೇಗಳ ಬಳಿಕ ಘೋಷಿಸಲಾಗಿತ್ತು. ಈ ಆಸ್ತಿಗಳನ್ನು ಗುರುತಿಸುವ, ಸರ್ವೇ ಮಾಡುವ ಕೆಲಸವನ್ನು ವಕ್ಫ್ ಬೋರ್ಡ್ ಆಗಲೀ ಅಲ್ಪಸಂಖ್ಯಾತರ ಇಲಾಖೆಯಾಗಲೀ ಮಾಡಿಲ್ಲ. ಈ ಸರ್ವೇಗಳನ್ನು ಮಾಡಿರುವುದು ಹಾಗೂ ವಕ್ಫ್ ಆಸ್ತಿಗಳು ಎಂದು ಗುರುತಿಸಿರುವುದು ಕಂದಾಯ ಇಲಾಖೆಯ ಪ್ರಿನ್ಸಿಪಲ್ ಸೆಕ್ರೆಟರಿ ಎಂಬುದು ಗಮನಾರ್ಹ ಎಂದರು.
ಕಂದಾಯ ಇಲಾಖೆಯ ಪ್ರಕಾರ ರಾಜ್ಯದಲ್ಲಿ ಒಟ್ಟು 1,28,೦೦೦ ಎಕರೆ ಭೂಮಿ ವಕ್ಫ್ ಆಸ್ತಿ ಇತ್ತು. ಆದರೆ, ಈಗ 20,400 ಎಕರೆ ಭೂಮಿ ಇದೆ. ಹಾಗಾದರೆ ಉಳಿದ ಆಸ್ತಿ ಏನಾಯ್ತು ಎಂಬ ಬಗ್ಗೆ ತಿಳಿದುಕೊಳ್ಳಬೇಕಾದ ಅಗತ್ಯ ಇದೆ ಎಂದ ನಸೀರ್‌ರವರು, ಇನಾಮ ಅಬಾಲಿಷನ್ ಕಾಯ್ದೆ, ಲ್ಯಾಂಡ್ ಟ್ರಿಬ್ಯೂನಲ್ ಕಾಯಿದೆ, ಸರ್ಕಾರಿ ಸ್ವಾಧೀನಗಳು ಸೇರಿದಂತೆ ಖಾಸಗಿ ವ್ಯಕ್ತಿಗಳ ಸ್ವಾಧೀನದಿಂದಾಗಿ ಈ ಆಸ್ತಿಯು ಇಂದು ಈ ಹಂತಕ್ಕೆ ಇಳಿಕೆಯಾಗಿದೆ ಎಂದರು. ಪ್ರಸ್ತುತ ವಕ್ಫ್ ಅದಾಲತ್‌ಗಳ ಬಗ್ಗೆ ಗುಲ್ಲೆಬ್ಬಿಸಲಾಗುತ್ತಿದ್ದು, ಎಲ್ಲ ಇಲಾಖೆಗಳು ಸಾಮಾನ್ಯವಾಗಿ ಅನುಸರಿಸುವ ಪ್ರಕ್ರಿಯೆಯಂತೆ ವಕ್ಫ್ ಅದಾಲತ್ ನಡೆಸಲಾಗುತ್ತಿದೆ. ಈ ಅದಾಲತ್‌ಗಳಲ್ಲಿ ಅಧಿಕಾರಿಗಳು, ಸ್ಥಳೀಯ ಶಾಸಕರು ಸೇರದಂತೆ ಎಲ್ಲರೂ ಇರುತ್ತಾರೆ ಎಂಬುದನ್ನು ಅವರು ಕಲಾಪದಲ್ಲಿ ಗಮನಕ್ಕೆ ತಂದರು.
21 ಸಾವಿರ ಆಸ್ತಿಗಳನ್ನು ವಕ್ಫ್, ತನ್ನ ಆಸ್ತಿ ಎಂದು ಘೋಷಿಸಿ ಬದಲಾವಣೆ ಮಾಡಲು ಹೊರಟಿದೆ ಎಂಬ ವಿಪಕ್ಷಗಳ ಆರೋಪಕ್ಕೆ ಉತ್ತರಿಸಿದ ನಸೀರ್‌ರವರು, ಇಂತಿಂತಹ ಆಸ್ತಿಗಳನ್ನು ವಕ್ಫ್ ಬೋರ್ಡ್ ತನ್ನ ಆಸ್ತಿ ಎಂದು ಘೋಷಿಸಿಕೊಂಡಿದೆ ಎಂದು ಸಾಬೀತು ಪಡಿಸಲು ಈ 21 ಸಾವಿರ ಆಸ್ತಿಗಳಲ್ಲಿ ಕನಿಷ್ಟ ಸಾವಿರ ಅಥವಾ ನೂರೊಂದು ಆಸ್ತಿಗಳನ್ನಾದರೂ ಹೆಸರಿಸಿ ಎಂದು ವಿಪಕ್ಷ ನಾಯಕರಿಗೆ ಸವಾಲೆಸೆದರು. ಅಲ್ಲದೇ, ಈ ರೀತಿ ಹೇಳಿಕೆ ನೀಡಿ ಅಶಾಂತಿ ಸೃಷ್ಟಿಸುತ್ತಿದ್ದೀರಿ ಎಂದ ಅವರು ಪಹಣಿ, ಖಾತೆ ಹಾಗೂ ಖಾತೆಗಳಲ್ಲಿ ಬದಲಾವಣೆ ಅಥವಾ ನ್ಯೂಟೆಷನ್ ಮಾಡಲು ವಕ್ಫ್ ಬೋರ್ಡ್‌ಗೆ ಅಧಿಕಾರವಿದೆಯೇ? ಮಂತ್ರಿಗಳಿಗೆ ಅಥವಾ ಸ್ವತಃ ಮುಖ್ಯಮಂತ್ರಿಗಳಿಗೇ ಆಗಲಿ ಇಂತಹ ಅಧಿಕಾರವಿಲ್ಲ. ಈ ಬದಲಾವಣೆಗಳನ್ನು ಸ್ಥಳೀಯವಾಗಿರುವ ಆಡಳಿತಾಧಿಕಾರಿಗಳಾದ ತಹಶೀಲ್ದಾರರು, ಜಿಲ್ಲಾಧಿಕಾರಿಗಳಿಗೆ ಮಾತ್ರವೇ ಮಾಡಲು ಸಾಧ್ಯ. ಈ ಬಗ್ಗೆ ಸರ್ಕಾರಕ್ಕೆ ಪ್ರಶ್ನೆಯನ್ನು ಕೇಳುವ ಬದಲು ಆಡಳಿತಾಧಿಕಾರಿಗಳ ಕಚೇರಿಗಳಿಗೆ ತೆರಳಿ ಪ್ರಶ್ನಿಸುವುದನ್ನು ಕಲಿಯಿರಿ ಎಂದರು.