ದೇಶದಲ್ಲಿರುವುದು ಈಗ ಬಿಜೆಪಿ ಪಕ್ಷವಲ್ಲ ಅದು ಬಾಂಡ್ ಜನತಾ ಪಕ್ಷ. ಅವರ ಮಾತಿಗೆಲ್ಲ ನಾವು ಎದರುವುದಿಲ್ಲ, ಬ್ರಿಟಿಷರಿಗೆ ಹೆದರಿಲ್ಲ. ಇನ್ನೂ ಈ ಪುಟಿಗೋಸಿ ಪಕ್ಷಕ್ಕೆ ಹೆದರುತ್ತೇವೇನು ಎಂದು ಸಚಿವ ಶಿವರಾಜ ತಂಗಡಗಿ ಲೇವಡಿ ಮಾಡಿದ್ದಾರೆ.
ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಈಗ ಕಾಂಗ್ರೆಸ್ ಬಗ್ಗೆ ಹೆದರಿಕೆ ಆರಂಭವಾಗಿದೆ. ಅದಕ್ಕಾಗಿ ಪಕ್ಷದ ಬ್ಯಾಂಕ್ ಖಾತೆಗಳನ್ನು ಬಂದ್ ಮಾಡಿದ್ದಾರೆ. ನಮ್ಮ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ವಿರುದ್ದ ವಿವಿಧ ಅಸ್ತ್ರ ಪ್ರಯೋಗಿಸುತ್ತಿದ್ದಾರೆ ಎಂದು ದೂರಿದರು.
ಬಿಜೆಪಿ ನಾಯಕರು ಏನೇ ಮಾಡಿದರು, ನಾವು ಇದೆಲ್ಲಕ್ಕೂ ಹೆದರೋದಿಲ್ಲ, ಬ್ರಿಟಿಷರಿಗೆ ಹೆದರಿಲ್ಲ. ಇನ್ನೂ ಈ ಪುಟಿಗೋಸಿ ಪಕ್ಷಕ್ಕೆ ಹೆದರುತ್ತೇವೇನು ಎಂದು ಪ್ರಶ್ನಿಸಿದರು. ಇದೇ ವೇಳೆ ಬಿಜೆಪಿಗೆ ಈಗ ಕೊನೆಗಾಲ ಬಂದಿದೆ. ದೀಪ ಆರುವಾಗ ಹೆಚ್ಚು ಉರಿಯುತ್ತದೆ, ಅದೇ ಹಿನ್ನೆಲೆಯಲ್ಲಿ ಸಂಗಣ್ಣ ಕರಡಿಯವರಿಗೆ ಟಿಕೆಟ್ ನೀಡಿಲ್ಲ. ಅವರು ನಮ್ಮ ವಿರೋಧಿ ಪಕ್ಷದವರಾಗಿರಬಹುದು. ಆದರೆ ಉತ್ತಮ ಕೆಲಸ ಮಾಡಿದ್ದಾರೆ ಎಂದರು.
ಈ ಬಾರಿ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಜಯಗಳಿಸುತ್ತಾರೆ. ರಾಜಶೇಖರ ಹಿಟ್ನಾಳರಿಗೆ ಟಿಕೆಟ್ ನೀಡಿರುವ ಕುರಿತು ಯಾರಿಗೂ ವಿರೋಧವಿಲ್ಲ. ಶಿವರಾಮಗೌಡರಿಗೂ ವಿರೋಧವಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ 20 ಸ್ಥಾನ ಗೆಲ್ಲಲಿದೆ ಎಂದರು.
ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಬಂಧಿಸಿದ್ದು ಸರಿಯಾದ ಕ್ರಮವಲ್ಲ. ವಿರೋಧ ಪಕ್ಷದವರನ್ನು ಟಾರ್ಗೆಟ್ ಮಾಡಿ ದಾಳಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.