ಒಳಮೀಸಲಾತಿ: ಸರ್ಕಾರಕ್ಕೆ ಒಂದು ವಾರದ ಗಡುವು; ಪ್ರತಿಭಟನೆ ಕೈಬಿಟ್ಟ ಅಲೆಮಾರಿಗಳು

Most read

ಬೆಂಗಳೂರು: ಒಂದು ವಾರದೊಳಗೆ ಅಲೆಮಾರಿಗಳಿಗೆ ಒಳ ಮೀಸಲಾತಿ ಕುರಿತು ನಿರ್ಧಾರ ಕೈಗೊಳ್ಳದಿದ್ದರೆ ಮತ್ತೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಅಲೆಮಾರಿ ಸಮುದಾಯಗಳ ವಿವಿಧ ಸಂಘಟನೆಗಳ ಮುಖಂಡರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಕಳೆದ ಹಲವು ದಿನಗಳಿಂದ ನಗರದ ಫ್ರೀಡಂ ಪಾರ್ಕ್‌ ನಲ್ಲಿ ಅಲೆಮಾರಿಗಳು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿವೆ. ಇಂದು ಮಧ್ಯಾಹ್ನ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಪ್ರಯತ್ನ ನಡೆಸಿದ್ದವು. ಆಗ ಪ್ರತಿಭಟನಾ ಸ್ಥಳಕ್ಕೆ ಸರ್ಕಾರದ ಪ್ರತಿನಿಧಿಯಾಗಿ ಆಗಮಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಅಲೆಮಾರಿಗಳಿಂದ ಮನವಿ ಪತ್ರ ಸ್ವೀಕರಿಸಿ ಸೂಕ್ತ ಕ್ರಮ ಜರುಗಿಸುವ ಭರವಸೆ ನೀಡಿದರು.

ಪ್ರತಿಭಟನಾ ನಿರತರು ಒಂದು ವಾರದೊಳಗೆ ಅಲೆಮಾರಿಗಳಿಗೆ ಮೀಸಲಾತಿ ನೀಡುವ ಸಂಬಂಧ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ ಉಗ್ರ ಪ್ರತಿಭಟನೆಗೆ ಹಿಂಜರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಇಂದು ನಗರಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ  ಅಲೆಮಾರಿ ಸಮುದಾಯಗಳ ಸಾವಿರಾರು ಮಂದಿ ಆಗಮಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.  ಫ್ರೀಡಂ ಪಾರ್ಕ್‌ ರಸ್ತೆಯಲ್ಲೇ ಕುಳಿತು ರಸ್ತೆ ತಡೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು. ಇದರಿಂದ ಮೆಜೆಸ್ಟಿಕ್, ಕೆ.ಆರ್. ಸರ್ಕಲ್ ಬಳಿ ಕೆಲ ಸಮಯ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರು ನಡುವೆ ವಾಗ್ವಾದ ಜಟಾಪಟಿಯೂ ನಡೆಯಿತು.

ಪ್ರತಿಭಟನೆ ವೇಳೆ ಹಲವು ಯುವಕರು ಅಸ್ವಸ್ಥರಾದ ಘಟನೆಯೂ ನಡೆಯಿತು.  ಹಲವು ಯುವಕರು ತಲೆ ಬೋಳಿಸಿಕೊಳ್ಳುವ ಮೂಲಕ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಮಹಿಳೆಯೊಬ್ಬರು ಸ್ಥಳದಲ್ಲೇ ಆತ್ಮಹತ್ಯೆಗೂ ಪ್ರಯತ್ನ ನಡೆಸಿದರು.

More articles

Latest article