ನವದೆಹಲಿ: ಮದರಸಾಗಳಿಂದ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸ್ಥಳಾಂತರಿಸಬೇಕು ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ
ಆಯೋಗ(ಎನ್‌ಸಿಪಿಸಿಆರ್) ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (ಎನ್‌ಸಿಪಿಸಿಆರ್) ಆದೇಶ ಮತ್ತು ಈ ಸಂಬಂಧ ಕೆಲವು ರಾಜ್ಯಗಳು ಕೈಗೊಂಡಿರುವ ಕ್ರಮಗಳನ್ನು
ತಡೆಹಿಡಿಯುವ ಅಗತ್ಯವಿದೆ ಎಂದು ಮುಸ್ಲಿಂ ಸಂಘಟನ ಜಮಿಯತ್ ಉಲೇಮಾ-ಇ-ಹಿಂದ್ ವಾದ ಮಂಡಿಸಿತ್ತು. ಇವರ ವಾದವನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಒಪ್ಪಿಕೊಂಡಿದೆ.
ಮಾನ್ಯತೆ ಇಲ್ಲದ ಮದರಸಾಗಳಿಂದ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸ್ಥಳಾಂತರಿಸುವ ಕುರಿತು ಉತ್ತರ ಪ್ರದೇಶ ಮತ್ತು ತ್ರಿಪುರಾ ರಾಜ್ಯಗಳು ಕೈಗೊಂಡಿರುವ ಕ್ರಮಗಳನ್ನೂ ಸಂಸ್ಥೆ ಪ್ರಶ್ನಿಸಿತ್ತು. ವಾದ ಆಲಿಸಿದ ನ್ಯಾಯಾಲಯ ಕ್ರಮ ಜರುಗಿಸದಂತೆ ಆದೇಶಿಸಿದೆ. ಎನ್‌ಸಿಪಿಸಿಆರ್ ಅನ್ವಯ ರಾಜ್ಯಗಳು ಹೊರಡಿಸಿರುವ ಆದೇಶಗಳಿಗೂ ತಡೆ ನೀಡಿದೆ.