ನವದೆಹಲಿ: ಕರ್ನಾಟಕದ ಮಾದರಿಯಲ್ಲಿ ಪರಿಶಿಷ್ಟ ಜಾತಿ ಉಪಯೋಜನೆ ಹಾಗೂ ಬುಡಕಟ್ಟು ಉಪಯೋಜನೆ (ಎಸ್‌ಸಿಎಸ್‌ಪಿ/ಟಿಎಸ್‌ಪಿ) ಕಾಯ್ದೆಯನ್ನು ಕೇಂದ್ರದಲ್ಲಿ ಜಾರಿಗೆ ತರುವ ಪ್ರಸ್ತಾವ ಇಲ್ಲ ಎಂದು ಕೇಂದ್ರ ಬುಡಕಟ್ಟು ಖಾತೆಯ ರಾಜ್ಯ ಸಚಿವ ದುರ್ಗಾದಾಸ್ ಉಯಿಕಿ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ರಾಯಚೂರು ಸಂಸದ ಜಿ.ಕುಮಾರ ನಾಯಕ ಅವರ ಪ್ರಶ್ನೆಗೆ ಸಚಿವರು ಲಿಖಿತ ಉತ್ತರ ನೀಡಿದ್ದಾರೆ.
ಬುಡಕಟ್ಟು ಉಪಯೋಜನೆಗೆ ಸಾಕಷ್ಟು ಹಂಚಿಕೆ ಹಾಗೂ ಪರಿಣಾಮಕಾರಿ ವೆಚ್ಚವನ್ನು ಖಚಿತಪಡಿಸಿಕೊಳ್ಳಲು ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಉತ್ತರಾಖಂಡ, ರಾಜಸ್ಥಾನ ಮತ್ತು ತಮಿಳುನಾಡು ರಾಜ್ಯಗಳು ಕಾಯ್ದೆ ಜಾರಿಗೆ ತಂದಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಕ್ರಿಯಾ ಯೋಜನೆಗೆ ಕೇಂದ್ರ ಸರ್ಕಾರ 2013–14ರಲ್ಲಿ ರೂ.24,594 ಕೋಟಿ ವೆಚ್ಚ ಮಾಡಿದ್ದು, 2025–26ನೇ ಬಜೆಟ್‌ನಲ್ಲಿ ರೂ.1,27,434 ಕೋಟಿ ಹಂಚಿಕೆ ಮಾಡಲಾಗಿದೆ. ಕಳೆದ ಐದು ವರ್ಷಗಳಲ್ಲಿ ಈ ಬಳಕೆಯು ಶೇ. 92 ರಷ್ಟು ಹೆಚ್ಚಳವಾಗಿದೆ. ನೀತಿ ಆಯೋಗವು ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳನ್ನು ನಿಯಮಿತವಾಗಿ ಪರಿಶೀಲಿಸುತ್ತಿದೆ ಹಾಗೂ ಹೊಸ ಮಾರ್ಗಸೂಚಿಗಳನ್ನು ಶಿಫಾರಸು ಮಾಡುತ್ತಿದೆ. ಈ ಎಲ್ಲ ಕಾರಣಗಳಿಂದಾಗಿ, ಅನುದಾನ ಹಂಚಿಕೆ ಹಾಗೂ ಬಳಕೆ ಹೆಚ್ಚಳಕ್ಕಾಗಿ ಹೊಸ ಕಾಯ್ದೆ ತರುವ ಅಗತ್ಯ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕದ ಮಾದರಿಯಲ್ಲೇ ಕೇಂದ್ರದಲ್ಲೂ ಎಸ್‌ಸಿ ಎಸ್ ಪಿ/ಟಿಎಸ್ ಪಿ ಕಾಯ್ದೆ ಜಾರಿಗೆ ತರಬೇಕು ಎಂದು ಕರ್ನಾಟಕ ಸರ್ಕಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿತ್ತು.