ಬೆಂಗಳೂರು: ನಾನು ಹುಟ್ಟಿನಿಂದಲೇ ಕಾಂಗ್ರೆಸ್ಸಿಗ. ಜೀವ ಇರುವವರೆಗೂ ಕಾಂಗ್ರೆಸ್ಸಿಗನಾಗಿಯೇ ಇರುತ್ತೇನೆ. ನನ್ನ ಜೀವ, ನನ್ನ ರಕ್ತದ ಕಣಕಣದಲ್ಲೂ ಕಾಂಗ್ರೆಸ್ ಇದೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಇಂದು ಅವರು ಆರ್‌ಎಸ್‌ಎಸ್ ಗೀತೆ ಹಾಡಿದ್ದರು. ಈ ನಿಟ್ಟಿನಲ್ಲಿ ತಾವು ಬಿಜೆಪಿ ಹಾಗೂ ಆರ್‌ಎಸ್‌ಎಸ್ ಜೊತೆ ಕೈ ಜೋಡಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಯಾವುದೇ ಸಂದರ್ಭದಲ್ಲೂ ಬಿಜೆಪಿ ಜತೆ ಕೈ ಜೋಡಿಸುವ ಪ್ರಶ್ನೆಯೇ ಇಲ್ಲ ಎಂದರು.
ನಾನು ಅಪ್ಪಟ ಕಾಂಗ್ರೆಸ್ಸಿಗ ಎನ್ನುವುದರಲ್ಲಿ ಸಂಶಯವೇ ಬೇಡ. ನಾನು ಜೆಡಿಎಸ್ ಮತ್ತು ಬಿಜೆಪಿ ಹುಟ್ಟು ಬೆಳವಣಿಗೆ ಕುರಿತು ಸಂಶೋಧನೆ ಮಾಡುತ್ತಿದ್ದೇನೆ. ಅದೇ ರೀತಿ ಆರ್‌ಎಸ್‌ಎಸ್ ಬಗ್ಗೆಯೂ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಿದರು.
ರಾಜಕೀಯದಲ್ಲಿ ತೊಡಗಿಸಿಕೊಂಡಿರುವ ನನಗೆ ನನ್ನ ರಾಜಕೀಯ ಎದುರಾಳಿಗಳಲ್ಲಿ ಸ್ನೇಹಿತರು ಯಾರು ಶತ್ರುಗಳು ಯಾರು ಎನ್ನವುದನ್ನು ತಿಳಿದುಕೊಳ್ಳುವ ಅವಶ್ಯಕತೆ ಇದೆ ಅಲ್ಲವೇ? ಹಾಗಾಗಿ ಸಂಘ ಪರಿವಾರದ ಇತಿಹಾಸವನ್ನು ಕುರಿತೂ ಅಧ್ಯಯನ ನಡೆಸಿದ್ದೇನೆ ಎಂದು ಶಿವಕುಮಾರ್ ತಿಳಿಸಿದ್ದಾರೆ.
ನಾನೀಗ ಪಕ್ಷದ ರಾಜ್ಯ ಅಧ್ಯಕ್ಷನಾಗಿದ್ದು, ಪಕ್ಷವನ್ನು ಸಂಘಟಿಸುತ್ತಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.