ಬೆಂಗಳೂರು: ಲೋಕಾಯುಕ್ತ ಎಡಿಜಿಪಿ ಮತ್ತು ಎಸ್‌ಐಟಿ ಮುಖ್ಯಸ್ಥ ಎಂ.ಚಂದ್ರಶೇಖರ್ ದೂರು ಆಧರಿಸಿ ದಾಖಲಾಗಿರುವ ಎಫ್ ಐ ಆರ್ ಗೆ ಸಂಬಂಧಿಸಿದಂತೆ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತಿತರರ ವಿರುದ್ಧ ಯಾವುದೇ ರೀತಿಯ ಬಲವಂತದ ಕ್ರಮ
ಕೈಗೊಳ್ಳಬಾರದು ಎಂದು ನಿರ್ದೇಶಿಸಿ ಈ ಹಿಂದೆ ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಇದೇ 18ರವರೆಗೆ ಹೈಕೋರ್ಟ್ ವಿಸ್ತರಿಸಿ ಆದೇಶಿಸಿದೆ.
ನಮ್ಮ ವಿರುದ್ಧ ಸಂಜಯನಗರ ಠಾಣೆ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸಬೇಕು ಎಂದು ಕೋರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಸುರೇಶ್‌ಬಾಬು ಸಲ್ಲಿಸಿರುವ ಅರ್ಜಿಯನ್ನು ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಪೀಠದ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರು ವಿಚಾರಣೆ ನಡೆಸಿ ಈ ಕುರಿತಂತೆ ಆದೇಶ ಹೊರಡಿಸಿದರು. ಚಂದ್ರಶೇಖರ್ ಪರ ಹೈಕೋರ್ಟ್ ವಕೀಲ ವೆಂಕಟೇಶ್ ಅರಬಟ್ಟಿ ಅರ್ಜಿದಾರರ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ಪೊಲೀಸರಿಗೆ ನಿರ್ದೇಶಿಸಿ 2024ರ ನವೆಂಬರ್ 6ರಂದು ಹೊರಡಿಸಿರುವ ಮಧ್ಯಂತರ ಆದೇಶವನ್ನು ತೆರವುಗೊಳಿಸಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿಕೊಂಡರು.