ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ “ಶಕ್ತಿ” ಯೋಜನೆಯಡಿ ಮಹಿಳೆಯರ ಉಚಿತ ಪ್ರಯಾಣ 500 ಕೋಟಿ ಟ್ರಿಪ್ ತಲುಪಿದ್ದು ಈ ಯೋಜನೆ ಯೋಜನೆ ಇಡೀ ದೇಶಕ್ಕೆ ಮಾದರಿ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಬಣ್ಣಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಬೆಂಗಳೂರಿನ ವಿಂಡ್ಸರ್ ವೃತ್ತದಲ್ಲಿ ಬಿಎಂಟಿಸಿ ಬಸ್ ನಲ್ಲಿ 500 ನೇ ಕೋಟಿಯ ಟಿಕೆಟ್ ಅನ್ನು ಮಹಿಳಾ ಪ್ರಯಾಣಿಕರೊಬ್ಬರಿಗೆ ನೀಡಿದರು. ನಂತರ ಡಿಕೆ ಶಿವಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಬಿಜೆಪಿ ಜೆಡಿಎಸ್ ಹೇಳುವಂತೆ ಯಾವುದೇ ಕಾರಣಕ್ಕೂ ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ಎಲ್ಲಿಯವರೆಗೆ ದೇವರು ಶಕ್ತಿ ಹಾಗೂ ಜನ ಅಧಿಕಾರ ನೀಡುತ್ತಾರೋ ಅಲ್ಲಿಯವರೆಗೆಈ ಯೋಜನೆಗಳು ಮುಂದುವರೆಯುತ್ತವೆ. ಕಾಂಗ್ರೆಸ್ ಪಕ್ಷ ಈ ದೇಶದ ಜನರಿಗೆ ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ನೀಡಿದೆ. ಪಿಂಚಣಿ ಯೋಜನೆಗಳು, ನರೇಗಾ, ಬ್ಯಾಂಕ್ ರಾಷ್ಟ್ರೀಕರಣ ಸೇರಿದಂತೆ ಮಹತ್ವದ ಯೋಜನೆಗಳನ್ನು ಬಿಜೆಪಿ ಸೇರಿದಂತೆ ಯಾವುದೇ ಪಕ್ಷವೂ ನಿಲ್ಲಿಸಲು ಸಾಧ್ಯವಿಲ್ಲ. ಇವು ಜನರ ಹೃದಯ ಹಾಗೂ ಬದುಕಿಗೆ ಅಗತ್ಯವಾಗಿರುವ ಕಾರ್ಯಕ್ರಮಗಳು. ಇವು ನಿರಂತರವಾಗಿರುತ್ತವೆ ಎಂದರು.
ಶಕ್ತಿ ಯೋಜನೆಯಿಂದ ರಾಜ್ಯದ ಉದ್ದಗಲಕ್ಕೂ ಮಹಿಳೆಯರು ಉಚಿತವಾಗಿ ಸಂಚಾರ ಮಾಡಬಹುದು. ಯಾವುದೇ ಖರ್ಚು ಮಾಡದೇ ತಮ್ಮ ಪ್ರೀತಿಪಾತ್ರರ ಮನೆಗಳಿಗೆ ಹೋಗಬಹುದು. ಕೆಲಸಕ್ಕೆ ಹೋಗುವ ಅನೇಕ ಮಹಿಳೆಯರಿಗೆ ಪ್ರತಿ ತಿಂಗಳು 500 ರಿಂದ 1 ಸಾವಿರಕ್ಕೂ ಹೆಚ್ಚು ಹಣ ಉಳಿಸುತ್ತಿದ್ದಾರೆ. ಮಹಿಳೆಯೊಬ್ಬರು ಸಂತೋಷದಿಂದ ನನಗೆ ರೊಟ್ಟಿ, ಶೇಂಗಾ ಹೋಳಿಗೆ ನೀಡಿದರು. ನಮ್ಮ ಯೋಜನೆ ಬಗ್ಗೆ ಯಾರು ಎಷ್ಟೇ ಟೀಕೆ ಮಾಡಿದರೂ ಅವುಗಳು ಕಾಲಕ್ರಮೇಣ ಸತ್ತು ಹೋಗುತ್ತವೆ. ನಮ್ಮ ಕೆಲಸಗಳು ಶಾಶ್ವತವಾಗಿ ಉಳಿಯುತ್ತವೆ. ಈ ಯೋಜನೆಗಳನ್ನು ಜಾರಿ ಮಾಡಲು ಜನ ನೀಡಿರುವ ಶಕ್ತಿಯೇ ಕಾರಣ ಎಂದರು.