ಹೊಸಪೇಟೆ: 2023ರಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗುವ ಸಂದರ್ಭದಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ (ಸಿಎಲ್ ಪಿ) ಎಲ್ಲ ಶಾಸಕರು ಸಿದ್ದರಾಮಯ್ಯ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿದ್ದೆವು. ಆಗ ಎರಡೂವರೆ ವರ್ಷದ ನಂತರ ಸಿಎಂ ಹುದ್ದೆಯನ್ನು ಬಿಟ್ಟುಕೊಡಬೇಕು ಎಂಬ ಷರತ್ತು ವಿಧಿಸಿರಲಿಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ಅವರು ಇಲ್ಲಿಗೆ ಸಮೀಪದ ಬೈಲವದ್ಧಿಗೇರಿಯಲ್ಲಿಇಂದು ಸುದ್ದಿಗಾರರೊಂದಿಗೆ ಮಾತನಾಡಿದರು. ಸದ್ಯಕ್ಕಂತೂ ಸಿಎಂ ಹುದ್ದೆ ಖಾಲಿ ಇಲ್ಲ. ಸಿಎಲ್‌ಪಿ ಸಭೆಯ ನಿರ್ಧಾರ ಹೊರತುಪಡಿಸಿ ಹೈಕಮಾಂಡ್ ಅಧಿಕಾರ ಹಂಚಿಕೆ ಕುರಿತು ಒಪ್ಪಂದ ಮಾಡಿದ್ದರೆ ಅದು ನನಗೆ ಗೊತ್ತಿಲ್ಲ, ಆ ಬಗ್ಗೆ ವರಿಷ್ಠರೇ ಹೇಳಬೇಕು ಎಂದರು.
ಪಕ್ಷದೊಳಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಸಿಎಂ, ಡಿಸಿಎಂ ಇಬ್ಬರೂ ಸ್ಪಷ್ಟಪಡಿಸಿದ್ದಾರೆ ಮತ್ತು ಹೈಕಮಾಂಡ್ ಸೂಚನೆಯಂತೆ ನಡೆದುಕೊಳ್ಳುವುದಾಗಿ ಹೇಳಿದ್ದಾರೆ. ಬಿಜೆಪಿ ಮುಖಂಡರು ಹೇಳುವಂತೆ ಕಾಂಗ್ರೆಸ್ ನ ಯಾವೊಬ್ಬ ಶಾಸಕನೂ ಬಿಕರಿಗೆ ಇಲ್ಲ. ಬಿಜೆಪಿ ಮುಖಂಡರು ಬೆಂಕಿ ಹಚ್ಚುವುದರಲ್ಲಿ ನಿಷ್ಣಾತರು ಎಂದು ಸಚಿವ ಜಾರ್ಜ್ ಟೀಕಿಸಿದರು.

