ಸಿಎಂ ಬದಲಾವಣೆ ಇಲ್ಲ; ಪರೋಕ್ಷ ಹೇಳಿಕೆ ನೀಡಿದ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ

Most read

ಬೆಂಗಳೂರು: ಈ ವರ್ಷದ ಕೊನೆಯಲ್ಲಿ ಸರ್ಕಾರದಲ್ಲಿ ಸಣ್ಣಪುಟ್ಟ ಬದಲಾವಣೆಗಳಾಗಲಿವೆ. ಆದರೆ ಯಾವುದೇ ಮಹತ್ವದ ಬದಲಾವಣೆ ಆಗುವುದಿಲ್ಲ ಎಂದು  ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ‌ ಹೇಳಿದ್ದಾರೆ. ಈ ಮೂಲಕ ಅವರು  ಮುಖ್ಯಮಂತ್ರಿ ಬದಲಾವಣೆ ಇಲ್ಲ ಎನ್ನುವುದನ್ನು ಪರೋಕ್ಷವಾಗಿ ಹೇಳಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಬೆಂಗಳೂರಿನಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಇಂದು ಮಾತನಾಡಿದ ಅವರು, ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ. ಆ ಸ್ಥಾನಕ್ಕೆ ನಾನು ಪ್ರಯತ್ನ ನಡೆಸಿಲ್ಲ. ಪ್ರಯತ್ನ ನಡೆಸಿದರೆ ಮುಂದುವರೆಸಬಹುದು. ನಾನು ಎಲ್ಲಿದ್ದೆನೋ ಅಲ್ಲೇ ಇದ್ದೇನೆ ಎಂದರು. ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಸೇರಿದಂತೆ ಹಲವಾರು ಸಚಿವರು ಮತ್ತು ನಾವು ಆಗಾಗ  ಸೇರುತ್ತಿರುತ್ತೇವೆ. ಹುಲಿ ಯಾವತ್ತಿದ್ದರೂ ಹುಲಿಯೇ ಎಂದರು.

ಜಲಸಂಪನ್ಮೂಲ ಇಲಾಖೆಯಿಂದ ಅನುದಾನ ಸಿಕ್ಕಿಲ್ಲ ಎಂಬ ಶಾಸಕರ ಆರೋಪದ ಪ್ರಶ್ನೆಗೆ ಉತ್ತರಿಸಿದ ಅವರು, ನೀರಾವರಿ ಸಮಸ್ಯೆ ಬಗ್ಗೆ ಶಾಸಕ ರಾಜು ಕಾಗೆ ಮೊದಲಿನಿಂದಲೂ ಹೇಳುತ್ತಲೇ ಇದ್ದಾರೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೂ ಬಂದಿದೆ. ಈ ಬಗ್ಗೆ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಕರೆದು ಮುಖ್ಯಮಂತ್ರಿಗಳು ಮಾತನಾಡಲಿದ್ದಾರೆ ಎಂದರು.

ಜಲಸಂಪನ್ಮೂಲ ಇಲಾಖೆಯಲ್ಲಿ ರೂ. 25 ಸಾವಿರ ಕೋಟಿ ಅನುದಾನ ಇದೆ. ಬಾಕಿ ಬಿಲ್‌ ಗಳೂ ಉಳಿದುಕೊಂಡಿವೆ. ಯಾವ ಸರ್ಕಾರ ಬಂದರೂ ಮೂರು ವರ್ಷಗಳ ಬಿಲ್ ಬಾಕಿ ಇದ್ದೆ ಇರುತ್ತದೆ ಎಂದರು. ಬಿಜೆಪಿ ರಾಜ್ಯ ಅಧ್ಯಕ್ಷರ ನೇಮಕಕ್ಕೂ ಕಾಂಗ್ರೆಸ್‌ ಅಧ್ಯಕ್ಷರ ನೇಮಕಕ್ಕೂ ಸಂಬಂಧವೇ ಇಲ್ಲ. ತತ್ವ, ಸಿದ್ಧಾಂತಗಲೇ ಬೇರೆ ನಮ್ಮ ನಿಯಮಗಳೇ ಬೇರೆ. ಬಿಜೆಪಿಗೂ ಕಾಂಗ್ರೆಸ್‌ ಗೂ ಸಾಕಷ್ಟು ವ್ಯತ್ಯಾಸ ಇದೆ ಎಂದು ಹೇಳಿದರು.

 ದೆಹಲಿ ಭೇಟಿಯಲ್ಲಿ ಯಾವುದೇ ವಿಶೇಷ ಇಲ್ಲ. ಮುಖ್ಯಮಂತ್ರಿ ಜತೆ ದೆಹಲಿಗೆ ಹೋಗಿದ್ದೆವು. ರಾಷ್ಟ್ರಪತಿಗಳನ್ನು ಭೇಟಿ ಮಾಡಿದ್ದೆವು. ದೆಹಲಿಗೆ ಹೋದಾಗ ವರಿಷ್ಠರನ್ನು ಭೇಟಿ ಮಾಡುವುದು ವಾಡಿಕೆ ಎಂದರು.

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಚರ್ಚೆ ಆಗಿಲ್ಲ. ಯುದ್ಧ ಇದ್ದಾಗ ಶಸ್ತ್ರ ಹಿಡಿಯಬೇಕು. ಯುದ್ಧ ಇಲ್ಲದೇ ಇರುವಾಗ ಶಸ್ತ್ರ ಹಿಡಿಯುವ ಅಗತ್ಯ ಇಲ್ಲ ಎಂದು ಸೂಚ್ಯವಾಗಿ ಹೇಳಿದರು

More articles

Latest article