ಬೆಂಗಳೂರು: ರಾಜ್ಯದಲ್ಲಿ ಯಾವ ನಾಯಕತ್ವದ ಬದಲಾವಣೆಯೂ ಇಲ್ಲ. ಬದಲಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೈ ಬಲಪಡಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಇಂದು ಸುದ್ದಿಗಾರರ ಜತೆ ಮಾತನಾಡಿದ ಅವರು, ನಾನು ಮುಖ್ಯಮಂತ್ರಿಯಾಗಬೇಕು ಎಂದು ಹೇಳಿಕೆ ನೀಡಿದ ಶಾಸಕ ಇಕ್ಬಾಲ್ ಹುಸೇನ್ ಅವರಿಗೆ ನೋಟಿಸ್ ಕೊಡುತ್ತೇನೆ’ ಎಂದರು. ಬಿ.ಆರ್ ಪಾಟೀಲ, ಬಾಲಕೃಷ್ಣ ಸೇರಿದಂತೆ ಯಾರೇ ಆದರೂ ಇನ್ನು ಮುಂದೆ ಮಾಧ್ಯಮಗಳ ಎದುರು ಮಾತನಾಡಬಾರದು ಎಂದು ತಾಕೀತು ಮಾಡಿದರು.
ಶಾಸಕರ ಜೊತೆ ಪಕ್ಷ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಪ್ರತ್ಯೇಕ ಸಭೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಯಾರೂ ಗಾಬರಿಪಡಬೇಕಿಲ್ಲ. ಪಕ್ಷ ಸಂಘಟನೆ ಕುರಿತು ಚರ್ಚೆ ಮತ್ತು ಸಭೆ ಮಾಡುತ್ತಿದ್ದಾರೆ ಎಂದರು.
‘ಇಡೀ ದೇಶದಾದ್ಯಂತ ಬ್ಲಾಕ್ ಕಾಂಗ್ರೆಸ್ ನಲ್ಲಿ ಬದಲಾವಣೆ ಆಗುತ್ತಿದೆ. ಜಿಲ್ಲಾ ಕಾಂಗ್ರೆಸ್ ಘಟಕದಲ್ಲೂ ಬದಲಾವಣೆ ಆಗುತ್ತಿದೆ. ಖರ್ಗೆಯವರು ಬೆಳಗಾವಿಯಲ್ಲಿ ಈ ವಿಚಾರ ಹೇಳಿದ್ದಾರೆ. ಇದು ಸಂಘಟನೆಯ ವರ್ಷ ಎಂದು ಅವರು ಹೇಳಿದ್ದಾರೆ. ಪಕ್ಷದಲ್ಲಿ ಯಾವೆಲ್ಲ ಬದಲಾವಣೆ ತರಬೇಕು. ಎಲ್ಲಿ ಏನು, ಯಾವ ಕಟ್ಟಡ ಕಟ್ಟಬೇಕು ಎಂದು ಎಐಸಿಸಿ ನಾಯಕರು ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ಇದು ಪಕ್ಷ ಸಂಘಟನೆ ವಿಚಾರವಾಗಿ ನಡೆಯುತ್ತಿರುವ ಸಭೆ ಅಷ್ಟೇ ಎಂದು ಶಿವಕುಮಾರ್ ಹೇಳಿದರು.