ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಸೇರಿದ ಚಿಕ್ಕಪೇಟೆಯಲ್ಲಿ ಮಾರ್ವಾಡಿ ಹುಡಗನ ಮೇಲೆ ಹಲ್ಲೆ ಮಾಡಿರುವುದನ್ನು ಹಿಂದೂ ಹುಡುಗನ ಮೇಲೆ ಹಲ್ಲೆ ನಡೆದಿದೆ ಎಂದು ಬಿಜೆಪಿ ಅದರ ಲಾಭ ಪಡೆಯಲು ಮುಂದಾಗಿದೆ. ಇದಕ್ಕೆ ಪೊಲೀಸರಲ್ಲದೆ ಚಿಕ್ಕಪೇಟೆ ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಕೂಡ ಸ್ಪಷ್ಟನೆ ನೀಡಿದ್ದು, ಇದು ಹನುಮಾನ್ ಚಾಲೀಸಾ ಹಾಕಿದ್ದಕ್ಕಾಗಲೀ ಅಥವಾ ಅಜಾನ್ ಪ್ರಾರ್ಥನೆ ಸಂಬಂಧಿಸಿದ ಜಗಳ ಅಲ್ಲವೇ ಅಲ್ಲ, ಚುನಾವಣೆ ಸಮಯದಲ್ಲಿ ಆಗಿರುವುದರಿಂದ ಇದು ಇಷ್ಟು ದೊಡ್ಡ ವಿಷಯವಾಗಿದೆ ಎಂದು ಹೇಳಿದ್ದಾರೆ.
ನಗರ್ತಪೇಟೆಯಲ್ಲಿನ ಮೊಬೈಲ್ ಅಂಗಡಿಯೊಂದರಲ್ಲಿ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಅಂಗಡಿಯವನ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬುದು ಸುಳ್ಳು. ಇದು ನನ್ನ ಕ್ಷೇತ್ರವಾಗಿದ್ದರಿಂದ ಎಲ್ಲಾ ಮಾಹಿತಿ ನನಗೆ ಗೊತ್ತಿದೆ. ಇದನ್ನು ದೊಡ್ಡದಾಗಿಸುವ ಅವಶ್ಯಕತೆ ಇರಲಿಲ್ಲ. ಚುನಾವಣೆ ಸಮಯದಲ್ಲಿ ಆಗಿರುವುದರಿಂದ ಇದು ಇಷ್ಟು ದೊಡ್ಡ ವಿಷಯವಾಗಿದೆ ಎಂದು ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಖಾಸಗಿ ಚಾನೆಲ್‌ಗೆ ಹೇಳಿದ್ದಾರೆ.
ಮುಂದುವರೆದು, ಪಾನ್ ಅಂಗಡಿ ಇಟ್ಟುಕೊಂಡವನಿಗೆ ಸುಮ್ಮನೆ ಹೊಡೆದಿದ್ದಾರೆ. ಇದು ಅವರವರ ವೈಯಕ್ತಿಕ ಜಗಳ. ಈ ಚುನಾವಣೆ ಸಮಯದಲ್ಲಿ ಇದನ್ನು ದೊಡ್ಡ ವಿಷಯ ಮಾಡಿ ರಾಜಕೀಯ ಮಾಡುತ್ತಿದ್ದಾರೆ ಅಷ್ಟೇ. ಅನ್ಯ ಕೋಮಿನ ಜಗಳ ಎಂದು ನಾನು ಯಾವತ್ತು ಹೇಳಲ್ಲ, ನಾನು ಸೆಕ್ಯೂಲರ್ ವ್ಯಕ್ತಿ ಎಲ್ಲಾ ಜನಾಂಗದವರು ಚೆನ್ನಾಗಿ ಇರಬೇಕು ಎಂದು ಹೇಳುವವನು ಎಂದು ಹೇಳಿದ್ದಾರೆ.
ಪೊಲೀಸರು ಅರೆಸ್ಟ್ ಮಾಡಿದ್ದಾರೆ ಕಾನೂನು ಕ್ರಮ ತೆಗೆದುಕೊಳ್ಳುತ್ತಾರೆ ಇದನ್ನು ದೊಡ್ಡದು ಮಾಡುವ ಅಗತ್ಯ ಇಲ್ಲ. ಕಾಂಗ್ರೆಸ್‌ನವರು ಪ್ರತಿಭಟನೆ ಮಾಡಬಾರದಿತ್ತು ಎಂದು ಆರೋಪ ಮಾಡುತ್ತಿದ್ದಾರೆ. ನಮ್ಮ ಬಿಜೆಪಿಯವರು ಚುನಾವಣೆ ಸಮಯದಲ್ಲಿ ಇದನ್ನು ಅಸ್ತ್ರ ಮಾಡಿಕೊಂಡಿದ್ದಾರೆ ಅಷ್ಟೆ ಎಂದು ನಗು ನಗುತ್ತಾ ಹೇಳಿದ್ದಾರೆ.
ಬೆಳಿಗ್ಗೆ ತೇಜಸ್ವಿ ಸೂರ್ಯ ಕಾಲ್ ಮಾಡಿದಾಗಲೂ ನಾನು ಅವರಿಗೆ ಹೇಳಿದ್ದು, ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇದನ್ನು ದೊಡ್ಡದು ಮಾಡಬೇಡಿ. ಪೊಲೀಸರು ಕಾನೂನು ರೀತಿ ಕ್ರಮ ಕೈಗೊಳ್ಳಲಿ ಎಂದು ಹೇಳಿದ್ದೇನೆ ಅದರಂತೆ ಈಗ ಅವರು ಹೇಳಿಕೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ಹನುಮಾನ್ ಚಾಲೀಸಾ ಹಾಕಿದ್ದಕ್ಕಾಗಲೀ ಅಥವಾ ಅಜಾನ್ ಪ್ರಾರ್ಥನೆಗೆ ಅಡ್ಡಿಯಾಗುತ್ತಿದೆ ಎಂದು ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆದಿಲ್ಲ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
ಘಟನೆ ಸಂಬಂಧ ಭಾನುವಾರ ರಾತ್ರಿ 10.30ಕ್ಕೆ ಕಬ್ಬನ್‌ಪೇಟೆ ನಿವಾಸಿ ಜಿ ಮುಖೇಶ್ ಅವರು, ಸುಲೇಮಾನ್, ಶಹನವಾಜ್, ರೋಹಿತ್, ದ್ಯಾನೀಶ್, ತರುಣ ಹಾಗೂ ಇತರರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ದೂರು ಹಿನ್ನೆಲೆಯಲ್ಲಿ ಹಲಸೂರು ಗೇಟ್ ಪೊಲೀಸರು ಐವರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.