ಹೊಸದಿಲ್ಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿಂದು 2024-25 ಸಾಲಿನ ಬಜೆಟ್ ಮಂಡಿಸಿದರು.
ಸತತ 7ನೇ ಬಾರಿಗೆ ಬಜೆಟ್ ಮಂಡಿಸುತ್ತಿರುವ ನಿರ್ಮಲಾ ಸೀತಾರಾಮನ್ ಮೂರನೇ ಬಾರಿ ಪ್ರಧಾನಿ ಆಗುವ ಮೂಲಕ ಇತಿಹಾಸ ಸೃಷ್ಟಿಸಿದ ಪ್ರಧಾನಿ ನರೇಂದ್ರ ಮೋದಿ ಗುಣಗಾನದೊಂದಿಗೆ ತಮ್ಮ ಬಜೆಟ್ ಭಾಷಣ ಆರಂಭಿಸಿದರು.
ಭಾರತದ ಹಣದುಬ್ಬರ ನಿಯಂತ್ರಣದಲ್ಲಿದೆ. ಮಧ್ಯಂತರ ಬಜೆಟ್ ನಲ್ಲಿ 4 ವಲಯಗಳಿಗೆ ಆದ್ಯತೆ ನೀಡಲಾಗಿತ್ತು. ಮಹಿಳೆಯರು, ಯುವಕರು, ಅನ್ನದಾತರಿಗೆ ಆದ್ಯತೆ ನೀಡಲಾಗಿತ್ತು ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರ ಆರ್ಥಿಕವಾಗಿ ಸುಭದ್ರವಾಗಿದೆ. ದೇಶದ ಜನ ನಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ. ದೇಶದ ಹಣದುಬ್ಬರ ನಿಯಂತ್ರಣದಲ್ಲಿದೆ. ಪ್ರಸ್ತುತ ದೇಶದ ಹಣದುಬ್ಬರ ಶೇ. 3.1 ರಷ್ಟಿದೆ. ಭಾರತದ ಆರ್ಥಿಕ ಸ್ಥಿತಿಯೂ ಸ್ಥಿರವಾಗಿದೆ. ಬಡವರಿಗೆ ಉಚಿತ ಪಡಿತರ ವಿತರಿಸುತ್ತಿದ್ದೇವೆ.
ಜಾಗತಿಕವಾಗಿ ಆರ್ಥಿಕ ಸ್ಥಿತಿ ಸಂಕಷ್ಟದಲ್ಲಿದ್ದರೂ ಭಾರತದ ಆರ್ಥಿಕ ಸ್ಥಿತಿ ಸದೃಢವಾಗಿದೆ. ನಮ್ಮ ಬಜೆಟ್ ಬಡವರು, ಮಹಿಳೆಯರು, ಯುವಕರು. ರೈತರ ಮೇಲೆ ಕೇಂದ್ರೀಕರಿಸಿರುವ ಬಜೆಟ್. ಉದ್ಯೋಗ ಮತ್ತು ಕೌಶಲ್ಯಗಳಿಗೆ ಹೆಚ್ಚು ಮಹತ್ವ ನೀಡಿದ್ದೇವೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ 5 ವರ್ಷ ವಿಸ್ತರಣೆ ಮಾಡಲಾಗುವುದು ಎಂದು ಅವರು ಹೇಳಿದರು.
ಉದ್ಯೋಗ, ಕೌಶಲ್ಯಾವೃದ್ದಿ, ಆರ್ಥಿಕತೆ ಬೆಳವಣಿಗೆಗೆ ಪೂರಕ ಬಜೆಟ್ ಇದಾಗಿದೆ. ಶಿಕ್ಷಣ, ಉದ್ಯೋಗ, ಕೌಶಲ್ಯಾಭಿವೃದ್ದಿಗಾಗಿ 1.48 ಲಕ್ಷ ಕೋಟಿ ಮೀಸಲು ಇರಿಸಲಾಗುವುದು. ಕೃಷಿ ಕ್ಷೇತ್ರ, ಮಾನವ ಸಂಪನ್ಮೂಲ ಕ್ಷೇತ್ರಕ್ಕೆ ಒತ್ತು ನೀಡಲಾಗುವುದು. ರೈತರು, ಕಾರ್ಮಿಕರ ಅಭ್ಯುದಯಕ್ಕಾಗಿ ನಮ್ಮ ಸರ್ಕಾರ ಒತ್ತು ನೀಡಿದೆ ಎಂದು ಅವರು ಹೇಳಿದರು.
ಸಾಮಾಜಿಕ ನ್ಯಾಯ, ಮೂಲಸೌಕರ್ಯ ಅಭಿವೃದ್ದಿಗೆ ಆದ್ಯತೆ ನೀಡಲಾಗುವುದು. ವಿಕಸಿತ ಭಾರತಕ್ಕಾಗಿ ಬಜೆಟ್ ನಲ್ಲಿ ಆದ್ಯತೆ ನೀಡಲಾಗಿದರ. ಸೂಕ್ಷ್ಮ, ಸಣ್ಣ & ಮಧ್ಯಮ ಕೈಗಾರಿಗಳಿಗೆ ಪೂರಕವಾದ ಅಂಶಗಳು ಇವೆ ಎಂದು ಅವರು ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದರು.
1 ಕೋಟಿ ರೈತರಿಗೆ ನೈಸರ್ಗಿಕ ಕೃಷಿ ಮಾಡಲು ಅವಕಾಶ ಒದಗಿಸಲಾಗುವುದು.ರಾಜ್ಯಗಳ ಸಹಯೋಗದೊಂದಿಗೆ ಕೃಷಿಯಲ್ಲಿ ಡಿಜಿಟಲೀಕರಣ ವ್ಯವಸ್ಥೆ ಜಾರಿಗೊಳಿಸಲಾಗುವುದು. ದೇಶದ 100 ಜಿಲ್ಲೆಗಳಲ್ಲಿ ಡಿಜಿಟಲ್ ಬೆಳೆ ಸರ್ವೆ ಮಾಡಲಾಗುವುದು. 400 ಜಿಲ್ಲೆಗಳ 6 ಕೋಟಿ ರೈತರ ಆಯ್ಕೆ ಮಾಡಲಾಗುವುದು. ಎಣ್ಣೆ ಕಾಳುಗಳ ಉತ್ಪಾದನೆ, ಶೇಖರಣೆ ಮತ್ತು ಮಾರುಕಟ್ಟೆಗೆ ಆದ್ಯತೆ ಎಂದರು.
ಉದ್ಯೋಗ ಸೃಷ್ಟಿಗಾಗಿ ಉತ್ಪಾದನಾ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು.ಸಹಕಾರ ವಲಯಕ್ಕೆ ರಾಷ್ಟ್ರೀಯ ಸಹಕಾರ ನೀತಿ ರೂಪಿಸಲಾಗುವುದು ಎಂದ ಅವರು, ಕೃಷಿ ವಲಯಕ್ಕೆ 1.52 ಲಕ್ಷ ಕೋಟಿ ರೂ. ಅನುದಾನ. 25 ಸಾವಿರ ವಿದ್ಯಾರ್ಥಿಗಳಿಗೆ ಮಾಡೆಲ್ ಸ್ಕಿಲ್ ಸಾಲ ನೀಡಲಾಗುವುದು. 7.5 ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯ ಸಿಗಲಿದೆ. 1 ಲಕ್ಷ ವಿದ್ಯಾರ್ಥಿಗಳಿಗೆ ಶೇ. 3ರ ಬಡ್ಡಿ ದರದಲ್ಲಿ ಇ- ವೋಚರ್ಸ್ ಒದಗಿಸಲಾಗುವುದು. ಉನ್ನತ ಶಿಕ್ಷಣಕ್ಕೆ 10 ಲಕ್ಷ ರೂ. ನೆರವು ನೀಡಲಾಗುವುದು. ದೇಶದೊಳಗೆ ಉನ್ನತ ಶಿಕ್ಷಣಕ್ಕೆ ಸೌಲಭ್ಯ ಒದಗಿಸಲಾಗುವುದು ಎಂದು ಅವರು ಹೇಳಿದರು.