ವಿಶಾಖಪಟ್ಟಣ: ಕರ್ನೂಲ್ ಬಸ್ ದುರಂತ ಮಾಸುವ ಮುನ್ನವೇ ಆಂಧ್ರಪ್ರದೇಶದಲ್ಲಿ ಮತ್ತೊಂದು ಭೀಕರ ಬಸ್ ಅಪಘಾತ ಸಂಭವಿಸಿದೆ. ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ಚಿಂತೂರು ಘಾಟ್ ರಸ್ತೆಯಲ್ಲಿ ಬಸ್ ವೊಂದು ಕಣಿವೆಗೆ ಉರುಳಿ ಬಿದ್ದ ಪರಿಣಾಮ 15 ಮಂದಿ ಸ್ಥಳದಲ್ಲೇ ಅಸುನೀಗಿದ್ದು, 22 ಮಂದಿ ಗಾಯಗೊಂಡಿದ್ದಾರೆ. ಚಿಂತೂರಿನಿಂದ ತೆಲಂಗಾಣ ರಾಜ್ಯಕ್ಕೆ ತೆರಳುತ್ತಿದ್ದ ಈ ಬಸ್‌ನಲ್ಲಿ 37 ಪ್ರಯಾಣಿಕರಿದ್ದರು ಎಂದು ತಿಳಿದು ಬಂದಿದೆ.
ಘಾಟ್ ರಸ್ತೆಯ ದುರ್ಗಾ ದೇವಸ್ಥಾನದ ಸಮೀಪ ಮುಂಜಾನೆ 4:30 ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ದಟ್ಟ ಮಂಜು ಆವರಿಸಿದ್ದರಿಂದ ಚಾಲಕನಿಗೆ ರಸ್ತೆ ತಿರುವು ಕಾಣಿಸದೇ ಇದ್ದುದರಿಂದ ಬಸ್ ಕಂದಕಕ್ಕೆ ಉರುಳಿರಬಹುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಬರ್ದಾರ್ ಹೇಳಿದ್ದಾರೆ.
ವಿಘ್ನೇಶ್ವರ ಟ್ರಾವಲ್ಸ್ ಗೆ ಸೇರಿದ್ದ ಈ ಬಸ್ಸಿನಲ್ಲಿದ್ದ ಬಹುತೇಕ ಪ್ರಯಾಣಿಕರು ಚಿಂತೂರಿನಿಂದ ತೆಲಂಗಾಣದ ಭದ್ರಾಚಲಂನಲ್ಲಿರುವ ಶ್ರೀ ರಾಮ ದೇವಸ್ಥಾನಕ್ಕೆ ಹೊರಟಿದ್ದರು. ಈ ದುರಂತಕ್ಕೆ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಅಗತ್ಯ ಕ್ರಮಗಳನ್ನು ಕೈಗೊಳ್ಲೂವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಎರಡು ತಿಂಗಳ ಹಿಂದೆಯಷ್ಟೇ ಹೈದರಾಬಾದ್‌ನಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಟ್ರಾವಲ್ಸ್ ಗೆ ಸೇರಿದ್ದ ಸ್ಲೀಪರ್ ಬಸ್ ಕರ್ನೂಲ್ ಸಮೀಪ ಹೊತ್ತಿ ಉರಿದು 20 ಮಂದಿ ಸಜೀವ ದಹನವಾಗಿದ್ದರು.

