“ನೈಟ್ ಲೈಫ್ ಮಹಾತ್ಮೆ”

Most read

ನೈಟ್ ಲೈಫ್ ಸಂಸ್ಕೃತಿಯು ಮಹಾನಗರಗಳಲ್ಲಿ ಬದುಕಿರುವ ನಮ್ಮೆಲ್ಲರ ಮನೆಯ ಡ್ರಾಯಿಂಗ್ ರೂಮಿಗೆ, ಬೆಡ್ರೂಮಿಗೂ ದಾಳಿಯಿಟ್ಟಿದೆ ಎಂದು ನಾನು ನಿಸ್ಸಂಕೋಚವಾಗಿ ಹೇಳಬಲ್ಲೆ. ಇದರ ಹೊಸ ಆವೃತ್ತಿಯೆಂಬಂತೆ ಸದ್ಯ ಒ.ಟಿ.ಟಿ ವೇದಿಕೆಗಳು ನಮ್ಮೆಲ್ಲರ ಬದುಕನ್ನು ಆವರಿಸಿಕೊಂಡಿವೆ. ಭಾರತದಲ್ಲಿ ನಿಧಾನವಾಗಿಯೇ ಆರಂಭವಾದ ಒ.ಟಿ.ಟಿ ವೇದಿಕೆಗಳು ಕೋವಿಡ್ ಕಾಲದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡು ಎಲ್ಲರ ಸ್ಮಾರ್ಟ್‍ಫೋನುಗಳಲ್ಲೂ ನುಸುಳಿಕೊಂಡವು. ಈ ಅವಧಿಯಲ್ಲಿ ದಿನವಿಡೀ ಚಲನಚಿತ್ರಗಳನ್ನು, ವೆಬ್ ಸೀರೀಸ್ ಗಳನ್ನು ತಾಸುಗಟ್ಟಲೆ ವೀಕ್ಷಿಸುವುದು ಹೆಚ್ಚಿನವರಿಗೆ ಸಾಮಾನ್ಯ ಸಂಗತಿಯಾಗಿಬಿಟ್ಟಿತು. ಹೀಗೆ ಸದ್ದಿಲ್ಲದೆ ಶುರುವಾದ ಹೊಸ ಬಗೆಯ ಮನರಂಜನೆಯೊಂದು ಇನ್ನಿಲ್ಲದ ವೇಗದಲ್ಲಿ ಗೀಳಾಗಿ ಬದಲಾಗಿದ್ದು ಹೀಗೆ ಪ್ರಸಾದ್‌ ನಾಯ್ಕ್‌, ದೆಹಲಿ

ಆಗೆಲ್ಲ ನಮ್ಮೂರು ಬಹಳ ಬೇಗ ನಿದ್ದೆಗೆ ಜಾರುತ್ತಿತ್ತು.

ಗತಕಾಲವೇನಲ್ಲ. ಒಂದಿಪ್ಪತ್ತು ವರ್ಷಗಳ ಹಿಂದೆಯಷ್ಟೇ. ನಮ್ಮ ಬಾಲ್ಯ-ಹರೆಯದ ದಿನಗಳಲ್ಲಿ ರಾತ್ರಿಯ ಹತ್ತು-ಹತ್ತೂವರೆಗೆಲ್ಲ ನಾವು ಹಾಸಿಗೆ ಸೇರುತ್ತಿದ್ದೆವು. ಅದು ನಮಗಿಷ್ಟವಿರಲಿ, ಇಲ್ಲದಿರಲಿ. ನಮ್ಮ ಮನೆಗಳಲ್ಲಿ ಅದೊಂದು ಅಘೋಷಿತ ನಿಯಮವೇ ಆಗಿತ್ತು. ನಾವು ಅಂತಲ್ಲ, ನಮ್ಮೂರಿನ ಬಹುತೇಕ ಎಲ್ಲಾ ಮನೆಗಳಲ್ಲಿ ಬದುಕು ಇದ್ದಿದ್ದೇ ಹೀಗೆ. ಶಾಲಾ ವಾರ್ಷಿಕೋತ್ಸವ, ನಾಟಕ, ಯಕ್ಷಗಾನ, ಭೂತ ಕೋಲ, ನಾಗಮಂಡಲ… ಇತ್ಯಾದಿಗಳನ್ನು ಹೊರತುಪಡಿಸಿದರೆ ಊರ ಬೀದಿಯಲ್ಲಿ ಅಪರಾತ್ರಿಯ ಹೊತ್ತಿನಲ್ಲಿ ಭೂತಗಳಂತೆ ಸುಮ್ಮನೆ ಅಡ್ಡಾಡುವ ಅಭ್ಯಾಸಗಳು ಹೆಚ್ಚಿನ ಮಂದಿಗಿರಲಿಲ್ಲ. ಆ ವರ್ಗದ ಮಂದಿಯೇನಾದರೂ ಊರಿನಲ್ಲಿ ಒಬ್ಬಿಬ್ಬರಿದ್ದರೆ ಅವರನ್ನು ನಿಶಾಚರಿಗಳೆಂದೋ, ಪ್ರೇತಗಳೆಂದೋ, ಪಿಶಾಚಿಗಳೆಂದೋ ಅಡ್ಡಹೆಸರು ಹಿಡಿದು ಕರೆಯುವ ರೂಢಿಯೂ ಇರುತ್ತಿತ್ತು.   

ಇಂತಿಪ್ಪ ಹಿನ್ನೆಲೆಯಲ್ಲಿ ಬೆಳೆದ ನನಗೆ ಅಂದಾಜು ಒಂದು ದಶಕದ ಹಿಂದೆ “ನೈಟ್ ಲೈಫ್” ಎಂಬ ಪದವೊಂದು ಹೊಸದಾಗಿ ಸಿಕ್ಕಾಗ ಅಚ್ಚರಿಯೇ ಆಗಿತ್ತು. ಈವರೆಗೆ ನೈಟ್ ಒಂದೇ ಗೊತ್ತಿದ್ದ ನನಗೆ, ಈ ನೈಟಿನಲ್ಲಿ ನಾನು ಕಂಡಿಲ್ಲದ ಲೈಫು ಕೂಡ ಇದೆ ಎಂದು ಗೊತ್ತಾಗಿದ್ದು ನಿಧಾನವಾಗಲೇ. ಅಲ್ಲದೆ ಇವೆಲ್ಲಾ ಮಹಾನಗರಗಳಲ್ಲಿ ಬಲು ಸಾಮಾನ್ಯ ಅನ್ನುವಂಥದ್ದು ಅದರ ಜೊತೆಗೇ ಬಂದಿದ್ದ ಹೊಸ ಜ್ಞಾನೋದಯ. ನಾನು ಮತ್ತು ಮಹಾನಗರಿಯ ನೈಟ್ ಲೈಫ್ ಮೊದಲ ಬಾರಿಗೆ ಕೈಕುಲುಕಿದ್ದು ಹೀಗೆ. 

ಮಹಾನಗರಗಳಲ್ಲಿ ನೈಟ್ ಲೈಫ್ ಹುಡುಕಲು ಹೊರಟವರಿಗೆ ತಮ್ಮ ಅಭಿರುಚಿಗಳಿಗನುಗುಣವಾಗಿ ಹಲವು ಸಂಗತಿಗಳು ಸಿಗಬಹುದು. ಅವುಗಳನ್ನು ತಮ್ಮದೇ ದೃಷ್ಟಿಕೋನ, ಜೀವನಾನುಭವಗಳ ಹಿನ್ನೆಲೆಯಲ್ಲಿ ವಿವಿಧ ರೀತಿಗಳಲ್ಲಿ ವಿಶ್ಲೇಷಿಸಬಹುದು ಕೂಡ. ಅವುಗಳನ್ನು ಮೆಚ್ಚುವುದು, ಟೀಕಿಸುವುದು ಬೇರೆ ಮಾತು. ಅದೇನೇ ಇರಲಿ. ನನ್ನಂತಹ ಕುತೂಹಲಿಗಳಿಗೆ ಕತೆಗಳಂತೂ ಸಿಕ್ಕೇಸಿಗುತ್ತವೆ. ಅಸಲಿಗೆ ಸೂರ್ಯಾಸ್ತವಾದ ನಂತರ ಮಹಾನಗರದ ಮತ್ತೊಂದು ಮುಖವೊಂದು ನಿಧಾನವಾಗಿ ಅರಳಿಕೊಳ್ಳುವುದನ್ನು ನೋಡುವುದೇ ಒಂದು ಸೊಗಸು. ಕತ್ತಲಿನ ಈ ಜಗತ್ತಿನಲ್ಲಿ ಅದೆಷ್ಟು ಸಂಗತಿಗಳು ನಮ್ಮ ಕಣ್ಣಿಗೆ ಬೀಳುತ್ತವೋ, ಅದಕ್ಕಿಂತಲೂ ಹೆಚ್ಚಿನದ್ದು ನಮ್ಮ ಕಣ್ಣೆದುರಿಗಿದ್ದೂ ನಮಗೆ ಕಂಡಿರುವುದಿಲ್ಲ. ಹೀಗಾಗಿ ಮಹಾನಗರಿಗಳಲ್ಲಿ ನೈಟ್ ಲೈಫ್ ಎಂದರೆ ಕಣ್ಣುಕೋರೈಸುವಷ್ಟೇ ನಿಗೂಢ ಲೋಕವೂ ಹೌದು.

ನೈಟ್ ಲೈಫ್ ಎಂಬುದು ಒಂದು ಸ್ಥೂಲ ಅರ್ಥವಿರುವ ಪದವಾದರೂ ಅದು ಹೆಚ್ಚಾಗಿ ಗುರುತಿಸಿಕೊಳ್ಳುವುದು ಮನರಂಜನೆಯ ಹಿನ್ನೆಲೆಯಲ್ಲಿ. ಮಹಾನಗರಗಳು ವಿಕಾಸವಾದಂತೆ ನಮ್ಮಲ್ಲಿ ಕ್ಲಬ್ಬು, ಪಬ್ಬು, ಪಾರ್ಟಿಗಳನ್ನಷ್ಟೇ ನೈಟ್ ಲೈಫ್ ಎಂದು ಕರೆಯುವ ರೂಢಿಯೊಂದು ಹುಟ್ಟಿ ಜನಪ್ರಿಯವಾಯಿತು. ನೈಟ್ ಲೈಫ್ ಆಯಾಮಗಳು ಹೆಚ್ಚು ಸಕ್ರಿಯವಾಗಿರುವ ಮಹಾನಗರಗಳು ಉಳಿದ ನಗರಗಳಿಗಿಂತ ಹೆಚ್ಚು ಜನಪ್ರಿಯವೂ ಆದವು. ಉದಾಹರಣೆಗೆ ಅಗಲುಬಗಲಿನಲ್ಲೇ ಇರುವ ದೆಹಲಿ ಮತ್ತು ಗುರುಗ್ರಾಮಗಳಂತಹ ಶಹರಗಳಲ್ಲಿ ನೈಟ್ ಲೈಫ್ ಅನ್ನು ಎಂಜಾಯ್ ಮಾಡಲೆಂದೇ ಆಸಕ್ತರು ಪಕ್ಕದ ನಗರಗಳಿಗೆ ಧಾವಿಸುವುದುಂಟು. ಭಾರತದ ಶಾಂಘೈ ಎಂದೇ ಹೆಸರಾಗಿರುವ ಗುರುಗ್ರಾಮವು ದೆಹಲಿ ಸೇರಿದಂತೆ ಅಕ್ಕಪಕ್ಕದ ಭಾಗದ ಜನರನ್ನು, ಕೇವಲ ನೈಟ್ ಲೈಫ್ ಲೇಬಲ್ಲಿನ ಆಕರ್ಷಣೆಯಲ್ಲಿ ತನ್ನೆಡೆಗೆ ಆಕರ್ಷಿಸುತ್ತಿರುವುದು ಇಲ್ಲಿಯ ಗಮನಾರ್ಹ ಅಂಶ.

ರಾತ್ರಿಗಳಲ್ಲಿ ಸಕ್ರಿಯವಾಗಿರುವ ವ್ಯಕ್ತಿಗಳನ್ನು ಇಂಗ್ಲಿಷಿನಲ್ಲಿ “ನೈಟ್ ಔಲ್ಸ್” ಎಂದು ಕರೆಯುವುದುಂಟು. ಸರಳವಾಗಿ ಹೇಳುವುದಾದರೆ ಗೂಬೆಗಳು. ದಿಲ್ಲಿಯಲ್ಲಿದ್ದ ನನ್ನೊಬ್ಬ ಮಿತ್ರರಿಗೆ ಗೂಬೆಗಳೆಂದರೆ ಎಲ್ಲಿಲ್ಲದ ಮೋಹವಿತ್ತು. ಮೈಮೇಲಿನ ಟ್ಯಾಟೂ ಇಂದ ಹಿಡಿದು ವರ್ಣಚಿತ್ರಗಳು, ಡೈರಿಯ ಮುಖಪುಟಗಳು, ಕೀ-ಚೈನುಗಳು… ಹೀಗೆ ಎಲ್ಲದರಲ್ಲೂ ಗೂಬೆಗಳಿದ್ದರೇನೇ ಅವರಿಗೆ ಸಮಾಧಾನ. ಗೂಬೆಗಳು ಈ ಜಗತ್ತಿನ ಉತ್ಕೃಷ್ಟ ಜೀವಿಗಳು ಎಂಬುದು ಅವರ ಅಭಿಪ್ರಾಯವಂತೆ. ನಮ್ಮ ಕಡೆ ಗೂಬೆ ಎನ್ನುವುದಕ್ಕೆ ಬೇರೆಯೇ ಅರ್ಥವಿದೆ ಎಂದು ಹೇಳಿದಾಗ ಅವರು ನಕ್ಕಿದ್ದರು. ಇನ್ನು ಈ ಅರ್ಥದಲ್ಲಿ ಮಹಾನಗರಗಳಲ್ಲಿರುವ ಅರ್ಧಕ್ಕರ್ಧ ಯುವಜನರು ಗೂಬೆಗಳೇ ಎನ್ನುವುದು ಅವರ ವಾದ. 

ಇನ್ನು ನೈಟ್ ಲೈಫ್ ಎನ್ನುವುದು ಅಪರಾತ್ರಿಯ ಲೋಕವಾದ್ದರಿಂದ ಇಲ್ಲಿ ಕಾಣಸಿಗುವ ವ್ಯಕ್ತಿಗಳೂ, ಸಂದರ್ಭಗಳೂ ಕೊಂಚ ವಿಭಿನ್ನವಾಗಿರುತ್ತವೆ. ಹರಿಯಾಣಾದ ಗುರುಗ್ರಾಮದಲ್ಲಿರುವ ಒಂದು ಕುಖ್ಯಾತ ಶಾಪಿಂಗ್ ಮಾಲ್ ಸಂಜೆ ಏಳರ ನಂತರ ಬೇರೆಯದೇ ರೂಪವನ್ನು ತನ್ನ ಮೇಲೆ ಆವಾಹಿಸಿಕೊಳ್ಳುತ್ತದೆ. ನೈಟ್ ಕ್ಲಬ್ ಹೆಸರಿನಲ್ಲಿ ಇಲ್ಲೇನು ನಡೆಯುತ್ತದೆ ಎಂಬುದು ಆಸುಪಾಸಿನ ಎಲ್ಲರಿಗೂ ಗೊತ್ತಿರುವ ಒಂದು ಓಪನ್ ಸೀಕ್ರೆಟ್. ಈ ಬಗ್ಗೆ ಏನೂ ತಿಳಿಯದವರಿಗೆ ಮಾತ್ರ ಅಚಾನಕ್ಕಾಗಿ ಇಂತಹ ದೃಶ್ಯಗಳು ಕಾಣಸಿಕ್ಕಾಗ ಗಲಿಬಿಲಿಯಾಗುವುದು ಸಹಜ. ತಂಬಾಕು, ಮದ್ಯಪಾನ ಮತ್ತು ಮಾದಕದ್ರವ್ಯಗಳು ದಿನಗಳೆದಂತೆ ಹೆಚ್ಚು “ಕೂಲ್” ಆಗುತ್ತಿರುವ ಇಂದಿನ ಸಂದರ್ಭಗಳಲ್ಲಿ, ಹೊಸಬಗೆಯ ಪ್ರಯೋಗಗಳಿಗೂ “ನೈಟ್ ಲೈಫ್” ಎನ್ನುವುದು ಹೊಸ ಪ್ರಯೋಗಾಲಯಗಳಾಗಿಬಿಟ್ಟಿವೆ.

ಸಿಕ್ಸ್‌ಟೀನ್”

2013 ರಲ್ಲಿ ತೆರೆಗೆ ಬಂದ ರಾಜ್ ಪುರೋಹಿತ್ ನಿರ್ದೇಶನದ “ಸಿಕ್ಸ್‌ಟೀನ್” ಚಿತ್ರದಲ್ಲೂ ಇಂಥದ್ದೊಂದು ಸೂಕ್ಷ್ಮ ಎಳೆ ಬರುತ್ತದೆ. ತನ್ನ ಹರೆಯದ ಮಗಳು ರಾತ್ರಿಯಾದಂತೆ ಗೆಳೆಯರೊಂದಿಗೆ ಕ್ಲಬ್ಬುಗಳಿಗೆ ಹೋಗುತ್ತಾಳೆ ಎನ್ನುವುದು ಅಪ್ಪನಿಗೆ ತಿಳಿದಿರುವುದಿಲ್ಲ. ಚಂದದ ಕುಟುಂಬವೊಂದು ಜೊತೆಗಿದ್ದರೂ ಅಪ್ಪ ವಿವಾಹದಾಚೆಗೆ ವಿಚಿತ್ರ ಲೈಂಗಿಕ ಸಾಹಸಗಳಲ್ಲಿ ತೊಡಗಿದ್ದಾನೆ ಎಂಬುದು ಮಗಳಿಗೆ ತಿಳಿದಿರುವುದಿಲ್ಲ. ಪರಿಸ್ಥಿತಿಯು ಹೀಗಿರುವಾಗ ಪ್ರತಿಷ್ಠಿತ ನೈಟ್ ಕ್ಲಬ್ಬೊಂದರಲ್ಲಿ ಬಾರ್ ಡ್ಯಾನ್ಸರ್ ಗಳ ಮೈಸವರುತ್ತಾ ಕುಣಿಯುತ್ತಿರುವ ತನ್ನ ಮಧ್ಯವಯಸ್ಕ ತಂದೆಯನ್ನು ಆಕಸ್ಮಿಕವಾಗಿ ಕಂಡು ಮಗಳಿಗೆ ಹೇಸಿಗೆಯಾಗುತ್ತದೆ. ಮುಂದೆ ಈ ಬಗ್ಗೆ ಅವಳು ತನ್ನ ತಾಯಿಯ ಬಳಿ ಸಿಟ್ಟಿನಿಂದ ಹೇಳಿಕೊಂಡಾಗ “ನಾವಿಬ್ಬರೂ ಒಂದು ಓಪನ್ ಮ್ಯಾರೇಜಿನಲ್ಲಿದ್ದೇವೆ ಮತ್ತು ಪರಸ್ಪರರ ಲೈಂಗಿಕ ಜೀವನದಲ್ಲಿ ಮೂಗು ತೂರಿಸುವುದಿಲ್ಲವೆಂದು ಅಲಿಖಿತ ಒಪ್ಪಂದ ಮಾಡಿಕೊಂಡಿದ್ದೇವೆ” ಎಂಬ ಆಘಾತಕಾರಿ ಸತ್ಯವೊಂದು ತಾಯಿಯಿಂದ ಹೊರಬೀಳುತ್ತದೆ. ಹೀಗೆ ತನ್ನದೇ ಲೈಂಗಿಕತೆಯನ್ನು ಹೊಸದಾಗಿ, ನಿಧಾನವಾಗಿ ಒಪ್ಪಿಕೊಳ್ಳುತ್ತಿರುವ ಹರೆಯದ ಹೆಣ್ಣುಮಗಳೊಬ್ಬಳು, ತನ್ನ ಹೆತ್ತವರ ಲೈಂಗಿಕ ಜೀವನದಲ್ಲಿರುವ ಸಂಕೀರ್ಣತೆಯನ್ನು ಹೇಗೆ ಒಪ್ಪಿಕೊಳ್ಳಬೇಕೆಂದು ತಿಳಿಯದೆ ಕಂಗಾಲಾಗುತ್ತಾಳೆ. ಎಲ್ಲವೂ ವ್ಯವಸ್ಥಿತವಾಗಿದೆ ಎಂಬಂತೆ ಹೊರಜಗತ್ತಿಗೆ ಕಾಣುವ ಕೌಟುಂಬಿಕ ಸಂಬಂಧಗಳೆಂಬ ಗೋಡೆಯಲ್ಲಿ ಹೀಗೆ ಬಿರುಕುಗಳು ಹುಟ್ಟಿಕೊಳ್ಳುತ್ತಾ ಹೋಗುತ್ತವೆ..

ಈ ಬಗೆಯ ಕತೆಗಳು ತೀರಾ ಸಿನಿಮೀಯವೆಂಬಂತೆ ಮೇಲ್ನೋಟಕ್ಕೆ ಕಂಡರೂ, ಇಂತಹ ವಿಕ್ಷಿಪ್ತ ಒಳಸುಳಿಗಳು ಮಹಾನಗರಗಳಲ್ಲಿ ಕಾಣಸಿಗುವ ನೈಟ್ ಲೈಫಿನಲ್ಲಿರುತ್ತವೆ ಎಂಬುದು ಒಪ್ಪಿಕೊಳ್ಳಲೇಬೇಕಾದ ಸತ್ಯ. ಕೆಲ ವರ್ಷಗಳ ಹಿಂದೆ ಕತೆಗಳಿಗಾಗಿ ಪಹಾಡ್ ಗಂಜಿನಲ್ಲಿ ಅಲೆದಾಡುತ್ತಿದ್ದಾಗ ಅಮೆರಿಕನ್ ಪ್ರವಾಸಿಯೊಬ್ಬನಿಂದ ಕಶ್ಮೀರಿ ಯುವಕನೊಬ್ಬನ ಪರಿಚಯವಾಗಿತ್ತು. ಆರಡಿಗಿಂತಲೂ ಹೆಚ್ಚು ಎತ್ತರವಾಗಿದ್ದ ಈ ಸ್ಫುರದ್ರೂಪಿ ಕಶ್ಮೀರಿ ಯುವಕನಿಗೆ ಶಹರದಲ್ಲಿರುವ ನೈಟ್ ಕ್ಲಬ್ಬುಗಳನ್ನು ಸುತ್ತುವುದೇ ಒಂದು ಫುಲ್ ಟೈಂ ಗೀಳಾಗಿಬಿಟ್ಟಿತ್ತು. ವಿಚಿತ್ರವೆಂದರೆ ಬಾರ್ ಡ್ಯಾನ್ಸರ್ ಗಳ ಹತ್ತಿರಕ್ಕೂ ಸುಳಿಯದ ಈತ, ಇಲ್ಲಿಗೆ ಬರುವ ಶ್ರೀಮಂತ ಹೆಂಗಸರನ್ನೇ ಮಾತಾಡಿಸುತ್ತಾ, ಅವರ ಸ್ನೇಹ ಗಳಿಸುತ್ತಾ, ಅವರ ದೀರ್ಘಕಾಲದ ಒಡನಾಡಿಯಾಗುತ್ತಿದ್ದ. ಅಂದಹಾಗೆ ಈ ಕ್ಯಾಸನೋವಾನ ಲೀಗಿನಲ್ಲಿ ಹರೆಯದ ಹುಡುಗಿಯರಿಂದ ಹಿಡಿದು ವಿವಾಹಿತ, ಮಧ್ಯವಯಸ್ಕ ಹೆಂಗಸರೂ ಇರುತ್ತಿದ್ದರು. ಚಿಕ್ಕದೊಂದು ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಈತ, ನಿರಂತರವಾಗಿ ಅದ್ಹೇಗೆ ವಿಲಾಸಿ ಬದುಕನ್ನು ನಡೆಸುತ್ತಿದ್ದ ಎಂಬುದು ಅಲ್ಲಿಗೆ ಬಯಲಾಗಿತ್ತು.

ಹಾಗಂತ ನೈಟ್ ಲೈಫ್ ಪರಿಕಲ್ಪನೆಯೆಂದರೆ ಇವಿಷ್ಟಕ್ಕೆ ಮಾತ್ರ ಸೀಮಿತವೇ? ಸಮಾಜಶಾಸ್ತ್ರಜ್ಞರು ಈ ಬಗ್ಗೆ ಏನನ್ನುತ್ತಾರೋ ಗೊತ್ತಿಲ್ಲ. ಆದರೆ ನೈಟ್ ಲೈಫ್ ಸಂಸ್ಕೃತಿಯು ಮಹಾನಗರಗಳಲ್ಲಿ ಬದುಕಿರುವ ನಮ್ಮೆಲ್ಲರ ಮನೆಯ ಡ್ರಾಯಿಂಗ್ ರೂಮಿಗೆ, ಬೆಡ್ರೂಮಿಗೂ ದಾಳಿಯಿಟ್ಟಿದೆ ಎಂದು ನಾನು ನಿಸ್ಸಂಕೋಚವಾಗಿ ಹೇಳಬಲ್ಲೆ. ಹಿಂದೆಲ್ಲ ಅಮೆರಿಕಾದಲ್ಲಿ ಟಿ.ವಿ ನೋಡುವ ರೂಢಿಯನ್ನು ಒಂದು ಗೀಳೆಂದು ಹೇಳಲಾಗುತ್ತಿತ್ತು. ಮದ್ಯಪಾನ ಮತ್ತು ಮಾದಕ ದ್ರವ್ಯಗಳ ಸೇವನೆಯಂತೆ ಇದೂ ಕೂಡ ಒಂದು ಬಗೆಯ ವ್ಯಸನ ಎಂದು ಪರಿಗಣಿಸಲಾಗುತ್ತಿತ್ತು. ಅಮೆರಿಕಾದಲ್ಲಿರುವ ಬಹುತೇಕ ಮಂದಿ ದಿನಕ್ಕೆ ಎರಡರಿಂದ ನಾಲ್ಕು ತಾಸುಗಳ ಕಾಲ (ವಿಶೇಷವಾಗಿ ಸಂಜೆಯ ನಂತರ) ಟಿ.ವಿ ಎದುರು ಕೂರುತ್ತಿದ್ದ ಜೀವನ ಶೈಲಿಯನ್ನು ಹಲವು ಸಂಶೋಧನಾ ಪ್ರಬಂಧಗಳು ಗಂಭೀರವಾಗಿ ಉಲ್ಲೇಖಿಸಿವೆ ಕೂಡ.

“ಬಿಂಜ್ ವಾಚಿಂಗ್”

ಇದರ ಹೊಸ ಆವೃತ್ತಿಯೆಂಬಂತೆ ಸದ್ಯ ಒ.ಟಿ.ಟಿ ವೇದಿಕೆಗಳು ನಮ್ಮೆಲ್ಲರ ಬದುಕನ್ನು ಆವರಿಸಿಕೊಂಡಿವೆ. ಭಾರತದಲ್ಲಿ ನಿಧಾನವಾಗಿಯೇ ಆರಂಭವಾದ ಒ.ಟಿ.ಟಿ ವೇದಿಕೆಗಳು ಕೋವಿಡ್ ಕಾಲದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡು ಎಲ್ಲರ ಸ್ಮಾರ್ಟ್‍ಫೋನುಗಳಲ್ಲೂ ನುಸುಳಿಕೊಂಡವು. ಈ ಅವಧಿಯಲ್ಲಿ ದಿನವಿಡೀ ಚಲನಚಿತ್ರಗಳನ್ನು, ವೆಬ್ ಸೀರೀಸ್ ಗಳನ್ನು ತಾಸುಗಟ್ಟಲೆ ವೀಕ್ಷಿಸುವುದು ಹೆಚ್ಚಿನವರಿಗೆ ಸಾಮಾನ್ಯ ಸಂಗತಿಯಾಗಿಬಿಟ್ಟಿತು. “ಬಿಂಜ್ ವಾಚಿಂಗ್” ಎಂಬ ಪದವು ಎಲ್ಲೆಲ್ಲೂ ಓಡಾಡತೊಡಗಿತು. ಡಿಜಿಟಲ್ ಕಾರ್ಯಕ್ರಮಗಳನ್ನು (ಸಿನೆಮಾ/ಧಾರಾವಾಹಿ/ವೆಬ್ ಸೀರೀಸ್/ಸಾಕ್ಷ್ಯಚಿತ್ರ/ವೀಡಿಯೋ/ಟಿವಿ ಶೋ) ಒಂದರ ಹಿಂದೊಂದರಂತೆ ತಾಸುಗಟ್ಟಲೆ ವೀಕ್ಷಿಸುತ್ತಾ ಹೋಗುವ ಚಾಳಿಯನ್ನು ಬಿಂಜ್ ವಾಚಿಂಗ್ ಎಂದು ಕರೆಯಲಾಗುತ್ತದೆ. ಹೀಗೆ ಸದ್ದಿಲ್ಲದೆ ಶುರುವಾದ ಹೊಸ ಬಗೆಯ ಮನರಂಜನೆಯೊಂದು ಇನ್ನಿಲ್ಲದ ವೇಗದಲ್ಲಿ ಗೀಳಾಗಿ ಬದಲಾಗಿದ್ದು ಹೀಗೆ.

ದ ಹಾನ್ಸ್ ಇಂಡಿಯಾದ ಪ್ರಕಟಿತ ಲೇಖನವೊಂದರಲ್ಲಿ, ದಿನರಾತ್ರಿಗಳ ಪರಿವೆಯಿಲ್ಲದೆ ಒ.ಟಿ.ಟಿ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿದ್ದ ದೆಹಲಿ ಮೂಲದ 23 ವರ್ಷದ ಯುವಕನೊಬ್ಬನಿಗೆ ನಿದ್ರಾಹೀನತೆಯ ಲಕ್ಷಣಗಳು ಹೊಸದಾಗಿ ಕಂಡಿರುವ ಬಗ್ಗೆ ಉಲ್ಲೇಖಿಸಲಾಗಿದೆ. ರಾಜಸ್ಥಾನದ ಮೋಹನ್ ಲಾಲ್ ಸುಖಾಡಿಯಾ ವಿಶ್ವದ್ಯಾಲಯದ, ಮನಃಶಾಸ್ತ್ರ ವಿಭಾಗದ ತಜ್ಞರು ಇಂದಿನ ದಿನಗಳಲ್ಲಿ ಹರೆಯದ ಮಕ್ಕಳಲ್ಲಿ ಮತ್ತು ಯುವಜನರಲ್ಲಿ ಹೆಚ್ಚುತ್ತಿರುವ ಒಬ್ಬಂಟಿತನ, ಸಂವಹನ ಕೌಶಲದ ಕೊರತೆ ಮತ್ತು ಏಕಾಗ್ರತೆಯ ಕೊರತೆಗಳಿಗೆ “ಬಿಂಜ್ ವಾಚಿಂಗ್” ಕಾರಣವೆಂದು ತಮ್ಮ ಸಂಶೋಧನಾ ಪ್ರಬಂಧದಲ್ಲಿ ಉಲ್ಲೇಖಿಸಿದ್ದಾರೆ. ನವೆಂಬರ್ 2023 ರಲ್ಲಿ ದ ಫೈನಾನ್ಷಿಯಲ್ ಎಕ್ಸ್‌ಪ್ರೆಸ್ ಪ್ರಕಟಿಸಿರುವ ವರದಿಯ ಪ್ರಕಾರ 48 ಕೋಟಿಗೂ ಹೆಚ್ಚಿನ ಭಾರತೀಯ ಬಳಕೆದಾರರು ಒ.ಟಿ.ಟಿ ವೇದಿಕೆಗಳಲ್ಲಿ ವೀಕ್ಷಕರಾಗಿದ್ದಾರೆ. ಇನ್ನು ಮುಂಬಯಿ, ದೆಹಲಿ ಮತ್ತು ಬೆಂಗಳೂರಿನಂತಹ ಮಹಾನಗರಗಳು ಈ ಪಟ್ಟಿಯ ಮುಂಚೂಣಿಯಲ್ಲಿವೆ.  

ನಮ್ಮ ಮಹಾನಗರಿಯ ಆಫೀಸು ಕೆಫೆಟೇರಿಯಾಗಳಲ್ಲಿ ಈಗೆಲ್ಲ ಬಹಳ ಚರ್ಚೆಯಾಗುವ ವಿಷಯವೆಂದರೆ ಬಿಡುಗಡೆಯಾಗಿರುವ ಹೊಸ ವೆಬ್ ಸೀರೀಸ್ ಗಳ ಬಗ್ಗೆ, ಅಲ್ಲಿರುವ ರೋಚಕ ಎಪಿಸೋಡುಗಳ ಬಗ್ಗೆ ಮತ್ತು ಅವುಗಳನ್ನು ಎಷ್ಟು ವೇಗವಾಗಿ ನೋಡಿ ಮುಂದಿನದಕ್ಕೆ ಹಾರಿದೆವು ಎನ್ನುವ ಬಗ್ಗೆ. ಹಿಂದೆಲ್ಲ ಹ್ಯಾಂಗೋವರ್ ಎನ್ನುವುದು ಹೊರವಲಯದ ನೈಟ್ ಲೈಫ್ ಪಾರ್ಟಿಗಳಿಗೆ ಮಾತ್ರ ಸೀಮಿತವಾಗಿತ್ತು. ಈಗ “ನೆಟ್-ಫ್ಲಿಕ್ಸ್ ಆಂಡ್ ಚಿಲ್” ಮಾಡಿದರೂ ಮರುದಿನ ಹ್ಯಾಂಗೋವರ್ ಕಾಡುತ್ತದೆ. ನಮ್ಮ ಬೆಡ್ರೂಮುಗಳ ಒಳಗೆ ಸೇರಿಕೊಂಡು ನಮ್ಮನ್ನು ಇಷ್ಟಿಷ್ಟೇ ತಿಂದುಹಾಕುತ್ತಿರುವ ನೈಟ್ ಲೈಫ್ ಕತೆಗಳಿವು. ಮುಖ್ಯವಾಹಿನಿಯ “ನೈಟ್ ಲೈಫ್” ಪರಿಕಲ್ಪನೆಯಡಿಯಲ್ಲಿ ದಾಖಲಾಗದ ಕರಾಳ ಕತೆಗಳು.

“ಲೈಫ್ ಗಾಗಿ ನೈಟ್ ಲೈಫ್” ಮತ್ತು “ನೈಟ್ ಲೈಫ್ ಗಾಗಿ ಲೈಫ್”; ನಮಗೆ ಯಾವುದು ಬೇಕು? ಆಯ್ಕೆ ನಮ್ಮ ನಿಮ್ಮೆಲ್ಲರದ್ದು!

ಪ್ರಸಾದ್‌ ನಾಯ್ಕ್‌, ದೆಹಲಿ

ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ಅಡಿಷನಲ್ ಚೀಫ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರಸಾದ್ ನಾಯ್ಕ್ ಪ್ರಸ್ತುತ ದೆಹಲಿ ಮಹಾನಗರದ ನಿವಾಸಿ. “ಹಾಯ್ ಅಂಗೋಲಾ”, “ಸಫಾ”, “ಸ್ನೇಹಗ್ರಾಮದ ಸಂಸತ್ತು” ಮತ್ತು “ಮರ ಏರಲಾರದ ಗುಮ್ಮ” ಇವರ ಪ್ರಕಟಿತ ಕೃತಿಗಳು. ಕನ್ನಡದ ಓದುಗರಿಗೆ ಕತೆಗಾರರಾಗಿ, ಅಂಕಣಕಾರರಾಗಿ ಮತ್ತು ಅನುವಾದಕರಾಗಿ ಪರಿಚಿತರು.

More articles

Latest article