ನೈಜೀರಿಯಾ ಪ್ರಜೆ ಬಂಧನ: ರೂ.3 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ

Most read

ಬೆಂಗಳೂರು: ನಿಷೇಧಿತ ಎಂಡಿಎಂಎ ಕ್ರಿಸ್ಟಲ್ ಮಾರಾಟ ಮಾಡುತ್ತಿದ್ದ ನೈಜೀರಿಯಾದ ಪ್ರಜೆ ಪೆಪೆ ಎಂಬಾತನನ್ನು ಅಮೃತಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಈತನಿಂದ ರೂ.3 ಕೋಟಿ ಮೌಲ್ಯದ ಮೂರು ಕೆ.ಜಿ ಎಂಡಿಎಂಎ ಕ್ರಿಸ್ಟಲ್ ಅನ್ನು ವಶಪಡಿಸಿಕೊಂಡಿದ್ದಾರೆ.

ದಾಸರಹಳ್ಳಿಯ ನಾರ್ಥ್ ಹಿಲ್ಸ್ ಶಾಲೆ ಹಿಂಭಾಗದ ನಿರ್ಜನ ಪ್ರದೇಶದಲ್ಲಿ ವಿದೇಶಿ ಪ್ರಜೆಯೊಬ್ಬ ಡ್ರಗ್ಸ್ ಮಾರಾಟ ಮಾಡುತ್ತಿರುವ ಖಚಿತ ಸುಳಿವು ಪೊಲೀಸರಿಗೆ ಸಿಕ್ಕಿತ್ತು. ಈ ಮಾಹಿತಿ ಆಧರಿಸಿ ದಾಳಿ ಮಾಡಿದಾಗ ಈತನ ಬಳಿ ಅಪಾರ ಪ್ರಮಾಣದ ಡ್ರಗ್ಸ್ ಪತ್ತೆಯಾಗಿದೆ. ಆರೋಪಿ ವಿರುದ್ಧ ಮಾದಕ ದ್ರವ್ಯ ನಿಗ್ರಹ ಕಾಯ್ದೆ ಅಡಿ (ಎನ್ ಡಿಪಿಎಸ್) ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.

2023ರಲ್ಲಿ ಪೆಪೆ ಕೆಲಸ ಅರಸಿಕೊಂಡು ಬೆಂಗಳೂರಿಗೆ ಬಂದಿದ್ದ. ಒಳ್ಳೆಯ ಕೆಲಸ ದೊರೆಯದ ಕಾರಣಕ್ಕೆ ಕಡಿಮೆ ಅವಧಿಯಲ್ಲಿ ಹೆಚ್ಚಿನ ಹಣ ಸಂಪಾದನೆ ಮಾಡುವ ಆಸೆಯಿಂದ ಡ್ರಗ್ಸ್ ಮಾರಾಟ ಮಾಡುವ ದಂಧೆಯನ್ನೇ ವೃತ್ತಿಯನ್ನಾಗಿ ಸ್ವೀಕರಿಸಿದ್ದ. ಬಾಣಸವಾಡಿಯ ಕಮ್ಮನಹಳ್ಳಿಯಲ್ಲಿ ವಾಸಿಸುತ್ತಿದ್ದ ಮತ್ತೊಬ್ಬ ವಿದೇಶಿ ಪ್ರಜೆಯಿಂದ ಆರೋಪಿಯು ಎಂಡಿಎಂಎ ಕ್ರಿಸ್ಟಲ್ ಅನ್ನು ಕಡಿಮೆ ಬೆಲೆಗೆ ಖರೀದಿಸಿ ಬಟ್ಟೆ ವ್ಯಾಪಾರ ಮಾಡುವ ನೆಪದಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಲೇಜು ವಿದ್ಯಾರ್ಥಿಗಳು, ಸಾಫ್ಟ್ ವೇರ್ ಉದ್ಯೋಗಿಗಳು, ಮತ್ತು ಪೇಯಿಂಗ್ ಗೆಸ್ಟ್ ನಿವಾಸಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ.

More articles

Latest article